ಶಿವಮೊಗ್ಗ

ಸಕ್ರೆಬೈಲು ಆನೆ ಶಿಬಿರ ಆಗಸ್ಟ್ 15ರಿಂದ ಪ್ರವಾಸಿಗರಿಗೆ ಮುಕ್ತ: ಹೊಸ ನಿಯಮಗಳೊಂದಿಗೆ ಪ್ರವೇಶಕ್ಕೆ ಸಿದ್ಧತೆ

ಶಿವಮೊಗ್ಗ: ಪ್ರವಾಸಿಗರ ಪ್ರವೇಶಕ್ಕೆ ಕಳೆದ ಎರಡು ತಿಂಗಳಿಂದ ನಿರ್ಬಂಧ ವಿಧಿಸಲಾಗಿದ್ದ ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರವನ್ನು ಆಗಸ್ಟ್ 15ರಿಂದ ಮತ್ತೆ ತೆರೆಯಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.

ಸರ್ಕಾರದ ಸುರಕ್ಷತಾ ಮಾರ್ಗಸೂಚಿಗಳ ಪ್ರಕಾರ ಶಿಬಿರದಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಹಿರಿಯ ಅಧಿಕಾರಿಗಳ ಅಂತಿಮ ಅನುಮತಿ ದೊರೆತ ಬಳಿಕ ಪ್ರವಾಸಿಗರಿಗೆ ಶಿಬಿರ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿದುಬಂದಿದೆ.

ಈ ಬಾರಿ ಪ್ರವಾಸಿಗರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಆನೆಗಳೊಂದಿಗೆ ನೇರ ಸಂಪರ್ಕಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಇದುವರೆಗೆ ಪ್ರವಾಸಿಗರು ಆನೆಗಳಿಗೆ ಸ್ನಾನ ಮಾಡಿಸುವುದು, ಆಹಾರ ನೀಡುವುದು, ಹತ್ತಿರ ಹೋಗಿ ಫೋಟೋ ತೆಗೆಯುವುದು ಹಾಗೂ ಆನೆಗಳಿಂದ ಆಶೀರ್ವಾದ ಪಡೆಯುವುದು ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಹೊಸ ನಿಯಮಗಳ ಪ್ರಕಾರ ಇಂತಹ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ.

ಪ್ರವಾಸಿಗರು ಮತ್ತು ಆನೆಗಳು ಒಂದೇ ಮಾರ್ಗದಲ್ಲಿ ಸಂಚರಿಸದಂತೆ ಪ್ರತ್ಯೇಕ ಮಾರ್ಗಗಳನ್ನು ಗುರುತಿಸಲಾಗಿದೆ. ಪ್ರವಾಸಿಗರಿಗಾಗಿ ಹಸಿರು ವಲಯ ಹಾಗೂ ಆನೆಗಳ ಓಡಾಟಕ್ಕಾಗಿ ಕೆಂಪು ವಲಯವನ್ನು ನಿಗದಿಪಡಿಸಲಾಗಿದೆ. ತುಂಗಾ ನದಿಯ ಹಿನ್ನೀರಿನಲ್ಲಿ ನಡೆಯುವ ಆನೆಗಳ ಸ್ನಾನವನ್ನು ಕೂಡ ಇನ್ನು ಮುಂದೆ ಪ್ರವಾಸಿಗರು ಸುರಕ್ಷಿತ ಅಂತರದಿಂದ ಮಾತ್ರ ವೀಕ್ಷಿಸಬೇಕಾಗುತ್ತದೆ.

ಗ್ಯಾಲರಿ ಪ್ರದೇಶದಲ್ಲೂ ಬದಲಾವಣೆ ಮಾಡಲಾಗಿದ್ದು, ಆನೆಗಳು ನಿಲ್ಲುವ ಸ್ಥಳ ಮತ್ತು ಪ್ರವಾಸಿಗರ ನಡುವೆ ಡಬಲ್ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ಇದರಿಂದ ಪ್ರವಾಸಿಗರು ಆನೆಗಳನ್ನು ದೂರದಿಂದಲೇ ವೀಕ್ಷಿಸಿ ಫೋಟೋ ತೆಗೆಯಬೇಕಾಗುತ್ತದೆ.

ಶಿಬಿರದ ಮೇಲ್ವಿಚಾರಣೆಗೆ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಇಲಾಖೆ ಮುಂದಾಗಿದೆ. ಈಗಿರುವ ಕ್ಯಾಮೆರಾಗಳ ಜೊತೆಗೆ ಹೊಸ ಕ್ಯಾಮೆರಾಗಳನ್ನು ಅಳವಡಿಸಿ, ಅವುಗಳ ನಿಗಾವಹಿಸಲು ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ನಿಯಮ ಉಲ್ಲಂಘನೆ ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳಲು ಈ ವ್ಯವಸ್ಥೆ ನೆರವಾಗಲಿದೆ.

ಪ್ರಸ್ತುತ ಸಕ್ರೆಬೈಲು ಆನೆ ಶಿಬಿರದಲ್ಲಿ 24 ಆನೆಗಳಿವೆ. ಆದರೆ ಪ್ರತಿದಿನ ಪ್ರವಾಸಿಗರ ವೀಕ್ಷಣೆಗೆ ಕೇವಲ 10 ಆರೋಗ್ಯವಂತ ಆನೆಗಳನ್ನು ಮಾತ್ರ ಕರೆತರಲು ನಿರ್ಧರಿಸಲಾಗಿದೆ. ಮಸ್ತಿನಲ್ಲಿರುವ ಅಥವಾ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಆನೆಗಳನ್ನು ಸಾರ್ವಜನಿಕರ ಸಂಪರ್ಕದಿಂದ ದೂರ ಇಡಲಾಗುತ್ತದೆ.

ಸಕ್ರೆಬೈಲು ಮಾದರಿಯಲ್ಲೇ ದುಬಾರೆ ಆನೆ ಶಿಬಿರದಲ್ಲೂ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಅಗತ್ಯ ಕಾಮಗಾರಿಗಳಿಗಾಗಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಸುರಕ್ಷತಾ ವ್ಯವಸ್ಥೆಗಳು ಪೂರ್ಣಗೊಂಡ ನಂತರವೇ ದುಬಾರೆ ಶಿಬಿರವನ್ನೂ ಪ್ರವಾಸಿಗರಿಗೆ ತೆರೆಯಲು ನಿರ್ಧರಿಸಲಾಗಿದೆ.

Leave a Comment