HOSANAGARA ಅಂಗನವಾಡಿ ಕಾರ‍್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಣೆ | ಅಂಗನವಾಡಿ ಕಾರ‍್ಯಕರ್ತೆಯರ ಬೇಡಿಕೆ ಈಡೇರಿಕೆಗೆ ಸರ್ಕಾರ ಬದ್ಧ ; ಶಾಸಕ ಬೇಳೂರು

Written by malnadtimes.com

Updated on:

HOSANAGARA | ಅಂಗನವಾಡಿ ಕಾರ‍್ಯಕರ್ತೆಯರು ಇತ್ತೀಚೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಅವರ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ (Beluru Gopalakrishna) ಹೇಳಿದರು.

WhatsApp Group Join Now
Telegram Group Join Now
Instagram Group Join Now

ಅಂಗನವಾಡಿ ಕಾರ‍್ಯಕರ್ತೆಯರ ಕೆಲಸ ಸುಲಭದ ಕೆಲಸವಲ್ಲ. ಮಕ್ಕಳ ಲಾಲನೆ ಪಾಲನೆ, ಅವರಿಗೆ ಅಕ್ಷರಾಭ್ಯಾಸದ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ ಕಾರ‍್ಯಕ್ರಮಗಳಲ್ಲಿಯೂ ಪಾಲ್ಗೊಳ್ಳಬೇಕಾಗಿದೆ. ಆದರೂ ಅವರಿಗೆ ಸೇವಾಭದ್ರತೆ ಇಲ್ಲದಂತಾಗಿದೆ. ಐವತ್ತು ವರ್ಷಗಳಿಂದಲೂ ಕೆಲಸ ನಿರ್ವಹಿಸುತ್ತಿರುವ ಅಂಗನವಾಡಿ ಕಾರ‍್ಯಕರ್ತೆಯರು ಹಾಗೂ ಅವರ ಸಹಾಯಕಿಯರಿಗೆ ಸೇವೆ ಖಾಯಂಗೊಳಿಸುವುದು ಹಾಗೂ ಪಿಂಚಣಿ ಯೋಜನೆ ಜಾರಿಗೆ ತರಬೇಕಿತ್ತು. ಆದರೆ ಈವರೆಗಿನ ಯಾವ ಸರ್ಕಾರಗಳೂ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

Read More :ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರೆದ ಭಾರಿ ವರ್ಷಧಾರೆ, ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?

ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸುವುದರಿಂದ ಅಂಗನವಾಡಿ ಕಾರ‍್ಯಕರ್ತೆಯರು ತಮ್ಮ ಕೆಲಸ ಕಳೆದುಕೊಳ್ಳಬಹುದೆಂಬ ಆತಂಕದಲ್ಲಿದ್ದಾರೆ. ಅಂಗನವಾಡಿ ಕಾರ‍್ಯಕರ್ತೆಯರಿಗೆ ಅನ್ಯಾಯವಾಗದಂತೆ ಸರ್ಕಾರ ಜವಾಬ್ದಾರಿಯುತವಾಗಿ ಕ್ರಮ ಕೈಗೊಳ್ಳಲಿದ್ದು, ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕರು ಹೇಳಿದರು.

ಇಂದು ಎಲ್ಲದಕ್ಕೂ ಆನ್‌ಲೈನ್ ವ್ಯವಸ್ಥೆ ಅನಿವಾರ‍್ಯವಾಗಿದೆ. ಅಂಗನವಾಡಿ ಕಾರ‍್ಯಕರ್ತೆಯರು ಸ್ಮಾರ್ಟ್ ಫೋನ್ ಹೊಂದುವುದರಿಂದ ಕೆಲಸ ಕಾರ‍್ಯಗಳಿಗೆ ವೇಗ ಸಿಗಲಿದೆ. ಇದನ್ನು ಮನಗಂಡು ರಾಜ್ಯ ಸರ್ಕಾರ ಸ್ಮಾರ್ಟ್‌ ಫೋನ್ ವಿತರಣೆ ಯೋಜನೆಗೆ ಮಹತ್ವ ನೀಡಿದೆ ಎಂದರು.

ಕೊರೋನಾ ಸಂದರ್ಭದಲ್ಲಿಯಂತೂ ನಿರಂತರ ಶ್ರಮ ವಹಿಸಿ ಕೆಲಸ ಮಾಡಿದ್ದ ಅಂಗನವಾಡಿ ಕಾರ‍್ಯಕರ್ತೆಯರಿಗೆ ಯಾವುದೇ ವಿಶೇಷ ಸೌಲಭ್ಯ ನೀಡಲಾಗಲಿಲ್ಲ. ಕೇವಲ ಕಿಟ್ ವಿತರಣೆಗೆ ಸೀಮಿತಗೊಳಿಸಲಾಯಿತು. ಅವರ ನಿರಂತರ ಸೇವೆಯನ್ನು ಗುರುತಿಸುವಲ್ಲಿ ಅಂದಿನ ಸರ್ಕಾರಗಳು ವಿಫಲವಾದವು ಎಂದು ಆಪಾದಿಸಿದರು.

ತಹಸೀಲ್ದಾರ್ ಎಚ್.ಜೆ.ರಶ್ಮಿ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಹಾಗೂ ಮಹಿಳೆಯರ ಕಲ್ಯಾಣಕ್ಕಾಗಿ ಇಲಾಖೆಯಿಂದ ವಿವಿಧ ಯೋಜನೆಗಳು ಲಭ್ಯವಿವೆ. ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಿಡಿಪಿಓ ಸುರೇಶ್ ಪ್ರಾಸ್ತಾವಿಕ ಮಾತನಾಡಿದರು.

ಸಿಪಿಐ ಗುರಣ್ಣ ಎಸ್ ಹೆಬ್ಬಾಳ್, ಅಂಗನವಾಡಿ ಕಾರ‍್ಯಕರ್ತೆಯರ ಒಕ್ಕೂಟದ ರಾಜ್ಯ ಸಂಚಾಲಕ ರವೀಂದ್ರ ಕಚೇರಿ ಅಧೀಕ್ಷಕ ರಾಜಣ್ಣ, ಮೇಲ್ವಿಚಾರಕಿಯರಾದ ವೀರಮ್ಮ ಎನ್.ದಿವ್ಯಾ, ಸುಜಾತಾ, ಮತ್ತಿತರರು ಇದ್ದರು.

Read More : Ganga kalyana ರೈತರಿಗೆ ಶುಭ ಸುದ್ದಿ ,ಗಂಗಾ ಕಲ್ಯಾಣ ಯೋಜನೆ 2024 ಅರ್ಜಿ ಅಹ್ವಾನ!

Leave a Comment