ಕುಗ್ರಾಮದಲ್ಲೊಂದು ಶಾಲೆ, ಒಬ್ಬರೇ ಶಿಕ್ಷಕ, 29 ವರ್ಷ ಸೇವೆ !

Written by malnadtimes.com

Published on:

RIPPONPETE | ವ್ಯಂಗ್ಯಚಿತ್ರಗಾರ ಮತ್ತು ಶಿಕ್ಷಕ ಏಕನಾಥ ಬೊಂಗಾಳೆ ಶಿಕ್ಷಕ (Teacher) ವೃತ್ತಿಯಿಂದ ಜೂ. 29 ರಂದು ನಿವೃತ್ತರಾದರು. ವ್ಯಂಗ್ಯಚಿತ್ರಗಾರರಾಗಿ ಕನ್ನಡ ಪತ್ರಿಕಾ ಓದುಗರಿಗೆ ಚಿರಪರಿಚಿತರಾದ ಏಕನಾಥ್ ಬೊಂಗಾಳೆ (Ekanath Bongale) ಶಿಕ್ಷಕರಾಗಿ ಹೆಚ್ಚು ಮಂದಿಗೆ ಪರಿಚಿತರಾಗಿಲ್ಲ.

WhatsApp Group Join Now
Telegram Group Join Now
Instagram Group Join Now

ಹಾವೇರಿ ಜಿಲ್ಹೆಯ ಹಿರೆಕೆರೂರಿನವರಾದ ಏಕನಾಥ ಬೊಂಗಾಳೆ 1995ನೇ ಇಸವಿಯಲ್ಲಿ ಮಲೆನಾಡಿನ ಕುಗ್ರಾಮವಾದ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ನೆಣೆಬಸ್ತಿಯ (ಏಕೋಪಾದ್ಯಾಯ) ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡರು. 29 ವರ್ಷಗಳೂ ನೆಣೆಬಸ್ತಿ ಶಾಲೆಯಲ್ಲಿಯೇ ಕಾರ್ಯನಿರ್ವಹಿಸಿ ಡ್ಯೂಟಿ ರಿಪೋರ್ಟ್ ಮಾಡಿಕೊಂಡ ಶಾಲೆಯಲ್ಲಿಯೇ ರಿಲೀವ್ ಆದರು.

ಗರ್ತಿಕೆರೆಗೆ ಸಮೀಪದ ನೇಣೆಬಸ್ತಿಗೆ ಇಂದಿಗೂ ವಾಹನ ಸಂಚಾರವಿಲ್ಲ. ತೀರ್ಥಹಳ್ಳಿ- ಸಾಗರ ರಸ್ತೆಯ ಸುಣ್ಣದಬಸ್ತಿಯಲ್ಲಿಳಿದು 4 ಕಿ.ಮೀ. ನಡೆದೇ ಶಾಲೆ ತಲುಪಬೇಕಾಗಿತ್ತು. ಗರ್ತಿಕೆರೆಯಲ್ಲಿ ಬಾಡಿಗೆ ಮನೆ ಹಿಡಿದು 6 ಕಿ.ಮೀ. ದೂರ ನಡೆದು ಶಾಲೆ ತಲುಪುತ್ತಿದ್ದರು. ಹಲವು ವರ್ಷಗಳ ಕಾಲ ನಡದೇ ಶಾಲೆಗೆ ಬರುತ್ತಿದ್ದ ಏಕನಾಥ್ ಮಾಸ್ತರು ಮುಂದಿನ ದಿನಗಳಲ್ಲಿ ಒಂದು ಸೈಕಲ್ ಖರೀದಿಸಿದರು. ಇತ್ತೀಚಿನ ವರ್ಷದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದಾರೆ.

ನೆಣೆಬಸ್ತಿ ಶಾಲೆಗೆ ಯಾರೂ ಮಾಸ್ತರಾಗಿ ಬರಲು ಒಪ್ಪದಿದ್ದ ಕಾಲದಲ್ಲಿ ಏಕನಾಥ ಮಾಸ್ತರು ಬಂದರು. ಏಕನಾಥ್ ಮನೆ ಮನೆ ತಿರುಗಿ ಮಕ್ಕಳನ್ನು ಕರೆತಂದು ಶಾಲೆಯ ಸ್ಟ್ರೆನ್ತ್ ಹೆಚ್ಚಿಸಿದರು. ಇಂದು ನೇಣೆಬಸ್ತಿ ಊರಿನ ಯುವಕರು ಉನ್ನತ ಶಿಕ್ಷಣ ಪಡೆದು, ಉದ್ಯೋಗ ಹಿಡಿದು ಬದುಕನ್ನು ಹಸನಾಗಿಸಿಕೊಂಡಿದ್ದರೆ ಅದರ ಹಿಂದೆ ಏಕನಾಥ ಬೊಂಗಾಳೆಯವರ ಹೋರಾಟ ಇದೆ. ಆ ದಿನಗಳಲ್ಲಿ ಬೊಂಗಾಳೆಯವರೇನಾದರೂ ವರ್ಗವಾಗಿದ್ದರೆ ಇಲ್ಲಿನ ಸರ್ಕಾರಿ ಶಾಲೆ ಮುಚ್ಚಿಯೇ ಬಿಡುತ್ತಿತ್ತೇನೊ.

ವೇತನ ಪಡೆಯುವ ವ್ಯಕ್ತಿಯ “ಕೆಲಸ” ವನ್ನು “ಸೇವೆ” ಎನ್ನಬಾರದಂತೆ. ಪಡೆದ ವೇತನಕ್ಕೆ ಇವರು ಕರ್ತವ್ಯ ” ನಿರ್ವಹಿಸಿರುತ್ತಾರೆ ಅಂತ ಕೆಲವರ ವಾದ. ಆದರೆ, ಬೊಂಗಾಳೆಯವರದ್ದು ಅಕ್ಷರಶಃ ಶಿಕ್ಷಣ ಸೇವೆ.! ಇಷ್ಟೂ ವರ್ಷಗಳೂ ತಮ್ಮ ಶಿಕ್ಷಕ ವೃತ್ತಿಯನ್ನು ಒಂದು ತಪಸ್ಸಿನಂತೆ ನಡೆಸಿಕೊಂಡು ಬಂದರು.

ನೆಣೆಬಸ್ತಿಯಲ್ಲಿ ಶ್ರೀಮಂತರೆಂಬುವ ಒಂದೇ ಒಂದೂ ಕುಟುಂಬವಿಲ್ಲ. ಎಲ್ಲರೂ ಸಣ್ಣ ರೈತರು ಮತ್ತು ಕೂಲಿ ಕಾರ್ಮಿಕರೇ. ಏಕನಾಥ್ ಮಾಸ್ತರು ಇಲ್ಲಿನ ಮನೆ ಮನೆಗಳ ಆತ್ಮೀಯರಾದರು. ಗ್ರಾಮ ವಾಸಿಗಳ ತುರ್ತು ಅಗತ್ಯಗಳೇನಾದರೂ ಇದ್ದರೆ ಮಾಸ್ತರ ಮೂಲಕ ತರಿಸಿಕೊಳ್ಳುತ್ತಿದ್ದರು. ನೆಣೆಬಸ್ತಿಯಲ್ಲಿ ಇಂದಿಗೂ ಮೊಬೈಲ್ ಸಿಗ್ನಲ್ ಇಲ್ಲ. ಶಾಲೆಯ ಮಾಸ್ತರರೇ ಅನೇಕರ ಸಂದೇಶ ವಾಹಕ ಆದರು. ಫೋನ್ ನಂಬರ್ ಕೊಟ್ಟು “ಮಾಸ್ತರೆ, ಇವರಿಗೆ ಫೋನ್ ಮಾಡಿ ವಿಷಯ ತಲುಪಿಸಿ” ಎಂದರಾಯಿತು.

ಅನಿವಾರ್ಯ ಸಂದರ್ಭಗಳ ಹೊರತಾಗಿ ಏಕನಾಥ ಬೊಂಗಾಳೆ ತಮ್ಮ ಖಾತೆಯ ರಜೆ ಬಳಸಿಕೊಳ್ಳಲಿಲ್ಲ. ಒಂದೇ ಒಂದು ವರ್ಷವೂ ತಮ್ಮ ಖಾತೆಯ ಎಲ್ಲಾ ರಜೆಗಳನ್ನು ಬಳಸಿಕೊಂಡಿದ್ದೇ ಇಲ್ಲ.

ಶಿಕ್ಷಕ ವೃತ್ತಿಗೆ ಬರುವ ಮೊದಲು ಕರ್ಮವೀರ ಪತ್ರಿಕೆಯಲ್ಲಿ ವಿನ್ಯಾಸಕಾರರಾಗಿ ಕೆಲಸ ಮಾಡಿದ್ದರು. ಆ ಕೆಲಸ ನಾಡಿನ ಅನೇಕ ಹಿರಿಯ ಲೇಖಕರ, ಪತ್ರಕರ್ತರ, ಅಧಿಕಾರಿಗಳ ಸಂಪರ್ಕ ಬೆಸೆದಿತ್ತು. ಇಲಾಖೆಯ ಹಿರಿಯ ಅಧಿಕಾರಿಗಳೂ, ಸಹೋದ್ಯೋಗಿಗಳೂ ವ್ಯಂಗ್ಯಚಿತ್ರಗಾರರಾದ ಬೊಂಗಾಳೆಯ ಬಗ್ಗೆ ಅಪಾರ ಗೌರವ ಹೊಂದಿದ್ದರು. ಈ ನಂಟನ್ನು ಬಳಸಿಕೊಂಡು ಬೊಂಗಾಳೆ ನಗರ-ಪಟ್ಟಣ ಪ್ರದೇಶಗಳಿಗೆ ಟ್ರಾನ್ಸಫರ್ ಪಡೆಯುವುದು ಕಷ್ಟವೇನಾಗಿರಲಿಲ್ಲ. ಬೊಂಗಾಳೆಯವರ ಆತ್ಮ ಗೌರವ ಯಾರ ಸಹಾಯವನ್ನೂ ಯಾಚಿಸಲು ಬಿಡಲಿಲ್ಲ.

ಕರ್ಮವೀರ ಪತ್ರಿಕೆಯಲ್ಲಿ ವಿನ್ಯಾಸಗಾರರಾಗಿದ್ದಾಗ ರವಿ ಬೆಳೆಗೆರೆಯವರ ನಿಕಟವರ್ತಿಗಳಾಗಿದ್ದರು. (ಆ ಸಮಯದಲ್ಲಿ ರವಿ ಬೆಳೆಗೆರೆಯವರೂ ಕರ್ಮವೀರದಲ್ಲಿ ಕೆಲಸ ಮಾಡುತ್ತಿದ್ದರು) ಬೊಂಗಾಳೆ ಮತ್ತು ಬೆಳೆಗೆರೆ ಬೈಟೂ ಚಹಾ ಗೆಳೆಯರು. ಮುಂದೆ ಬೆಳೆಗೆರೆಯವರು ಕರ್ಮವೀರ ಬಿಟ್ಟು ಬಂದು ಸ್ವಂತ ಪತ್ರಿಕೆ ಮಾಡಿದರು. ಆಗಾಗ ರವಿ ಬೆಳೆಗೆರೆ “ಹಾಯ್ ಬೆಂಗಳೂರು”ಗೆ ಬಂದು ಬಿಡು ಅಂತ ಬೊಂಗಾಳೆಯವರನ್ನು ಕರೆದದ್ದಿದೆ. ಬೊಂಗಾಳೆ ನಸು ನಗುತ್ತಲೇ ಅವರ ಆಹ್ವಾನವನ್ನು ತಿರಸ್ಕರಿಸಿದರು.

ವ್ಯಂಗ್ಯಚಿತ್ರಗಾರರಾಗಿ ಬೊಂಗಾಳೆ ತಮ್ಮದೇ ವಿಶೇಷ ಶೈಲಿ ರೂಢಿಸಿಕೊಂಡಿದ್ದಾರೆ. ಈವರೆಗೂ 30000 ಕ್ಕೂ ಅಧಿಕ ವ್ಯಂಗ್ಯಚಿತ್ರಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ವ್ಯಂಗ್ಯಚಿತ್ರ ಸಂಕಲನ “ಬೆಸ್ಟ್ ಆಫ್ ಬೊಂಗಾಳೆ” ವ್ಯಂಗ್ಯಚಿತ್ರಾಸಕ್ತರ ಪ್ರಶಂಸೆಗೆ ಪಾತ್ರವಾಗಿದೆ.

ಇಂತಹ ಏಕನಾಥ ಬೊಂಗಾಳೆ ಈ ದಿನ ವೃತ್ತಿಯಿಂದ ನಿವೃತ್ತರಾದರು. ನೆಣೆಬಸ್ತಿಯ ಜನ ಕಣ್ಣಲ್ಲಿ ನೀರು ತುಂಬಿಕೊಂಡು ಬೊಂಗಾಳೆಯವರನ್ನು ಬೀಳ್ಕೊಟ್ಟರು. ನಾಳೆಯಿಂದ ಈ ಮೇಷ್ಟ್ರು ನಮ್ಮ ಶಾಲೆಗೆ ಬರುವುದಿಲ್ಲ ಎಂಬುದನ್ನ ತಿಳಿಯದ ಪುಟಾಣಿಗಳು ಟಾಟಾ ಎಂದು ಬೀಳ್ಕೊಟ್ಟರು.

ಬರಹ : ನಟರಾಜ್ ಅರಳಸುರಳಿ

Malenadu Rain | ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟು ಮಳೆ ಸುರಿದಿದೆ ಗೊತ್ತಾ ?

Adike Price 07 ಜುಲೈ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ?

Leave a Comment