SHIVAMOGGA | ಶಿವಮೊಗ್ಗ ನಗರದಿಂದ-ಚೆನ್ನೈಗೆ ಸೂಪರ್ ಫಾಸ್ಟ್ ರೈಲು ಓಡಾಟ ನಿನ್ನೆಯಿಂದ ಆರಂಭವಾಗಿದೆ. ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಶನಿವಾರ ಸಂಜೆ 5 ಗಂಟೆಗೆ ಸಂಸದ ಬಿ.ವೈ.ರಾಘವೇಂದ್ರ ನೂತನ ರೈಲು ಓಡಾಟಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಭಾನುವಾರ ಬೆಳಗ್ಗೆ 4:55ಕ್ಕೆ ಈ ರೈಲು ಚೆನ್ನೈ ತಲುಪಲಿದೆ.
ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಶುಕ್ರವಾರ 11:30ಕ್ಕೆ ಹೊರಟಿರುವ ರೈಲು ಶನಿವಾರ ಮಧ್ಯಾಹ್ನ 12:20ಕ್ಕೆ ಶಿವಮೊಗ್ಗ ರೈಲು ನಿಲ್ದಾಣ ತಲುಪಲಿದೆ.
ಬಿವೈಆರ್ ಅಭಿನಂದನೆ :
ಶಿವಮೊಗ್ಗ ಜಿಲ್ಲೆಗೆ ಈಗಾಗಲೇ ಹಲವಾರು ನೂತನ ರೈಲುಗಳ ಸೇವೆಯನ್ನು ಒದಗಿಸಲಾಗಿದ್ದು, ಇದರ ಜೊತೆಗೆ ವಾರಕ್ಕೊಮ್ಮೆ ಇದೇ ಶನಿವಾರದಿಂದ ಶಿವಮೊಗ್ಗದಿಂದ ಚೆನೈಗೆ ಎಕ್ಸ್ಪ್ರೆಸ್ ರೈಲಿನ ಸೇವೆಯು ಪ್ರಾರಂಭಗೊಳ್ಳುತ್ತಿದೆ. ಸಂಜೆ 5:15ಕ್ಕೆ ಸದರಿ ಟ್ರೈನ್ಗೆ ಫ್ಲಾಗ್ ಆಪ್ ಮಾಡಲಾಗುವುದು. ಸಂಜೆ 4:15ರಿಂದ ಕಾರ್ಯಕ್ರಮ ಪ್ರಾರಂಭಗೊಳ್ಳುತ್ತದೆ. ದಯಮಾಡಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರುತ್ತೇನೆ ಎಂದು ಸಂಸದ ಬಿ.ವೈ. ರಾಘವೇಂದ್ರ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.
ಶನಿವಾರ ಸಂಜೆ 05:15ಕ್ಕೆ ಶಿವಮೊಗ್ಗ ಬಿಡುವ ಈ ರೈಲು ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸಿಕೆರೆ, ತಿಪಟೂರು, ತುಮಕೂರು, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಕೆ.ಆರ್.ಪುರಂ, ವೈಟ್ ಫೀಲ್ಸ್ ಬಂಗಾರಪೇಟೆ, ಕುಪ್ಪಂ, ಜೋಲಾರಪೇಟೆ, ಕಾಟಪಾಡಿ, ಸೋಲಿಂಗರ್, ಅರಕೋಣಂ, ಪೆರಂಬೂರು ಮಾರ್ಗವಾಗಿ ಭಾನುವಾರ ಬೆಳಿಗ್ಗೆ 04:55ಕ್ಕೆ ಚೆನ್ನೈ ತಲುಪುತ್ತದೆ ಹಾಗೂ ಭಾನುವಾರ ರಾತ್ರಿ 11:30ಕ್ಕೆ ಚೆನ್ನೈ ಬಿಡುವ ಈ ರೈಲು ಮಾರನೇ ದಿನ ಸೋಮವಾರ ಮಧ್ಯಾಹ್ನ 12:20ಕ್ಕೆ ಶಿವಮೊಗ್ಗ ತಲುಪುತ್ತದೆ.
ನರೇಂದ್ರ ಮೋದೀಜಿಯವರ 3.0 ಸರ್ಕಾರ ಪ್ರಾರಂಭಗೊಂಡ 1 ತಿಂಗಳೊಳಗೆ ನಮ್ಮ ಹಲವು ಬೇಡಿಕೆಗಳ ಸಕರಾತ್ಮಕವಾಗಿ ಸ್ಪಂದಿಸಿ ಪ್ರಪ್ರಥಮವಾಗಿ ಶಿವಮೊಗ್ಗ-ಚೆನ್ನೈ ನಡುವೆ ಹೊಸ ಎಕ್ಸ್ಪ್ರೆಸ್ ರೈಲನ್ನು ಮಂಜೂರು ಮಾಡಿರುವ ಕೇಂದ್ರ ಸರ್ಕಾರಕ್ಕೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದೀಜಿಯವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಮಹತ್ತರವಾದ ಕೊಡುಗೆಯನ್ನು ನೀಡಿದ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ನಮ್ಮ ರಾಜ್ಯದವರೇ ಆದ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣರವರಿಗೂ ಸಹ ಶಿವಮೊಗ್ಗ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಈಗಾಗಲೇ ಶಿವಮೊಗ್ಗ ಕ್ಷೇತ್ರದಲ್ಲಿ ನಡೆಯುತ್ತಿರುವ ಹಲವು ರೈಲ್ವೆ ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದರ ಜೊತೆಗೆ ಈಗಾಗಲೇ ಓಡಾಡುತ್ತಿರುವ ಕೆಲವು ರೈಲ್ವೆ ಸಮಯಗಳನ್ನು ಪ್ರಯಾಣಿಕರ ಹಿತದೃಷ್ಟಿಯಿಂದ ಬದಲಾವಣೆ ಮಾಡುವಂತೆ ವಿನಂತಿಸಲಾಗಿದೆ. ಆದಷ್ಟು ಬೇಗನೇ ನಮ್ಮ ಎಲ್ಲಾ ಬೇಡಿಕೆಗಳು ಪೂರ್ಣಗೊಳ್ಳುವ ವಿಶ್ವಾಸವಿದ್ದು, ಜನತೆ ರೈಲ್ವೆ ಯೋಜನೆಯ ಸದುಪಯೋಗವನ್ನು ಪಡಿಸಿಕೊಳ್ಳುವಂತೆ ಕೋರುತ್ತೇನೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.