HOSANAGARA | ಅತಿವೃಷ್ಠಿಯಿಂದ ಆಗಿರುವ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟದ ಕುರಿತು ಅಧಿಕಾರಿವರ್ಗ ವರದಿ ಸಲ್ಲಿಸಲಿದ್ದು, ಸರ್ಕಾರ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಹೇಳಿದರು.
ಹಾನಿಗೊಳಗಾದ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿದ ಬಳಿಕ ಅವರು ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಲೆನಾಡು ಭಾಗದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಈ ಕಾರಣದಿಂದ ಅಲ್ಲಲ್ಲಿ ಹಾನಿಯಾಗಿದೆ. ಕೃಷಿಕರು ಹಾಗೂ ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಹೆಚ್ಚು ಸಂಕಷ್ಟ ಉಂಟಾಗಿದೆ. ಈವರೆಗೆ ತಾಲೂಕಿನಲ್ಲಿ ಮಳೆಯಿಂದ 58 ಮನೆಗಳಿಗೆ ಹಾನಿಯಾಗಿದೆ. ಅಪಾರ ಪ್ರಮಾಣದಲ್ಲಿ ಗ್ರಾಮೀಣ ರಸ್ತೆಗೆ ಧಕ್ಕೆಯಾಗಿದೆ. ಹಾನಿಯ ವಿಸ್ತೃತ ವರದಿಯನ್ನು ಅಧಿಕಾರಿ ವರ್ಗ ತಯಾರಿಸುತ್ತಿದ್ದು, ಸರ್ಕಾರ ಸಂತ್ರಸ್ಥರ ನೆರವಿಗೆ ನಿಂತಿದೆ. ಶಾಸಕರು ವಿದೇಶದಿಂದ ಮರಳಿದ ಬಳಿಕ ಅಗತ್ಯ ಕಾರ್ಯಗಳಿಗೆ ಇನ್ನಷ್ಟು ಚುರುಕು ದೊರೆಯಲಿದೆ ಎಂದರು.
ಹೊಸನಗರ ಪಟ್ಟಣಕ್ಕೆ 110 ಕೆವಿ ವಿದ್ಯುತ್ ಸ್ಥಾವರ ಇಲ್ಲದಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಸ್ಥಾವರ ನಿರ್ಮಾಣಗೊಂಡಲ್ಲಿ ಮುಂದಿನ 25 ವರ್ಷಗಳಿಗೆ ವಿದ್ಯುತ್ ಸಮಸ್ಯೆ ನೀಗಲಿದೆ. ತ್ವರಿತಗತಿಯಲ್ಲಿ ವರದಿ ಸಲ್ಲಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸ್ವತಃ ಇಂಧನ ಮಂತ್ರಿಯವರಿಗೂ ನಾನು ಈ ಬಗ್ಗೆ ಪತ್ರ ಬರೆದಿದ್ದೇನೆ ಎಂದರು.
ಮುಳುಗಡೆ ಸಂತ್ರಸ್ಥರ ಸಮಸ್ಯೆ ಕುರಿತು ಅರಣ್ಯ ಸಚಿವರ ಜೊತೆ ಇತ್ತೀಚೆಗೆ ನಡೆಸಿದ ಚರ್ಚೆ ಆಶಾದಾಯಕವಾಗಿದೆ. ಪರಿಹಾರ ಭೂಮಿ ನಿಗದಿಯಾಗಿದ್ದ ಭೂಮಿಯ ಡಿನೋಟಿಫಿಕೇಶನ್ ಪ್ರಕ್ರಿಯೆಗೆ ಪೂರಕ ದಾಖಲೆಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲು ಸರ್ಕಾರ ಸಜ್ಜಾಗಿದೆ. ಅರಣ್ಯ ಹಕ್ಕು ಕಾಯಿದೆಯಡಿ ಹಕ್ಕು ಪತ್ರ ಪಡೆಯಲು 75 ವರ್ಷಗಳ ಬದಲಿಗೆ 25 ವರ್ಷಗಳ ವಾಸ ದೃಢೀಕರಣಕ್ಕೆ ಅವಕಾಶ ಕಲ್ಪಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಪ್ರದಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಟೌನ್ ಘಟಕದ ಅಧ್ಯಕ್ಷ ಕೆ.ಎಸ್.ಗುರುರಾಜ್, ಹಿರಿಯರಾದ ಬಿ.ಆರ್.ಪ್ರಭಾಕರ, ಕಳೂರು ಕೃಷ್ಣಮೂರ್ತಿ, ಶ್ರೀನಿವಾಸ್ ಕಾಮತ್, ರಾಜಮೂರ್ತಿ, ನರ‍್ಲೆ ಸ್ವಾಮಿ, ನಿತ್ಯಾನಂದ, ಪಟ್ಟಣ ಪಂಚಾಯತಿ ಸದಸ್ಯೆ ನೇತ್ರ ಸುಬ್ರಾಯಭಟ್, ಹೆಚ್.ಎಂ. ನಿತ್ಯಾನಂದ, ಎಂ.ಪಿ. ಸುರೇಶ, ನಸೀರ್, ಇಕ್ಬಾಲ್, ಜಯನಗರ ಗುರು, ಉಬೇದ್ ಮತ್ತಿತರರು ಇದ್ದರು.