HOSANAGARA | ಪರಿಶಿಷ್ಠ ಜನಾಂಗದವರಿಗೆ ಮೀಸಲಿಟ್ಟ ಕೋಟ್ಯಂತರ ರೂಪಾಯಿ ಹಣವನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗಪಡಿಸಿಕೊಂಡಿದೆ. ರಾಜ್ಯದಲ್ಲಿ ಅತ್ಯಂತ ಭ್ರಷ್ಠ ಸರ್ಕಾರವನ್ನು ನೋಡುವಂತಾಗಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.
ಇಲ್ಲಿನ ಗಾಯತ್ರಿ ಮಂದಿರದಲ್ಲಿ ಶನಿವಾರ ಬಿಜೆಪಿ ಪಕ್ಷದ ಮಂಡಲದ ವಿಶೇಷ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕುರಿತು ಜನರು ಇಟ್ಟ ವಿಶ್ವಾಸ ಸಂಪೂರ್ಣ ಹೊರಟು ಹೋಗಿದೆ. ಮೂಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ವೈಫಲ್ಯಗಳು ರಾಜ್ಯ ಸರಕಾರದ ಈವರೆಗಿನ ಸಾಧನೆಗಳಾಗಿವೆ. ಶಾಸಕರಿಗೆ ಅನುದಾನ ಬಿಡುಗಡೆಯಾಗದೇ, ಅಭಿವೃದ್ಧಿ ಕಾರ್ಯಗಳು ನಿಂತಿವೆ ಎಂದು ಟೀಕಿಸಿದರು.
ಬಿಜೆಪಿ ಪಕ್ಷ 16 ಕೋಟಿ ಸದಸ್ಯರನ್ನು ಹೊಂದಿರುವ ಪಕ್ಷವಾಗಿದ್ದು, ದೇಶ ಮೊದಲು ಎನ್ನುವ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕೇವಲ ಆಡಳಿತವನ್ನು ಪಡೆಯುವದಷ್ಟೇ ಪಕ್ಷದಗುರಿಯಲ್ಲ. ದೇಶದ ಅಭಿವೃದ್ಧಿ, ಜನಪರ ಸೇವೆಗೂ ಮಹತ್ವ ನೀಡಲಾಗಿದೆ. ಯಾವುದೇ ಪಕ್ಷ ಸತತ 3ನೇ ಬಾರಿಗೆ ಅಧಿಕಾರಕ್ಕೆ ಬರುವುದು ಸುಲಭದ ಮಾತಲ್ಲ. ಪಕ್ಷದಲ್ಲಿನ ಗಟ್ಟಿತನ, ಪ್ರಧಾನಿ ಮೋದಿಯವರ ಆಡಳಿತ ವೈಖರಿ, ಕಾರ್ಯಕರ್ತರ ಶ್ರಮದಿಂದ ಇದು ಸಾಧ್ಯವಾಗಿದೆ ಎಂದರು.
ರಾಜ್ಯ ಸರ್ಕಾರದ ವೈಫಲ್ಯತೆ, ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರ ಅನುಪಸ್ಥಿತಿ, ಹಾಗೂ ಹೊಸನಗರ ತಾಲೂಕಿಗೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆಗೆ ಹಕ್ಕೊತ್ತಾಯ ವಿಷಯಗಳ ಕುರಿತು ನಿರ್ಣಯ ಕೈಗೊಂಡು ಕಾರ್ಯಕಾರಣಿಯಲ್ಲಿ ಅನುಮೋದಿಸಲಾಯಿತು.
ಶಾಸಕರು ಕಾಣೆಯಾಗಿದ್ದಾರೆ ; ಆಲವಳ್ಳಿ ವೀರೇಶ್
ಕ್ಷೇತ್ರದಲ್ಲಿ ಡೆಂಗ್ಯೂ ಜ್ವರ ಕಾಡುತ್ತಿದೆ. ರಿಪ್ಪನ್‌ಪೇಟೆಯಲ್ಲಿ ಡೆಂಗ್ಯೂ ಜ್ವರದಿಂದ ಎರಡು ಸಾವಾಗಿದೆ. ಅತಿವೃಷ್ಠಿಯಿಂದ ಅಪಾರ ಪ್ರಮಾಣದ ವಿಕೋಪಗಳು ಸಂಭವಿಸಿವೆ. ಆದರೆ ಸಾಗರ-ಹೊಸನಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕ್ಷೇತ್ರದಿಂದ ಕಾಣೆಯಾಗಿದ್ದಾರೆ. ವಿದೇಶದಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ವಿಧಾನಸಭೆಯ ಅಧಿವೇಶನದ ಒಂದು ದಿನವೂ ಹಾಜರಾಗಿಲ್ಲ. ಜನರ ಪ್ರತಿನಿಧಿಯಾಗಿ ಅವರು ತಮ್ಮ ಕರ್ತವ್ಯ ಲೋಪ ಎಸಗಿದ್ದಾರೆ. ಬಿಜೆಪಿ ಪಕ್ಷ ಮುಂದಿನ ದಿನಗಳಲ್ಲಿ ಶಾಸಕರ ವಿರುದ್ಧ ಹೋರಾಟ ನಡೆಸಲಿದೆ ಎಂದು ಖಂಡನಾ ನಿರ್ಣಯವನ್ನು ಮಂಡಿಸಿದ ತಾಪಂ ಮಾಜಿ ಅಧ್ಯಕ್ಷ ಆಲವಳ್ಳಿ ವೀರೇಶ್, ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿದೆ ; ಎನ್.ಆರ್ ದೇವಾನಂದ್
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಬಿಜೆಪಿ ಸರ್ಕಾರದ ವಿರುದ್ಧ 40% ಕಮೀಶನ್ ಎಂದು ಆರೋಪಿಸಿಸುವುದರ ಜೊತೆಗೆ ರಾಜ್ಯ ಸರ್ಕಾರದ ವೈಪಲ್ಯದ ಬಗ್ಗೆ ಸುಳ್ಳು ಸುದ್ಧಿ ಹಬ್ಬಿಸಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು ಈಗ ಕಾಂಗ್ರೆಸ್ ಸರ್ಕಾರ ಭ್ರಷ್ಠ ಆಡಳಿತ ನಡೆಸುತ್ತಿದೆ ಮುಡಾ ಹಾಗೂ ವಾಲ್ಮೀಕಿ ಹಗರಣ ಯಾವುದು ನಡೆದಿಲ್ಲ ಎಂದು ಕರ್ನಾಟಕದ ಜನರಿಗೆ ಹೂ ಇಡುತ್ತಿದ್ದು ನಮ್ಮ ಹೋರಾಟ ಎಂದಿಗೂ ಕೈ ಬಿಡುವುದಿಲ್ಲ. ಕಾಂಗ್ರೆಸ್ ಪಕ್ಷದ ಭ್ರಷ್ಠಚಾರಕ್ಕೆ ಮುಕ್ತಿ ಹಾಡಲಿದ್ದೇವೆ ಎಂದು ಬಿಜೆಪಿಯ ಹಿರಿಯ ಮುಖಂಡ ಎನ್.ಆರ್. ದೇವಾನಂದ್ ಹೇಳಿದರು.
ಬಿಜೆಪಿ ಪಕ್ಷ ಕಾರ್ಯಕರ್ತರ ಆಶಾಕಿರಣವಾಗಿದೆ ; ಮತ್ತಿಮನೆ ಸುಬ್ರಹ್ಮಣ್ಯ
ಬಿಜೆಪಿ ಪಕ್ಷ ಬಿಜೆಪಿ ಕಾರ್ಯಕರ್ತರ ಆಶಾಕಿರಣವಾದ ಪಕ್ಷವಾಗಿದ್ದು ನಮ್ಮ ಪಕ್ಷಕ್ಕೆ ಕಾರ್ಯಕರ್ತರಿಂದ ಇಷ್ಟು ದೊಡ್ಡಮಟ್ಟಕ್ಕೆ ಬಿಜೆಪಿ ಪಕ್ಷ ಬೆಳೆದಿದ್ದು ಮೂರನೇ ಬಾರಿಗೆ ಕೇಂದ್ರದಲ್ಲಿ ಆಡಳಿತ ನಡೆಸಲು ಕಾರ್ಯಕರ್ತರ ಹಗಲಿರುಳು ಸೇವೆಯಿಂದ ಸಾದ್ಯವಾಗಿದೆ. ಮುಂದಿನ ದಿನದಲ್ಲಿ ಜಿಲ್ಲಾ ಪಂಚಾಯತಿ ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ನಮ್ಮ ಪಕ್ಷ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಮಂಡಲದ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ ಸಭೆಗೆ ತಿಳಿಸಿದರು.
ಮಂಡಲದ ಅಧ್ಯಕ್ಷ ಮತ್ತಿಮನೆ ಸುಬ್ರಮಣ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಎನ್.ಆರ್.ದೇವಾನಂದ್, ಮಾಜಿ ಶಾಸಕ ಬಿ.ಸ್ವಾಮಿರಾವ್, ಗಣಪತಿ ಬಿಳಗೋಡು, ಯುವರಾಜ್‌ಗೌಡ, ಉಮೇಶ್‌ಕಂಚುಗಾರ್, ಎಂ.ಎನ್.ಸುಧಾಕರ, ಎ.ವಿ.ಮಲ್ಲಿಕಾರ್ಜುನ, ಸತೀಶ ಕಾಲಸಸಿ, ನಾಗಾರ್ಜುನ ಸ್ವಾಮಿ, ಕೆ.ವಿ.ಕೃಷ್ಣಮೂರ್ತಿ, ಅಭಿಲಾಷ್, ಮಂಡಾನಿ ಮೋಹನ್, ಸತ್ಯನಾರಾಯಣ, ವಿಜಯಕುಮಾರ್ ಮಂಜುನಾಥ್ ಸಂಜೀವ, ಶಿವಕುಮಾರ್, ಎ.ಟಿ.ನಾಗರತ್ನಮ್ಮ, ನಾಗೇಂದ್ರಪ್ಪ ಮತ್ತಿತರರು ಇದ್ದರು.