HOSANAGARA | ಮಳೆ ಹಾನಿಯಿಂದ ಆಗಿರುವ ಅನಾಹುತಗಳ ವಿವರವನ್ನು ಸಕಾಲದಲ್ಲಿ ನೀಡದಿದ್ದಲ್ಲಿ, ಅದಕ್ಕೆ ಅಧಿಕಾರಿಗಳೇ ಹೊಣೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ (Beluru Gopalakrishna) ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಳೆಹಾನಿ ಕುರಿತು ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ಈಚೆಗೆ ಈ ಪ್ರಮಾಣದ ಮಳೆ ಸುರಿದಿರಲಿಲ್ಲ. ಅಪಾರ ಪ್ರಮಾಣದ ಹಾನಿಯಾಗಿದೆ. ಅಧಿಕಾರಿಗಳು ಸಂತ್ರಸ್ಥರಿಗೆ ಮನಸ್ಥೈರ್ಯ ತುಂಬುವ ಜೊತೆಗೆ ಹಾನಿಯ ವಿವರವನ್ನು ತಾಲೂಕು ಹಂತಕ್ಕೆ ತಕ್ಷಣದಲ್ಲಿಯೇ ಕಳುಹಿಸಬೇಕು. ಮನೆ ಕಳೆದುಕೊಂಡವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ತಕ್ಷಣದಲ್ಲಿ 10 ಸಾವಿರರೂ. ಪರಿಹಾರ ಒದಗಿಸಬೇಕು. ಯಾವುದೇ ಇಲಾಖೆ ಸಿಬ್ಬಂದಿ ಮಳೆಹಾನಿ ವಿಷಯದಲ್ಲಿ ತಾತ್ಸಾರ ಭಾವನೆ ತೋರಿದಲ್ಲಿ ಸಹಿಸಲು ಸಾಧ್ಯವಿಲ್ಲ. ಅಂತಹ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಮನೆ ಹಾನಿಗೊಳಗಾದ ಪ್ರಕರಣಗಳಲ್ಲಿ ಅನಧಿಕೃತ ಮನೆಗಳಿಗೂ ಪರಿಹಾರ ದೊರೆಯುವ ನಿಟ್ಟಿನಲ್ಲಿ ಸರಕಾರ ನಿಯಮಗಳನ್ನು ಸಡಿಲಿಸಿದೆ. ನಿರಾಶ್ರಿತರಾದಲ್ಲಿ ಪಾತ್ರೆ ಹಾಗೂ ಬಟ್ಟೆ ಕೊಳ್ಳುವ ಉದ್ದೇಶದಿಂದ 5 ಸಾವಿರ ರೂ.ಗಳನ್ನು ನೀಡಲು ಸರಕಾರ ಸುತ್ತೋಲೆ ಹೊರಡಿಸಿದೆ. ಸಮಸ್ಯೆಯಲ್ಲಿ ಸಿಲುಕಿರುವ ಯಾರೊಬ್ಬರಿಗೂ ತೊಂದರೆ ಆಗದಂತೆ ವ್ಯವಸ್ಥೆ ಕೈಗೊಳ್ಳಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ ಎಂದರು.
ತಾಲೂಕಿನಲ್ಲಿ ವಾಡಿಕೆಗಿಂತ ಶೇ.20ರಷ್ಟು ಹೆಚ್ಚುವರಿ ಮಳೆಯಾಗಿದೆ. ಕೃಷಿ ಜಮೀನುಗಳು ಹಾಳಾಗಿರುವ ಪ್ರಕರಣಗಳು ಕಂಡುಬಂದಿವೆ. ಅಡಿಕೆ ತೋಟದಲ್ಲಿ ಕೊಳೆ ರೋಗ ಕಾಣಿಸಿಕೊಂಡಿದೆ ಎಂದು ಕೃಷಿ ಹಾಗೂ ತೋಟಕಾರಿಕಾ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಗಾಳಿ ಮಳೆ ಕಾರಣಕ್ಕೆತಾಲೂಕು ವ್ಯಾಪ್ತಿಯಲ್ಲಿ 500 ವಿದ್ಯುತ್ ಕಂಬಗಳು ತುಂಡಾಗಿವೆ. 43 ಪರಿವರ್ತಕಗಳು ಹಾಳಾಗಿವೆ. ಒಟ್ಟಾರೆ 2.40 ಕೋಟಿ ರೂ. ನಷ್ಟ ಉಂಟಾಗಿದೆ. ವ್ಯತ್ಯಯ ಉಂಟಾಗಿರುವಲ್ಲಿ ಬಹುತೇಕ ಸಮಸ್ಯೆ ಸರಿಪಡಿಸಲಾಗಿದ್ದು, ಸಂಪರ್ಕ ಪುನರ್ ಕಲ್ಪಿಸಲಾಗಿದೆ ಎಂದು ಮೆಸ್ಕಾಂ ಎಇಇ ಚಂದ್ರಶೇಖರ್ ತಿಳಿಸಿದರು.
ಸಭೆಯಲ್ಲಿ ತಹಸೀಲ್ದಾರ್ ರಶ್ಮಿ ಎಚ್.ಜೆ., ತಾಪಂ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ವ್ಯವಸ್ಥಾಪಕ ಶಿವಕುಮಾರ್, ಬಿಇಓ ಎಚ್.ಆರ್.ಕೃಷ್ಣಮೂರ್ತಿ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜುನಾಥ್, ಸರ್ಕಲ್ ಇನ್ಸ್ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ಹಾಗೂ ತಾಲ್ಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತಿತರರು ಇದ್ದರು.