HOSANAGARA ; ಮಲೆನಾಡು ಭಾಗದ ಶಕ್ತಿದೇವತೆ ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಸ್ಥಾನದಲ್ಲಿ ಸೆ.17ರಿಂದ ಆರಂಭಗೊಳ್ಳಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಬಿ.ಸ್ವಾಮಿರಾವ್ ತಿಳಿಸಿದರು.
ಅವರು ಕೋಡೂರು ಸಮೀಪದ ಅಮ್ಮನಘಟ್ಟದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಮಲೆನಾಡು ಭಾಗದ ಜನರು ತಮ್ಮ ಬೆಳೆಗಳನ್ನು ಸಮರ್ಪಿಸುವ ಮೂಲಕ ಪ್ರತಿವರ್ಷ ಅಮ್ಮನಘಟ್ಟದಲ್ಲಿ ಹರಕೆ ಸಲ್ಲಿಸುತ್ತಾರೆ. ಸೆ.16ರಂದು ಹಳೆ ಅಮ್ಮನಘಟ್ಟದಲ್ಲಿ ಕಂಕಣ ಕಟ್ಟುವ ಮೂಲಕ ಜಾತ್ರೆಗೆ ಚಾಲನೆ ದೊರೆಯಲಿದೆ. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಜಾತ್ರೆ ನಡೆಯಲಿದ್ದು, ನವರಾತ್ರಿಯಲ್ಲಿ ಪ್ರತಿದಿನವೂ ವಿಶೇಷ ಪೂಜೆ, ಉತ್ಸವ, ಅನ್ನಸಂತರ್ಪಣೆ ನಡೆಯಲಿದೆ. ವಿಜಯದಶಮಿಯಂದು ಚಂಡಿಕಾಹೋಮ ಆಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ದೇವಸ್ಥಾನಕ್ಕೆ ನೂತನ ಶಿಲಾಮಯ ದೇವಸ್ಥಾನ ನಿರ್ಮಿಸುವ ಕಾರ್ಯ ನಡೆಯುತ್ತಿದೆ. ದಾನಿಗಳು, ಭಕ್ತಾದಿಗಳ ಸಹಕಾರದಿಂದ ಕೋಟ್ಯಂತರ ರೂ. ಕಾಮಗಾರಿ ನಡೆದಿದೆ. ಆಗಮಿಸುವ ಭಕ್ತಾದಿಗಳಿಗೆ ಸಮಸ್ಯೆ ಉಂಟಾಗದಂತೆ ತಾತ್ಕಾಲಿಕ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದರು.
ಅನುದಾನ ಬಿಡುಗಡೆಯಾಗಿಲ್ಲ:
ನೂತನ ದೇಗುಲ ಕಟ್ಟಡಕ್ಕೆ ಸುಮಾರು 5 ಕೋಟಿ ರೂ. ಅಗತ್ಯವಾಗಿದ್ದು, ಈಗಾಗಲೇ 1 ಕೋಟಿಯಷ್ಟು ಮೊತ್ತದ ಕಾಮಗಾರಿಗಳು ನಡೆದಿವೆ. ಆದರೆ ಮುಜರಾಯಿ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರನ್ನು ಖುದ್ದು ಭೇಟಿಯಾಗಿದ್ದು, ಅನುದಾನ ಬಿಡುಗಡೆ ಆಗುವ ವಿಶ್ವಾಸವಿದೆ. ಆದರೆ ಹಿಂದಿನ ವ್ಯವಸ್ಥಾಪನಾ ಸಮಿತಿಯವರು ಕಟ್ಟಡ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಿದ 16 ಲಕ್ಷ ರೂ.ಗಳನ್ನು ಅನದಿಕೃತವಾಗಿ ತಮ್ಮ ಬಳಿ ಇಟ್ಟುಕೊಂಡಿದ್ದು, ಕಟ್ಟಡ ನಿರ್ಮಾಣ ಕಾರ್ಯಕ್ಕೆ ನೀಡುತ್ತಿಲ್ಲ. ಭಕ್ತಾದಿಗಳ ದೇಣಿಗೆ ಹಣವನ್ನು ನಿಯಮಬಾಹಿರವಾಗಿ ಇಟ್ಟುಕೊಳ್ಳುವುದು ಸರಿಯಲ್ಲ. ಇದು ಹೀಗೆಯೇ ಮುಂದುವರೆದರೆ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದರು.
ಇದಲ್ಲದೇ ವಿಶೇಷ ಅನುದಾನವಾಗಿ ಸರ್ಕಾರದಿಂದ 50 ಲಕ್ಷ ರೂ., ಸರ್ಕಾರದ ಖಜಾನೆಯಲ್ಲಿರುವ ದೇವಸ್ಥಾನಕ್ಕೆ ಸಂಬಂಧಿಸಿದ 10 ಲಕ್ಷ ರೂ. ಸಹಾ ಬಿಡುಗಡೆಯಾಗಿಲ್ಲ. ಹಣ ನಿಗದಿತ ಸಮಯದಲ್ಲಿ ಬಿಡುಗಡೆಯಾಗಿದ್ದರೆ, ಕಟ್ಟಡ ನಿರ್ಮಾಣ ಕಾರ್ಯ ಈ ವೇಳೆಗಾಗಲೇ ಮುಕ್ತಾಯಗೊಳ್ಳುತ್ತಿತ್ತು ಎಂದು ಅಸಮಧಾನ ವ್ಯಕ್ತಪಡಿಸಿದರು.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ಎಲ್ ಸುಧೀರ್, ಪುಟ್ಟಪ್ಪ, ಭಾಸ್ಕರ್ ಜೋಯ್ಸ್, ಕಟ್ಟಡ ಸಮಿತಿ ಸದಸ್ಯರಾದ ವಿಜೇಂದ್ರ ಭಟ್ ಮತ್ತಿತರರು ಇದ್ದರು.