HOSANAGARA ; ಇತ್ತೀಚಿಗೆ ಎಲ್.ಬಿ & ಎಸ್.ಬಿ.ಎಸ್. ಕಾಲೇಜಿನ ಇತಿಹಾಸ ಉಪನ್ಯಾಸಕರಾದ ನವೀನ ಜಿ ಆಚಾರ್ಯ ವರಕೋಡು ಇವರು ಕಳೂರು ಭಾಗದಲ್ಲಿ ಕ್ಷೇತ್ರಕಾರ್ಯ ಕೈಗೊಂಡಾಗ ಕ್ರಿ.ಶ. 9ನೇ ಶತಮಾನದ ರಾಷ್ಟ್ರಕೂಟರ ಕಾಲದ ಗೋಸಾಸ ಶಾಸನ ಪತ್ತೆಮಾಡಿರುತ್ತಾರೆ.
ಈ ಶಿಲ್ಪವನ್ನು ಎಸ್,ಎಂ,ಎಸ್,ಎಫ್,ಸಿ ಹೊನ್ನಾಳಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್ ದೊಡ್ಡಗೌಡ್ರು ಇವರು ಅರ್ಥೈಸುವಲ್ಲಿ ಸಹಕರಿಸುತ್ತಾರೆ.
ಹೊಸನಗರ ತಾಲೂಕು ಕೇಂದ್ರದಿಂದ ಪಶ್ಚಿಮ ದಿಕ್ಕಿಗೆ 2 ಕಿ.ಮೀ. ದೂರದಲ್ಲಿ ಕಳೂರು ಗ್ರಾಮ ಕಂಡುಬರುತ್ತದೆ. ಈ ಗ್ರಾಮದ ನಿವಾಸಿಯಾದ ಸತೀಶ್ಚಂದ್ರ ಬಿನ್ ಸೀನಪ್ಪ ಶೆಟ್ಟಿ ಎಂಬುವರಿಗೆ ಸೇರಿದ ಜಾಗದಲ್ಲಿ ಕ್ರಿ.ಶ. 9ನೇ ಶತಮಾನಕ್ಕೆ ಸೇರಿದ ರಾಷ್ಟ್ರಕೂಟರ ಗೋಸಾಸ ಶಿಲೆ ಪತ್ತೆಯಾಗಿದೆ. ಈ ಶಾಸನ ಲಭ್ಯತೆಯು ಹೋಸನಗರ ತಾಲೂಕಿನಲ್ಲಿ ರಾಷ್ಟ್ರಕೂಟರ ಆಳ್ವಿಕೆ ನಡೆಸಿದ್ದರ ಮೇಲೆ ಬೆಳಕು ಚೆಲ್ಲುತ್ತದೆ. ಈ ಗೋಸಾಸ ಶಿಲೆಯು 3 ಅಡಿ 5 ಇಂಚು ಎತ್ತರ,10 ಇಂಚು ದಪ್ಪ, 1 ಅಡಿ 5 ಇಂಚು ಅಗಲವನ್ನು ಹೊಂದಿದೆ. ಈ ಶಿಲೆಯ ಮೇಲ್ಭಾಗದಲ್ಲಿ ಪೂರ್ಣ ಕುಂಭಕಳಸವಿದ್ದು, ಮಧ್ಯ ಭಾಗದಲ್ಲಿ ಶಿವಲಿಂಗ ಸೂರ್ಯ, ಚಂದ್ರ, ಕೆಳಪಟ್ಟಿಕೆಯಲ್ಲಿ ಹಸು ಕರುವಿಗೆ ಹಾಲು ಕುಡಿಸುವಂತೆ ಕೆತ್ತನೆಯನ್ನು ಮಾಡಲಾಗಿದೆ. ಹೊಸನಗರದಲ್ಲಿ ಕಂಡು ಬಂದ ಅತ್ಯಂತ ವಿರಳ ಮತ್ತು ಅಪರೂಪದ ಶಾಸನವಾಗಿದೆ.
ಗೋ ಸಹಸ್ರ ಸಂಸ್ಕೃತ ಪದದ ತದ್ಭವ ರೂಪ ಗೋಸಾಸವಾಗಿದೆ. ಈ ಮಾದರಿಯ ಶಾಸನ ಗೋವುಗಳನ್ನು ದಾನ ನೀಡಿದಾಗ ನಿಲ್ಲಿಸಿದ ಶಾಸನಗಳಾಗಿವೆ. ಇದನ್ನು ಗೋಸಾಸ ಶಾಸನ ಎಂದು ಕರೆಯಲಾಗಿದೆ. ಇದು ದಾನ ಶಾಸನಗಳಲ್ಲಿ ಒಂದು ಪ್ರಕಾರವೇ ಆದರೂ ಸಂಖ್ಯೆ, ಕಾಲ, ಭೌಗೋಳಿಕತೆ ಇತ್ಯಾದಿ ದೃಷ್ಠಿಕೋನಗಳಿಂದ ಇವುಗಳನ್ನು ಪ್ರತ್ಯೇಕ ಪ್ರಕಾರಗಳೆಂದು ಪರಿಗಣಿಸಲಾಗುತ್ತದೆ.
ಈ ಮಾದರಿಯ ಶಿಲ್ಪಗಳು ಬೀಜಾಪುರ, ಬೆಳಗಾವಿ, ಧಾರವಾಡ, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ಲಭ್ಯವಾಗಿರುವುದನ್ನು ಗುರುತಿಸಬಹುದು.
ಗೋಸಾಸ ಶಿಲ್ಪಗಳ ಪೈಕಿ ಬಹುತೇಕ ಶಿಲ್ಪಗಳಲ್ಲಿ ಶಾಸನ ಇಲ್ಲದೇ ಇರುವುದು ಇವುಗಳ ಅಧ್ಯಯನಕ್ಕೆ ಒಂದು ಮುಖ್ಯ ತೋಡಕಾಗಿದೆ ಆದರೆ ಇವುಗಳು ಗ್ರಾಮದಲ್ಲಿ ನೆಡೆದ ಗೋದಾನವನ್ನು ಸೂಚಿಸುತ್ತದೆ. ಇಂತಹ ಗೋಸಾಸ ಶಿಲ್ಪಗಳ ಸಮೂಹ ಕಂಡುಬಂದಲ್ಲಿ ಗೋ ಸಹಸ್ರ ದಾನ ಒಂದು ನಿರಂತರ ಆಚರಣೆಯಾಗಿತ್ತು ಎಂದು ಅಭಿಪ್ರಾಯಿಸಬಹುದು. ಶಿಲ್ಪಗಳ ಮೇಲಿರುವ ಪೂರ್ಣಕುಂಭ ಅಭಿವೃಧ್ದಿಯ ಸಂಕೇತವಾಗಿದೆ. ಈ ರೀತಿಯ ಶಿಲ್ಪಗಳು ಅತ್ಯಂತ ವಿರಳವಾಗಿದ್ದರಿಂದ ಇತಿಹಾಸದ ಪುಟಗಳಲ್ಲಿ ಅತ್ಯಂತ ಮಹತ್ವವೆನಿಸುತ್ತದೆ.
ಈ ಕ್ಷೇತ್ರ ಕಾರ್ಯದಲ್ಲಿ ಇತಿಹಾಸ ಉಪನ್ಯಾಸಕರಾದ ಸಂತೋಷ ಎನ್ ಇವರು ಸಹಕರಿಸಿದ್ದರು.