HOSANAGARA ; ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಕಾರ್ಯಕಾರಣಿ ಸಭೆಯ ನಿರ್ಣಯದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಲೇಖನಿ ಕೆಳಗಿಟ್ಟು, ಮೊಬೈಲ್ ಆಪ್ ಮತ್ತು ವೆಬ್ ಕಾರ್ಯ ಸ್ಥಗಿತಗೊಳಿಸಿ ಗುರುವಾರ ಇಲ್ಲಿನ ತಾಲೂಕು ಕಚೇರಿ ಎದುರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕೈಗೆ ಕಪ್ಪು ಪಟ್ಟಿ ಧರಿಸಿ ಸಿಬ್ಬಂದಿಗಳು ಮುಂದಾದರು.
ಗ್ರಾಮ ಆಡಳಿತ ಅಧಿಕಾರಿ ಸಂಘದ ತಾಲೂಕು ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ, ಕಂದಾಯ ಇಲಾಖೆಯ ಎಲ್ಲಾ ವೆಬ್ ಮೊಬೈಲ್ ತಂತ್ರಾಂಶಗಳಾದ ಸಂಯೋಜನೆ, ಇ-ಆಫೀಸ್, ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗೈರ್ ಹುಕಂ, ಹಕ್ಕುಪತ್ರ, ಭೂಮಿ ಸೇರಿದಂತೆ 20 ಕ್ಕೂ ಹೆಚ್ಚು ತಂತ್ರಾಶಗಳ ಕಚೇರಿ ಕಾರ್ಯ ನಿರ್ವಹಿಸಿಲು ಸೂಕ್ತ ಮೊಬೈಲ್, ಸೇರಿದಂತೆ ಸರ್ಕಾರ ಈವರೆಗೆ ಆಧುನಿಕ ಉಪಕರಣಗಳನ್ನು ನೀಡಿಲ್ಲ. ಇದು ಸರಿಯಾಗಿ ಕಾರ್ಯ ನಿರ್ವಹಿಸಲು ಆಗದೆ ಸಮಸ್ಯೆಗಳ ಸೃಷ್ಠಿಗೆ ಕಾರಣವಾಗಿದೆ.
ಮಲೆನಾಡು ಭಾಗದಲ್ಲಿ ವಿಪರೀತ ಸರ್ವರ್ ವೈಫಲ್ಯ ಹಾಗು ಹವಾಮಾನ ವೈಪರೀತ್ಯವು ಕಾರ್ಯ ನಿರ್ವಹಣೆಗೆ ತೊಡಕಾಗಿದೆ. ಈ ಎಲ್ಲಾ ಕಾರಣಗಳಿಂದ ಸಿ-ವೃಂದದ ನೌಕರರ ಹತ್ತು ಪಟ್ಟು ಹೆಚ್ಚುವರಿ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗೆ ನೀಡುವ ಸಮನಾದ ವೇತನ ಶ್ರೇಣಿ ನಿಗದಿ ಪಡಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು.
ಸೇವಾ ವಿಷಯಗಳಿಗೆ ಸೂಕ್ತ ಸೌಲಭ್ಯಗಳಾದ
ಸುಸಜ್ಜಿತ ಕಚೇರಿ, ಉತ್ತಮ ಪರಿಕರಗಳು, ಸಿಯುಜಿ ಸಿಮ್, ಡಾಟ ಹೊಂದಿರುವ ಮೊಬೈಲ್ ಪೋನ್, ಗೂಗಲ್ ಕ್ರೋಮ್ ಬುಕ್, ಟಾಪ್, ಪ್ರಿಂಟರ್, ಸ್ಕ್ಯಾನರ್ ನೀಡಬೇಕೆಂದು ಆಗ್ರಹಿಸಿದರು.
ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ಮೊಬೈಲ್ ತಂತ್ರಾಂಶಗಳ ಕಾರಣ ಆಗಿರುವ ಎಲ್ಲಾ ಸಿಬ್ಬಂದಿಗಳ ಅನುಮಾತನ್ನು ತಕ್ಷಣವೇ ರದ್ದು ಪಡಿಸಬೇಕು, ಕೆಸಿಎಸ್ಆರ್ ನಿಯಮದಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕದಿರಲು, ಮೆಮೋ ಹಾಕುವ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು. ಅಂತರ್ ಜಿಲ್ಲಾ ವರ್ಗಾವಣೆ ಕೆಸಿಎಸ್ಆರ್ ನಿಯಮ 16ಎ ರ ಉಪಖಂಡ(2)ನ್ನು ಮರುಸ್ಥಾಪಿಸಬೇಕು. ಅನಾರೋಗ್ಯ, ಅನಿವಾರ್ಯ, ವಿಶೇಷ ಚೇತನ ಸಂದರ್ಭದಲ್ಲಿ ನಿಯೋಜನೆಯನ್ನು ಕೌನ್ಸಿಲಿಂಗ್ ಮೂಲಕ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.
ಹಲವು ವರ್ಷಗಳಿಂದ ದೂರ ಊರುಗಳಲ್ಲಿ ಸೇವಾನಿರತ ಸಿಬ್ಬಂದಿಗಳ ಅನುಕೂಲಕ್ಕಾಗಿ ಕೂಡಲೇ ಅಂತರ್ ಜಿಲ್ಲಾ ವರ್ಗಾವಣೆ ಪ್ರಕರಣಗಳಿಗೆ ಚಾಲನೆ ನೀಡುವ ಮೂಲಕ ಸಿಬ್ಬಂದಿಗಳ ಹಿತ ಕಾಪಾಡಬೇಕೆಂದು ಗ್ರಾಮ ಆಡಳಿತ ಅಧಿಕಾರಿ ಜಾಗೃತಿ ಸರ್ಕಾರಕ್ಕೆ ಮನವಿ ಮಾಡಿದರು.
ರೇಣುಕಯ್ಯ ಮಾತನಾಡಿ, ಇತ್ತೀಚಿನ ಮೊಬೈಲ್ ಆಪ್ ಬಳಕೆಯಿಂದ ಸಿಬ್ಬಂದಿಗಳು ತೀವ್ರ ಒತ್ತಡದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ. ಇದು ಸಿಬ್ಬಂದಿಗಳ ವಿವಿಧ ಕಾಯಿಲೆಗಳಿಂದ ಬಳಲುವಂತಾಗಿದೆ. ಮೊಬೈಲ್ ಆಪ್ ಕೈಬಿಟ್ಟು ಸೂಕ್ತ ಕಾಲಾವಕಾಶ ನೀಡಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡುವಂತೆ ಒತ್ತಾಯಿಸಿದರು. ಇಂದಿನ ಸಾಂಕೇತಿಕ ಪ್ರತಿಭಟನೆಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ರಾಜ್ಯಮಟ್ಟದ ಹೋರಾಟ ನಡೆಸುವ ಎಚ್ಚರಿಕೆಯನ್ನು ಸಂಘ ನೀಡಿತು.
ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷೆ ಶೋಭಾ, ಉಪಾಧ್ಯಕ್ಷ ಜಿ.ಎಸ್. ಯೋಗೀಶ್, ಕಾರ್ಯದರ್ಶಿ ಸಿದ್ದಪ್ಪ ಚೂರೇರ, ಖಜಾಂಚಿ ಸುನಿಲ್ ದೇವಾಡಿಗ, ಸಿಬ್ಬಂದಿಗಳಾದ ದೀಪು, ಆರ್.ಪಿ.ಸುರೇಶ್, ಜಾಹೀರ್ ಹುಸೇನ್, ಇಂದಿರಾ, ಕೌಶಿಕ್, ಬಾಳೆಕೊಪ್ಪ ನಾಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.