HOSANAGARA ; ಕೆಲವು ರಾಜಕೀಯ ಸ್ಥಿತ್ಯಂತರ ನಡುವೆ ಕೊನೆಗೂ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡ ಶಾಸಕ ಬಿ.ವೈ. ವಿಜಯೇಂದ್ರ ಅವರ ವಿರುದ್ದ ಇಂದಿಗೂ ಅವರದೇ ಪಕ್ಷದ ಕೆಲವು ಹಿರಿಯ ನಾಯಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿ ಚುಕ್ಕಾಣಿ ಹಿಡಿದಿರುವುದು ಬಿಜೆಪಿ ಪಕ್ಷದ ಕೆಲವು ಹಿರಿಯ ನಾಯಕರಿಗೆ ತೃಪ್ತಿ ತಂದಿಲ್ಲ. ಹಾಗಾಗಿ ಏನಾದರು ಮಾಡಿ ಅವರನ್ನು ರಾಜ್ಯಾಧ್ಯಕ್ಷ ಪಟ್ಟದಿಂದ ಕೆಳಗಿಳಿಸುವ ಹುನ್ನಾರ ನಿರಂತರವಾಗಿ ನಡೆದೇ ಇದೆ. ತಮ್ಮಲ್ಲಿಯೇ ಓರ್ವ ಸಮರ್ಥ ನಾಯಕನನ್ನು ಅಧ್ಯಕ್ಷನಾಗಿ ಮಾಡುವ ಒಳ ಒಪ್ಪಂದ ಪಕ್ಷ ಅತೃಪ್ತ ಬಣದ್ದಾಗಿದೆ ಎಂದು ರಾಜ್ಯ ಅರಣ್ಯ ಕೈಗಾರಿಕೆ ಅಭಿವೃದಿ ನಿಗಮದ ಅಧ್ಯಕ್ಷ, ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಬೇಳೂರು, ಶಾಸಕ ವಿಜಯೇಂದ್ರ ಓರ್ವ ಭ್ರಷ್ಟ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್ ವ್ಯಕ್ತಿ ಎಂಬ ಶಾಸಕ ಯತ್ನಾಳ್ ಅವರ ಇತ್ತೀಚಿನ ಹೇಳಿಕೆ ಇದನ್ನು ಪುಷ್ಟಿಕರಿಸುತ್ತದೆ. ಹಾಗಾಗಿ ಅವರ ವಿರೋಧಿ ಪಡೆಗಳು ಅಲ್ಲಲ್ಲಿ ಗುಪ್ತ ಸಭೆಗಳನ್ನು ನಡೆಸಿ, ಮಾಜಿ ಉಪ ಮುಖ್ಯಮಂತ್ರಿ, ಹಿಂದುತ್ವವಾದಿ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಬೇಕು. ಪಕ್ಷ ಕಟ್ಟಿ ಬೆಳೆಸಿದ ಈಶ್ವರಪ್ಪ ಅವರಂತ ಹಿರಿಯ ನಾಯಕನನ್ನು ಏಕಾಏಕಿ ಪಕ್ಷದಿಂದ ಉಚ್ಚಾಟಿಸಿದ್ದು ಅಕ್ಷಮ್ಯ ಎಂಬ ನಿಲುವು ಹೊಂದಿದ್ದು, ಇದು ವಿರೋಧಿಗಳು ಅಧ್ಯಕ್ಷ ವಿಜಯೇಂದ್ರ ವಿರುದ್ಧ ಕಿಡಿಕಾರಲು ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಈ ಸಂಗತಿ ನುಂಗಲಾರದ ತುತ್ತಾಗಿ ಪರಿಣಮಿಸಲೂಬಹುದು. ಎಂಬಂತೆ ಕಂಡುಬರುತ್ತಿದೆ ಎಂಬುದಾಗಿ ಅವರು ಭವಿಷ್ಯ ನುಡಿದರು.
ರಾಜ್ಯ ಸರ್ಕಾರ ದೇವಸ್ಥಾನಗಳ ಅಭಿವೃದ್ಧಿಗಾಗಿ ರೂ 25 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದು ಕ್ಷೇತ್ರದ ಸಾಗರ – ಹೊಸನಗರ ತಾಲೂಕುಗಳ ಸುಮಾರು 97 ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳಿಗೆ 4 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ದೇವಾಲಯಗಳ ಅಗತ್ಯಕ್ಕೆ ಅನುಸಾರವಾಗಿ ಹಣ ನೀಡಿದ್ದು, ಭಕ್ತಾದಿಗಳ ನಿರೀಕ್ಷೆಯನ್ನು ಪೂರೈಸಿದ ಸಂತೃಪ್ತಿ ತಮಗಿದೆ ಎಂದರು.