HOSANAGARA ; ಜಾತಿ, ಮತ ಹಾಗೂ ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸುವ ಕಾರ್ಯ ಬಿಜೆಪಿ ಪಕ್ಷ ಮಾಡುತ್ತಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.
ಅವರು ಇಲ್ಲಿನ ಗಾಂಧಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ದೇಶದ ಸಮಗ್ರತೆ, ಐಕ್ಯತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಿದ್ದಾಂತಗಳು ದೇಶದ ಸಂವಿಧಾನವನ್ನೇ ಬದಲಿಸುವುದನ್ನು ಗುರಿಯಾಗಿಸಿಕೊಂಡಿವೆ. ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಜನರ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಕಾರ್ಯ ಬಿಜೆಪಿ ಮಾಡುತ್ತಿದೆ. ಇದು ದೇಶದ ಅಭಿವೃದ್ಧಿಗೆ ಮಾರಕ.
ಯಾವುದೇ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆ, ಯೋಜನೆ, ದೇಶದ ಪ್ರಗತಿಗಾಗಿ ಕೈಗೊಳ್ಳುವ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗಬೇಕೇ ಹೊರತು, ದ್ವೇಷ ಭಾವನೆ ಬಿತ್ತುವುದು ಸರಿಯಲ್ಲ ಎಂದರು.
ಆರಗ ಜೊತೆ ಮುಕ್ತ ಚರ್ಚೆಗೆ ಸಿದ್ದ :
ರಾಜ್ಯದಲ್ಲಿ ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಬಸವರಾಜ್ ಯತ್ನಾಳ್ ಮೊದಲಾದ ಬಿಜೆಪಿ ನಾಯಕರಿಗೆ ಮುಸ್ಲಿಂ ಸಮುದಾಯವನ್ನು ಬೈಯುವುದೇ ಕೆಲಸವಾಗಿದೆ. ಈ ಮೂಲಕ ಪಕ್ಷದಲ್ಲಿ ತಮ್ಮ ಹಿಡಿತವನ್ನು ಬಲಪಡಿಸಿಕೊಳ್ಳುವುದಷ್ಟೇ ಇವರ ಉದ್ದೇಶ. ಬಿಜೆಪಿ ಸಿದ್ದಾಂತ ದೇಶದ ಸಮಗ್ರತೆಗೆ ಮಾರಕ ಎನ್ನುವುದನ್ನು ನಾನು ಪ್ರತಿಪಾದಿಸಲು ಮಾಧ್ಯಮಗಳು ವೇದಿಕೆ ಕಲ್ಪಿಸಿದಲ್ಲಿ ಶಾಸಕ ಆರಗ ಜ್ಞಾನೇಂದ್ರ ಜೊತೆ ಮುಕ್ತವಾಗಿ ಚರ್ಚೆ ಮಾಡಲು ಸಿದ್ದ ಎಂದು ಅವರು ಸವಾಲು ಹಾಕಿದರು.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/14oyykwhUc/
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಇತ್ತೀಚೆಗೆ ಅರಣ್ಯ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತನಿಗೆ ಸಾರಾಯಿ ಅಂಗಡಿ ತೆರೆಯಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿರುವುದು ನಾಚಿಕೆಗೇಡಿನ ಸಂಗತಿ. ಐದು ಬಾರಿ ಶಾಸಕರಾದ ಅನುಭವ ಹೊಂದಿರುವ ಇವರು ತಮ್ಮ ಪ್ರತಿಭಟನೆ ಮೂಲಕ ಜನತೆಗೆ ಏನು ಸಂದೇಶ ನೀಡಲು ಹೊರಟಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಹರಿಹಾಯ್ದರು.
ಬಿಜೆಪಿಯೇ ಕಾರಣ :
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ವಕ್ಫ್ ವಿವಾದ ರಾಜ್ಯದಲ್ಲಿ ಉಂಟಾಗಲು ಬಿಜೆಪಿಯೇ ಕಾರಣ. ಅವರ ಅಧಿಕಾರಾವಧಿಯಲ್ಲಿ ಅಧಿವೇಶನದಲ್ಲಿಯೇ ವಕ್ಫ್ ಆಸ್ತಿ ವಿವರ ಮಂಡಿಸಲಾಗಿತ್ತು. ಆ ಸಮಯದಲ್ಲಿ ಮೌನವಾಗಿದ್ದ ಬಿಜೆಪಿ ಈಗ ಉಪಚುನಾವಣೆ ಸಮಯದಲ್ಲಿ ಅದನ್ನು ರಾಜಕೀಯ ದಾಳವಾಗಿಸಿಕೊಂಡಿದೆ. ಆದರೆ ವಕ್ಫ್ ವಿವಾದದ ಕುರಿತು ವಿಮರ್ಶೆ ಆಗಬೇಕು. ಕಾನೂನಾತ್ಮಕವಾಗಿ ಚರ್ಚೆ ಆಗಬೇಕು ಎಂದರು.
ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಜಿಲ್ಲಾ ಕಾರ್ಯದರ್ಶಿ ಬಿ.ಆರ್.ಪ್ರಭಾಕರ, ಟೌನ್ ಘಟಕದ ಅಧ್ಯಕ್ಷ ಕೆ.ಎಸ್.ಗುರುರಾಜ್, ಪ್ರಮುಖರಾದ ಶ್ರೀನಿವಾಸ ಕಾಮತ್, ಮಹಾಬಲರಾವ್, ಬಿ.ಜಿ.ನಾಗರಾಜ್, ಎಂ.ಪಿ.ಸುರೇಶ್, ಜಯನಗರಗುರು, ಚನ್ನಬಸಪ್ಪ, ಇಕ್ಬಾಲ್ ಚಂದ್ರಮೂರ್ತಿ ಮತ್ತಿತರರು ಇದ್ದರು.