ಕುಪ್ಪಗಡ್ಡೆಯಲ್ಲಿ ವಿಜೃಂಭಣೆಯಿಂದ ಜರುಗಿದ ಹೋರಿ ಹಬ್ಬ

Written by malnadtimes.com

Updated on:

SORABA ; ಮಿಂಚಿನ ಓಟ ಓಡುತ್ತಿದ್ದ ಹೋರಿಗಳು, ಬಲ ಪ್ರದರ್ಶನ ತೋರಲು ಮುಂದಾಗಿದ್ದ ಪೈಲ್ವಾನರು. ಹೋರಿ ಪ್ರೀಯರ ಹರ್ಷೋದ್ಗಾರದ ನಡುವೆ ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಜನಪದ ಕ್ರೀಡೆ ರಾಜ್ಯ ಮಟ್ಟದ ಹೋರಿ ಬೆದರಿಸುವ ಹಬ್ಬ ಸೋಮವಾರ ವಿಜೃಂಭಣೆಯಿಂದ ಜರುಗಿತು.

WhatsApp Group Join Now
Telegram Group Join Now
Instagram Group Join Now

ಹೋರಿ ಹಬ್ಬಕ್ಕೆ ಚಾಲನೆ ನೀಡಿದ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಲ್.ಜಿ. ರಾಜಶೇಖರ ಕುಪ್ಪಗಡ್ಡೆ ಮಾತನಾಡಿ, ಜನಪದ ಕ್ರೀಡೆ ಹೋರಿ ಹಬ್ಬವನ್ನು ಉಳಿಸಿ ಬೆಳೆಸಬೇಕು. ಕಮಿಟಿಯ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಹೋರಿ ಮಾಲೀಕರಿಗೆ ತಿಳಿಸಿದರು.

ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1GiUVgTbPc/

ಮಲೆನಾಡು ಹಾಗೂ ಬಯಲುಸೀಮೆ ಭಾಗದ ಹಬ್ಬವಾಗಿರುವ ಜನಪದ ಕ್ರೀಡೆ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬದ ಅಖಾಡದಲ್ಲಿ ಯಾರ ಕೈಗೂ ಸಿಗದಂತೆ ಓಡುತ್ತಿರುವ ಹೋರಿಗಳನ್ನು ಕಣ್ತುಂಬಿಕೊಳ್ಳಲು ತಾಲೂಕು ಸೇರಿದಂತೆ ನೆರೆಯ ಜಿಲ್ಲೆಗಳಿಂದ ಸಾವಿರಾರು ಹೋರಿ ಹಬ್ಬದ ಅಭಿಮಾನಿಗಳು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಶರವೇಗದಲ್ಲಿ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರಲ್ಲಿ ಮೈನವಿರೇಳಿಸಿತು.

ಹೋರಿಗಳ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಟೇಪು, ಬಲೂನುಗಳು ಮತ್ತು ಒಣ ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಕೊಬ್ಬರಿ ಹೋರಿ, ಆ್ಯಕ್ಷನ್ ಹೋರಿ, ಪೀಪಿ ಹೋರಿ ಹೀಗೆ ವಿವಿಧ ರೀತಿಯಲ್ಲಿ ಹೋರಿಗಳನ್ನು ವಿಂಗಡಿಸಿ ಓಡಿಸಲಾಯಿತು.

ಅಖಾಡದಲ್ಲಿ ಹಂಸಭಾವಿಯ ಕರ್ನಾಟಕ ನಂದಿ, ಹರಗಿ ವಾರಸ್ದಾರ ಅಕ್ಕಿಆಲೂರಿನ ಹೈಸ್ಪೀಡ್ ಪೈಲ್ವಾನ್, ಸಮನವಳ್ಳಿ ಹಠವಾದಿ, ಕುಬಟೂರು ರಾಜಹಂಸ, ಮಲ್ಲಿಗೇನಳ್ಳಿ ಶ್ರೀನಂದಿ, ಬಾಚಿಯ ಹಿಂದೂ ಸಾಮ್ರಾಟ, ಇಜಾರಿಲಕಮಾಪುರದ ಕೋಟಿಗೊಬ್ಬ, ನರಸಾಪುರ ಕಿಂಗ್, ಹಿಮ್ಮಡಿ ಪುಲಕೇಶಿ, ಆನವಟ್ಟಿ ಮಲೆನಾಡ ದಂಗೆ, ಹಿರೇಮಾಗಡಿ ಮಾಣಿಕ್ಯ, ಇಜಾರಿಲಕಮಾಪುರದ ಭರ್ಜರಿ, ಚಿಕ್ಕಮಾಕೊಪ್ಪದ ದೊಡ್ಮನೆ ಚಿನ್ನ, ಕೆಡಿಎಂ ಕಿಂಗ್, ಗೆಜ್ಜೆಹಳ್ಳಿ ಎನ್‍ಕೌಂಟರ್, ಆನವಟ್ಟಿ ಯುವರತ್ನ, ಮರೂರು ತಾರಕಾಸುರ, ಹಾವೇರಿಯ ನಾಯಕನ ಅಧಿಕಾರ, ಸೊರಬದ ರಾವಣ, ಚಿಕ್ಕಾವಲಿ ನಾಗ, ಸಾರೆಕೊಪ್ಪದ ಸುನಾಮಿ, ಕುಪ್ಪಗಡ್ಡೆ ಗ್ರಾಮದ ಹೋರಿಗಳಾದ ಪವರ್ ಸ್ಟಾರ್, ಯಜಮಾನ, ಸೂಪರ್ ಸ್ಟಾರ್, ಕಾಲಭೈರವ, ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು. ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು. ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದವು.

ವಿಶೇಷವಾಗಿ ಹಂಸಭಾವಿಯ ಕರ್ನಾಟಕ ನಂದಿ ಹೆಸರಿನ ಹೋರಿಯು 140ಬಾರಿ ಅಖಾಡದಲ್ಲಿ ಓಟ ನಡೆಸಿದ್ದು, ಹೋರಿ ಆಗಮಿಸುತ್ತಿದ್ದಂತೆ ಹೋರಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲಪ್ರದರ್ಶನ ತೋರಿದ ಪೈಲ್ವಾನರನ್ನು ಸಮಿತಿ ವತಿಯಿಂದ ಗುರುತಿಸಲಾಯಿತು. ಅಖಾಡದ ಎರಡು ಬದಿಯಲ್ಲಿ ಬೇಲಿ ನಿರ್ಮಿಸಿ, ಒಂದೊಂದೆ ಹೋರಿಗಳನ್ನು ಓಡಿಸುವ ಮೂಲಕ ಸಮಿತಿಯವರು ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ್ದರು.

Leave a Comment