RIPPONPETE ; ಖಾಸಗಿಯವರು ಒತ್ತುವರಿ ಮಾಡಬಾರದ ಉದ್ದೇಶದಿಂದಾಗಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಕಾಯ್ದಿರಿಸಲಾದ 5 ಎಕರೆ ಜಾಗವನ್ನು ಪೋಡಿ ಮಾಡುವ ಮೂಲಕ ಪೆನ್ನಿಂಗ್ (ಬೇಲಿ) ಅಳವಡಿಸಿ ಮುಂದಿನ ದಿನಗಳಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸುವ ಮೂಲಕ ಈ ಆಸ್ಪತ್ರೆಯನ್ನು ಸಮುದಾಯ ಅರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗುವುದೆಂದು ಶಾಸಕ, ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿದರು.
ರಿಪ್ಪನ್‌ಪೇಟೆಯ ಹೊಸನಗರ ರಸ್ತೆಯ ಗವಟೂರು ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಾಯ್ದಿರಿಸಲಾಗಿರುವ ಜಾಗದಲ್ಲಿ ಸರ್ಕಾರದಿಂದ 30 ಲಕ್ಷ ರೂ. ವೆಚ್ಚದ ಬೇಲಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೇರವೆರಸಿ ಮಾತನಾಡಿ, ಯಡೆಹಳ್ಳಿಯಿಂದ ರಿಪ್ಪನ್‌ಪೇಟೆಗೆ ಸುಮಾರು 8 ಕಿ.ಮೀ. ರಾಜ್ಯ ಹೆದ್ದಾರಿಯನ್ನು ಅಗಲೀಕರಣಗೊಳಿಸಿ ರಸ್ತೆ ನಿರ್ಮಿಸಲು 20 ಕೋಟಿ ರೂ. ಹಣ ಬಿಡುಗಡೆಯಾಗಿದ್ದು ಟೆಂಡರ್ ಸಹ ಮುಗಿದಿದ್ದು ಅತಿಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಅಲ್ಲದೆ ಹೊಸನಗರ-ಶಿವಮೊಗ್ಗ ಸಂಪರ್ಕದ ವಿನಾಯಕ ವೃತ್ತದಲ್ಲಿದ್ದ ತಲಾ ಒಂದು ಕಿ.ಮೀ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ದಿಪಡಿಸಲು ಈಗಾಗಲೇ ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದ್ದು ವಿನಾಯಕ ವೃತ್ತದಲ್ಲಿ ಹೈಮಾಸ್ಟ್ ದೀಪವನ್ನು ಅಳವಡಿಸುವುದಾಗಿ ತಿಳಿಸಿದರು.
ಉಳಿದಂತೆ ಅಭಿವೃದ್ದಿ ಕಾಮಗಾರಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತರುವುದಾಗಿ ತಿಳಿಸಿ ಈಗಾಗಲೇ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಮಾರು 94 ದೇವಸ್ಥಾನಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯವರು ಈ ಅನುದಾನದಡಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯವನ್ನು ಮಾಡಿಸಿಕೊಳ್ಳುವಂತೆ ಸಮಿತಿಯವರಿಗೆ ತಿಳಿಸಿದರು.
ಈ ಸಂದರ್ಭ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಜಿ.ಪಂ.ಮಾಜಿ ಸದಸ್ಯ ಬಂಡಿ ರಾಮಚಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಅಮ್ಮಿರ್‌ಹಂಜಾ, ಪರಮೇಶ, ಗ್ರಾಮ ಪಂಚಾಯ್ತಿ ಸದಸ್ಯರಾದ ಎನ್.ಚಂದ್ರೇಶ್, ಡಿ.ಈ.ಮಧುಸೂದನ್, ಮಂಜುಳಾ, ಜಿ.ಡಿ.ಮಲ್ಲಿಕಾರ್ಜುನ, ಗಣಪತಿ ಗವಟೂರು, ಅನುಪಮ ರಾಕೇಶ್, ಪ್ರಕಾಶ್ ಪಾಲೇಕರ್, ಹಾಲಸ್ವಾಮಿಗೌಡ ಬೆಳಕೋಡು, ದಿವಾಕರ್, ರಾಜುಗೌಡ, ಉಲ್ಲಾಸ ತೆಂಕೋಲ, ಮಹಮದ್‌ಷರೀಫ್, ಶ್ರೀಧರ ಇನ್ನಿತರು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.