HOSANAGARA ; ಮಾನವರು ದೇವರು ಎಂಬ ಭಕ್ತಿಯ ನಂಬಿಕೆಗೆ ಪೂರಕವಾದಂತೆ ಪೃಥ್ವಿಯಲ್ಲಿ ಪ್ರಕೃತಿ ಪ್ರಾಣಿ ಪಕ್ಷಗಳು ಸಹಸ್ರಾರು ಜೀವರಾಶಿಗಳನ್ನ ಕಾಣಬಹುದು. ಇಂತಹ ಪೃಥ್ವಿಯ ಸೃಷ್ಟಿಗೆ ಕಾರಣೀಭೂತರಾದ ಶಿವ, ಪಾರ್ವತಿಯರು ಈ ಭೂಮಿಯಲ್ಲಿ ಹಲವು ಅವತಾರವನ್ನೆತ್ತಿರುವ ಐತಿಹಾಸಿಕ ಹಿನ್ನಲೆಗಳಿವೆ. ಒಂದೊಂದೆಡೆ ಒಂದೊಂದು ರೀತಿಯಲ್ಲಿ ಅವತಾರವನ್ನು ತಾಳಿರುವ ಕುರುಹುಗಳಿವೆ. ಈರೀತಿಯ ಹಲವು ಅವತಾರವೆತ್ತಿ ದುಷ್ಟಶಕ್ತಿಗಳನ್ನ ನಾಶಪಡಿಸಿದ ಶಕ್ತಿ ದೇವರು ಅಥವಾ ದೇವತೆಗಳಿಗೆ ವಿವಿಧ ಸ್ಥಳಗಳಲ್ಲಿ ವಿವಿಧ ರೀತಿಯ ಹೆಸರಿನಲ್ಲಿ ಭಕ್ತಿ ಭಾವದಿಂದ ಪೂಜಿಸಲಾಗುತ್ತಿದೆ. ಈ ರೀತಿ ಪೂಜಿಸಲ್ಪಡುವ ದೇವತೆಗಳಲ್ಲೊಂದಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕಾಳಿಕಾಪುರದ ಕಾಳಿಕಾಂಬ ದೇವಸ್ಥಾನವು ಒಂದಾಗಿದೆ.
ಹೊಸನಗರ ತಾಲ್ಲೂಕಿನ, ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಿಕಾಪುರ ಗ್ರಾಮದಲ್ಲಿ ತಾಯಿ ಕಾಳಿಕಾಂಬೆಯು ನೆಲೆ ನಿಂತಿದ್ದು, ಇಲ್ಲಿನ ಹಿನ್ನಲೆಯನ್ನ ಗಮನಿಸಿದರೆ, ಆದಿಶಕ್ತಿಯು, ಕಾಳಿಯಾಗಿ ರಕ್ತ ಬೀಜಾಸುರನೊಂದಿಗೆ ಯುದ್ಧ ಮಾಡಿ ಜಯಶೀಲೆಯಾದ ನಂತರ ದಣಿವಾರಿಸಿಕೊಳ್ಳಲು ಇಲ್ಲಿ ಬಂದು ವಿಶ್ರಾಂತಿ ಪಡೆದು ಇಲ್ಲಿನ ಸುಂದರ ಪ್ರಕೃತಿಯಲ್ಲಿ ಶಾಂತಿ ಕಂಡದ್ದರಿಂದ ಇಲ್ಲಯೇ ನೆಲೆಯೂರಿದ್ದರಿಂದ ಈ ಸ್ಥಳಕ್ಕೆ ಕಾಳಿಕಾಪುರವೆಂದು ಹೆಸರು ಬಂದಿದೆ ಎಂಬುದು ಸ್ಥಳೀಯರಿಂದ ತಿಳಿದು ಬಂದಿದೆ. ಅಂದು ದೇವಿಗೆ ತಪಸ್ವಿಯೋರ್ವರಿಂದ ಚಿಕ್ಕ ದೇವಸ್ಥಾನ ನಿರ್ಮಿಸಿ ದೇವಿಗೆ ಪೂಜಿಸಲಾಗುತ್ತಿತ್ತು ಎನ್ನಲಾಗಿದ್ದು, ಈ ದೇವಸ್ಥಾನಕ್ಕೆ ಸಂಬಂಧಿಸಿದ ಚಿನ್ನ, ಬೆಳ್ಳಿ ಸೇರಿದಂತೆ ಅನೇಕ ಒಡವೆ ವೈಡೂರ್ಯಗಳಿದ್ದು, ಮಂಗಳ ಕಾರ್ಯಗಳಿಗೆ ಬೇಡಿಬರುವ ಭಕ್ತರಿಗೆ ಮಾಲನೂರು ಕೆರೆ ಮೂಲಕ ನೀಡಿ ಮರಳಿ ಪಡೆದುಕೊಳ್ಳುವ ಪ್ರತೀತಿ ಇದ್ದಂಥಾ ಸಮಯದಲ್ಲಿ ಮಂಗಳ ಕಾರ್ಯಮಕ್ಕೆ ಪಡೆದ ಒಡವೆಯನ್ನು ಮರಳಿ ನೀಡುವ ವೇಳೆ ನಕಲಿ ಒಡವೆಗಳನ್ನ ನೀಡಿದ್ದರಿಂದ ಆ ನಕಲಿ ಒಡವೆಗಳು ನೀರಿನಲ್ಲೇ ಮುಳುಗಿ ಅದೃಷ್ಯವಾದವು ಎಂಬ ಮಾತು ಕೇಳಿಬರುತ್ತಿದೆ. ಕಾಲಾನಂತರ ದೇವಾಲಯವು ನಶಿಸಿ ಹೋಗುತ್ತಿರುವುದನ್ನು ಗಮನಿಸಿದ ಕೆಳದಿ ಶಿವಪ್ಪನಾಯಕ ಪುನರ್ ನಿರ್ಮಾಣ ಮಾಡಿಸಿ ಪೂಜೆಗೆ ಜೈನಮುನಿಯೊಬ್ಬರನ್ನು ನೇಮಿಸಲಾಗಿತ್ತು ಎಂದು ತಿಳಿಯಲಾಗಿದೆ.
ಇತಿಹಾಸವನ್ನು ಕೆದಕುತ್ತಾ ಹೋದಂತೆ ಈ ಸ್ಥಳದಲ್ಲಿ ಅಶ್ವಮೇಧಯಾಗ ಸೇರಿದಂತೆ ಹತ್ತು ಹಲವು ಯಜ್ಞಯಾಗಗಳು ನಡೆದಿದ್ದು, ಗ್ರಾಮಕ್ಕೆ ಹೊಂದಿಕೊಂಡಿರುವ ಮಸಗಲ್ಲಿ, ಕಂಕಳಲೆ, ಭೀಮನಕೆರೆ ಇವೆಲ್ಲಾದಕ್ಕೂ ಇತಿಹಾಸವಿದ್ದು, ಯುದ್ಧ ಮಾಡಲು ಕತ್ತಿ ಮಸೆಯುತ್ತಿದ್ದರಿಂದ ಮಸಗಲ್ಲಿಯಂತಲೂ, ರಣಕಹಳೆ ಊದಿದ ಸ್ಥಳವಾಗಿದ್ದರಿಂದ ಕಂಕಳಲೆ ಎಂತಲೂ, ಯುದ್ದದಲ್ಲಿ ಜಯಿಸಲು ಕಾಳಿಕಾಪುರ ಎಂತಲೂ, ಭೀಮನಿಗೆ ಬಾಯಾರಿಕೆಯನ್ನು ಹೋಗಲಾಡಿಸಲು ಭೀಮನು ತನ್ನ ಗದೆಯಿಂದ ಭೂಮಿಯನ್ನು ಒಂದೇ ಬಾರಿ ಅಗೆದ ಕಾರಣ ನೀರು ದೊರಕಿದ್ದರಿಂದ ಭೀಮನಕೆರೆ ಎಂತಲೂ ಕರೆಯಲಾಗುತ್ತಿದ್ದು, ಅಷ್ಟಮಂಗಲ ಪ್ರಶ್ನಾ ಭಾಗದಿಂದ ಬ್ರಹ್ಮ ಎಂಬ ಸನ್ಯಾಸಿಯೂ ಈ ದೇವಿಯನ್ನು ಪೂಜಿಸುತ್ತಾ ಇಲ್ಲಿಯೇ ಐಕ್ಯಾವಾಗಿದ್ದ ಕಾರಣ ಇಲ್ಲಿ ಸನ್ಯಾಸಿ ಬ್ರಹ್ಮನ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ದೇವಾಲಯವು ಶಿಥಿಲಾವಸ್ಥೆಯಲ್ಲಿದ್ದಾಗ ಹಲವು ಗ್ರಾಮದ ಗ್ರಾಮಸ್ಥರಿಂದ ಅನೇಕ ಭಕ್ತವೃಂದದಿಂದ ದೇಣಿಗೆ ಪಡೆದು ನೂತನ ದೇವಾಲಯವನ್ನು ನಿರ್ಮಿಸಿ 2000ರ ಮಾಚ್ 03 ರಂದು ಶ್ರೀಮದ್ ಜಗದ್ಗುರು ಶಂಕಾರಾಚಾರ್ಯ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಅಮೃತ ಹಸ್ತದಿಂದ ದೇವಿಯ ಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಲಾಗಿದ್ದು, ಅಂದಿನಿಂದ ಇಂದಿನವರೆಗೂ ಪ್ರತೀ ವರ್ಷ ದಸರಾದಂದು 10 ದಿನಗಳವರೆಗೆ ವಿಜೃಂಭಣೆಯಿಂದ ದೇವಿಯ ಆರಾಧನೆ, ಉತ್ಸವಗಳನ್ನು ಸ್ಥಳೀಯರು ಹಾಗೂ ಭಕ್ತಿಂದ ನಡೆಸುತ್ತಾ ಬಂದಿದ್ದು, ದೇವಿ ಸಾನಿಧ್ಯದಲ್ಲಿ, ಶ್ರೀ ಸತ್ಯ ಗಣಪತಿ, ಶ್ರೀ ವೀರಮಾರುತಿ, ನಾಗದೇವರು, ಕ್ಷೇತ್ರಪಾಲ, ಚೌಡೇಶ್ವರಿ, ಸನ್ಯಾಸಿ ಬ್ರಹ್ಮ ಇತ್ಯಾದಿ ದೇವರುಗಳ ಪ್ರತಿಷ್ಠಾಪನೆಗೊಂಡಿದ್ದು, ಇದಕ್ಕೆ ಸಂಬಂಧಪಟ್ಟಂತೆ ಒಂದು ಚಿಕ್ಕ ಪುಷ್ಕರಣಿಯೂ ಕೂಡ ಇರುತ್ತದೆ. ಈ ಪುಷ್ಕರಣೀಯು ಮಣ್ಣಿನಿಂದ ಮುಚ್ಚಲ್ಪಟ್ಟಿದೆ. ಈ ದೇವಿಗೆ ಹಲವಾರು ಗ್ರಾಮಗಳಿಂದ ಮತ್ತು ತಾಲ್ಲೂಕು, ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತ ಸಮೂಹ ಹೊಂದಿದ್ದು, ದೇವಿಯ ಶಕ್ತಿ ಅಪಾರವಾಗಿದೆ ಎಂದು ತಿಳಿದು ಬಂದಿದೆ.
ಶತ ಶತಮಾನಗಳ ಐತಿಹ್ಯವಿರುವ ಹಚ್ಚ ಹಸಿರಿನ ಸೌಂದರ್ಯ ಪ್ರಕೃತಿಯ ಮಡಿಲಲ್ಲಿ ಈ ದೇವಸ್ಥಾನವು ಮುಜರಾಯಿ ಇಲಾಖೆಗೆ ಸಂಬಂಧಿಸಿದ್ದು, ಇಲಾಖೆಯಿಂದ ಅರ್ಚಕರಿಗೆ ಹೂ, ಹಣ್ಣು, ಕಾಯಿ, ಅಲಂಕಾರ ವಿಶೇಷ ದಿನಗಳಲ್ಲೂ ಸೇರಿದಂತೆ ಪೂಜಾ ವಿಧಿ ವಿಧಾನಗಳನ್ನು ನಡೆಸಲು ವಾರ್ಷಿಕ 60 ಸಾವಿರ ದಸ್ತಿ ನೀಡಲಾಗುತ್ತಿದ್ದು, ಈ ಹಣದಿಂದ ಹುಣ್ಣಿಮೆ ಅಮವಾಸೆ, ಹಬ್ಬ ಹರಿದಿನದಂದು ಪೂಜೆ ಮತ್ತು ಉತ್ಸವಾದಿಗಳನ್ನು ನಡೆಸಲು ಅಸಾಧ್ಯವಾಗಿದ್ದು, ಕೇವಲ ದಸ್ತಿಗೆ ಸೀಮಿತವಾಗಿರುವ ಮುಜರಾಯಿ ಇಲಾಖೆ, ಇಲಾಖೆಗೆ ಸಂಬಂಧಿಸಿದ ದೇವಾಲಯವಾದರೂ, ಶಿಥಿಲಗೊಂಡ ದೇವಾಲಯದ ಮರು ನಿರ್ಮಾಣವನ್ನು ವಿವಿಧ ಗ್ರಾಮದ ಗ್ರಾಮಸ್ಥರು, ಅನೇಕ ಭಕ್ತ ಸಮೂಹದ ಲಕ್ಷಾಂತರ ರೂ. ದೇಣಿಗೆಯಿಂದ ಪುನರ್ ನಿರ್ಮಾಣಗೊಂಡಿರುವುದನ್ನು ಗಮನಿಸಿದರೆ, ದೇವಾಲಯದ ನಿರ್ಮಾಣದಲ್ಲಿ ಮುಜರಾಯಿ ಇಲಾಖೆಯ ನಡೆಯು ಹಲವು ಅನುಮಾನಗಳನ್ನು ಸೃಷ್ಟಿಸುತ್ತದೆ.
ವರದಿ : ಪುಷ್ಪಾಜಾಧವ್, ಹೊಸನಗರ