SORABA ; ಮಿಂಚಿನ ಓಟ ಓಡುತ್ತಿದ್ದ ಹೋರಿಗಳು, ಬಲ ಪ್ರದರ್ಶನ ತೋರಲು ಮುಂದಾಗಿದ್ದ ಪೈಲ್ವಾನರು. ಹೋರಿ ಪ್ರಿಯರ ಹರ್ಷೋದ್ಗಾರದ ನಡುವೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಓಟೂರು ಗ್ರಾಮದಲ್ಲಿ ಶ್ರೀ ರಾಮೇಶ್ವರ ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಊರ ಗ್ರಾಮಸ್ಥರ ಸಹಯೋಗದಲ್ಲಿ ಆಯೋಜಿಸಿದ್ದ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬ ವಿಜೃಂಭಣೆಯಿಂದ ಜರುಗಿತು.
ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.facebook.com/share/v/14dnxEuDuw/
ಮಲೆನಾಡು ಹಾಗೂ ಬಯಲುಸೀಮೆ ಭಾಗದ ಹಬ್ಬವಾಗಿರುವ ಜನಪದ ಕ್ರೀಡೆ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬದ ಅಖಾಡದಲ್ಲಿ ಯಾರ ಕೈಗೂ ಸಿಗದಂತೆ ಓಡುತ್ತಿರುವ ಹೋರಿಗಳನ್ನು ಕಣ್ತುಂಬಿಕೊಳ್ಳಲು ತಾಲೂಕು ಸೇರಿದಂತೆ ನೆರೆಯ ಜಿಲ್ಲೆಗಳಿಂದ ಸಾವಿರಾರು ಹೋರಿ ಹಬ್ಬದ ಅಭಿಮಾನಿಗಳು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಶರವೇಗದಲ್ಲಿ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರಲ್ಲಿ ಮೈನವಿರೇಳಿಸಿತು.
ಹೋರಿಗಳ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಟೇಪು, ಬಲೂನುಗಳು ಮತ್ತು ಒಣ ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಕೊಬ್ಬರಿ ಹೋರಿ, ಆಕ್ಷನ್ ಹೋರಿ, ಪೀಪಿ ಹೋರಿ ಹೀಗೆ ವಿವಿಧ ರೀತಿಯಲ್ಲಿ ಹೋರಿಗಳನ್ನು ವಿಂಗಡಿಸಿ ಓಡಿಸಲಾಯಿತು.
ಅಖಾಡದಲ್ಲಿ ಮೂಡಿಯ ಮಲೆನಾಡು ವಿಲನ್, ಆನವಟ್ಟಿಯ ಪವರ್‌ಸ್ಟಾರ್, ಗುಡುಗಿನಕೊಪ್ಪದ ಶ್ರೀ ಕೃಷ್ಣ, ಎಸ್.ಎಸ್. ಕೊಪ್ಪದ ಮಲೆನಾಡು ಚಿನ್ನಾ, ಕುಳಗದ ಹಿಂದೂ ಸಾಮ್ರಾಟ, ಉದ್ರಿ ವೀರೇಶ್, ತವನಂದಿ ಶ್ರೀನಂದಿ, ಹೊಸಳ್ಳಿಯ ಆರ್‌ಬಿಎಸ್ ಕಿಂಗ್, ಜಡೆ ಶ್ರೀರಾಮ, ಶಿಕಾರಿಪುರದ ಶಬರಿ ಹುಲಿ, ಚಿಕ್ಕಜಂಬೂರು ದರ್ಬಾರ್, ಕೊಡಕಣಿ ರಾಯನ್ ಸಾಮ್ರಾಜ್ಯದ ಬೆಳ್ಳಿ, ಮರೂರು ತಾರಕಾಸುರ, ಹೈಸ್ಪೀಡ್ ಚಿನ್ನ, ಯಡಗೊಪ್ಪ ಸೆವೆನ್ ಸ್ಟಾರ್, ಮನೆನಾಡ ಹೈಸ್ಪೀಡ್ ಚಕ್ರವರ್ತಿ, ಹರೂರು ಮಾರಿಕಾಂಬ ಎಕ್ಸ್‌ಪ್ರೆಸ್, ಹರೂರು ಜೈ ಹನುಮ ಸೇರಿದಂತೆ ಓಟೂರು ಗ್ರಾಮದ ಗೂಳಿ, ಪ್ರಳಯ, ಒಡೆಯ ಈಡಿಗರ ಸರ್ಕಾರ್, ಕಲಾವಿದ, ವಾರಸ್ದಾರ, ಮಾರಿಕಾಂಬ, ಮಲೆನಾಡು ಮಹಾರಾಜ, ಸೊರಬದ ರಾವಣ ಹಾಗೂ ವಿವಿಧ ಹೆಸರಿನ ಹೋರಿಗಳು ಓಡಿದವು. ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು. ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದವು.
ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲಪ್ರದರ್ಶನ ತೋರಿದ ಪೈಲ್ವಾನರನ್ನು ಸಮಿತಿ ವತಿಯಿಂದ ಗುರುತಿಸಲಾಯಿತು. ಅಖಾಡದ ಎರಡು ಬದಿಯಲ್ಲಿ ಬೇಲಿ ನಿರ್ಮಿಸಿ, ಒಂದೊಂದೆ ಹೋರಿಗಳನ್ನು ಓಡಿಸುವ ಮೂಲಕ ಸಮಿತಿಯವರು ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ್ದರು.