ಹೊಸನಗರ ; ತಾಲೂಕಿನ ಬಟ್ಟೆಮಲ್ಲಪ್ಪದ ಧೀರ ದೀವರ ಸಂಘದ ಮೊದಲ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಇದೇ ಮಾರ್ಚ್ 9ರಂದು ಅಲಗೇರಿಮಂಡ್ರಿಯ ಚೆನ್ನಮಾಜಿ ಪ್ರೌಢಶಾಲಾ ಆವರಣದಲ್ಲಿ ಕುಲ ಬಾಂಧವರಿಗಾಗಿ ವಿಶೇಷ ಪರಿಕಲ್ಪನೆಯ ಸುಗ್ಗಿ ಹಬ್ಬ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಮಾಕನಕಟ್ಟೆ ಗಣಪತಿ ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ದೀವರ ಸಮಾಜದ ಸಂಘಟನಾತ್ಮಕ, ಸಾಂಸ್ಕೃತಿಕ ಚಟುವಟಿಕೆಯ ಕಾರ್ಯಕ್ರಮ ಇದಾಗಿದ್ದು, ಸಮುದಾಯದ ಅಳಿವಿನಂಚಿನ ಜನಪದ ಕ್ರೀಡೆಗಳು, ಹಸೆ, ಚಿತ್ತಾರ, ಹಬ್ಬ-ಹರಿದಿನಗಳು ಸೇರಿದಂತೆ ದೀವರ ಜನಾಂಗದ ಮಹತ್ವ ಸಾರುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಅಂಟಿಗೆ-ಪಿಂಟಿಗೆ, ಕೋಲಾಟ, ದೀವರ ಸಾಂಸ್ಕೃತಿಕ ಉಡುಗೆ-ತೊಡುಗೆ, ಸೋಬಾನೆ ಪದ, ಭೂಮಿ ಹುಣ್ಣುಮೆ ಕುಕ್ಕೆ ಪ್ರದರ್ಶನ ಸೇರಿದಂತೆ ಸಮುದಾಯದ ಸಂಸ್ಕೃತಿಯನ್ನು ಇಂದಿನ ಜನಾಂಗದ ಯುವಸಮೂಹಕ್ಕೆ ಪರಿಚಯಿಸುವುದು ಸುಗ್ಗಿ ಹಬ್ಬದ ಮೂಲ ಉದ್ದೇಶ ಎಂದರು.
ಪಕ್ಷಾತೀತವಾಗಿ ಅಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲರೂ ಒಗ್ಗೂಡಿ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಬೇಕೆಂದರು.
ಇದೇ ಸಂದರ್ಭದಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಒಂದೇ ದಿನ ಎರಡು ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ರಾಜ್ಯದ ಹಿರಿಯ ರಾಜಕೀಯ ಮುತ್ಸದಿ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪರಿಗೆ ಅದ್ದೂರಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿಶೇಷ ಆಹ್ವಾನಿತರಾಗಿ ಸಚಿವ ಮಧು ಬಂಗಾರಪ್ಪ, ಶಾಸಕ ಭೀಮಣ್ಣ ನಾಯ್ಕ್, ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಡಾ.ಜಿ.ಡಿ. ನಾರಾಯಣಪ್ಪ, ಮಾಜಿ ಸಚಿವರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಇತಿಹಾಸ ಸಂಶೋಧಕ ಮಧು ಗೋವಿಂದ ರಾವ್, ಜಿ.ಪಂ.ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಖ್ಯಾತ ವಕೀಲ ಡಿ.ಎನ್.ಹಿರಿಯಪ್ಪ, ಸಮಾಜದ ಹಿರಿಯ ಮುಖಂಡ ಹಿರಿಯಪ್ಪ ಹುಡ್ಲುಕೇವಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನಿಟ್ಟೂರು ಶ್ರೀ ನಾರಾಯಣ ಗುರು ಮಹಾ ಸಂಸ್ಥಾನದ ಪೀಠಾಧ್ಯಕ್ಷ ರೇಣುಕಾನಂದ ಸ್ವಾಮಿಜಿ ಅವರು ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಲಿದ್ದು, ಸಾರಗನಜಡ್ಡು ಶ್ರೀ ಕ್ಷೇತ್ರ ಕಾರ್ತೀಕೇಯ ಪೀಠಾಧ್ಯಕ್ಷ ಯೋಗೇಂದ್ರ ಅವದೂತರು ಹಾಗು ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪ ಉಪಸ್ಥಿತರಿರುವರು.
ಸುಗ್ಗಿ ಹಬ್ಬ ಕಾರ್ಯಕ್ರಮವನ್ನು ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಲಿದ್ದು, ಸಂಘ ಅಧ್ಯಕ್ಷ ಗಣಪತಿ ಮಾಕನಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ದೀವರ ಜನಾಂಗದ ವೈಶಿಷ್ಟ್ಯ ಪೂರ್ಣ ಸುಗ್ಗಿಹಬ್ಬಕ್ಕೆ ಸಮುದಾಯದ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.
ಸುಮಾರು 5 ಸಾವಿರ ಜನರ ನಿರೀಕ್ಷೆ ಇದ್ದು ಭೋಜನ ವ್ಯವಸ್ಥೆ ಸಹ ಕಲ್ಪಿಸಲಾಗಿದ್ದು, ಜನಾಂಗದ ಪ್ರತಿಭಾವಂತ ಪ್ರತಿಭೆಗಳಿಗೆ ಪುರಸ್ಕಾರ ಸಹ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಉದಯ್ ನಾಯ್ಕ, ಉಪಾಧ್ಯಕ್ಷ ರಮೇಶ್ ಕಾಡಳ್ಳಿ, ಪ್ರಧಾನ ಕಾರ್ಯದರ್ಶಿ ದೇವರಾಜ್ ಅತಿಗಾರ್, ಕಾರ್ಯದರ್ಶಿ ಕುಮಾರ ಕೊಗ್ರೆ, ಸಹ ಕಾರ್ಯದರ್ಶಿ ಕಾಪಿ ಮಹೇಶ್, ನಿರ್ದೇಶಕರಾದ ನಂಜವಳ್ಳಿ ನಾರಿ ರವಿ, ಹೀಲಗೋಡು ಮಂಜಪ್ಪ, ದೇವರಹೊನ್ನೆಕೊಪ್ಪ ಶೇಖರಪ್ಪ, ಘಂಟಿನಕೊಪ್ಪ ಸಂತೋಷ ಕುಮಾರ್, ಗದ್ದೆಮನೆ ಸಚಿನ್ ಕುಮಾರ್, ಹರತಾಳು ಶಶಿಕುಮಾರ್, ಕತ್ರಿಕೊಪ್ಪ ಶಿವಕುಮಾರ್, ಗುಡೋಡಿ ರಾಘವೇಂದ್ರ, ಹುರಕ್ಕಿ ಲಕ್ಷ್ಮಣ, ಅರಗೋಡಿ ರಾಘವೇಂದ್ರ, ನಂಜವಳ್ಳಿ ಮಂಜುನಾಥ ಕಿಪಡಿ, ದಣಂದೂರು ಕುಮಾರ್ ಮಂಡಿ ಮೊದಲಾದವರು ಇದ್ದರು.