ರಿಪ್ಪನ್ಪೇಟೆ ; ಪರಮಪೂಜ್ಯ ಗಣಾಧಿಪತಿ ಗಣಧರಾಚಾರ್ಯ ಶ್ರೀ 108 ಕುಂಥುಸಾಗರ ಮಹಾರಾಜರು ಹಾಗೂ ಸಂಘಸ್ಥ ತ್ಯಾಗಿ ವೃಂದದವರು ಮಾರ್ಚ್ 10ರ ಸೋಮವಾರದಂದು ಬೆಳಿಗ್ಗೆ 9.00 ಗಂಟೆಗೆ ಅತಿಶಯ ಶ್ರೀಕ್ಷೇತ್ರಕ್ಕೆ ಪುರಪ್ರವೇಶ ಮಾಡಿದರು. ಭಕ್ತಿಪೂರ್ವಕವಾಗಿ ಪೂರ್ಣಕುಂಭದೊಂದಿಗೆ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಗೌರವ ಸಮರ್ಪಿಸಿದರು.

ಶ್ರೀಕ್ಷೇತ್ರದ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಯಕ್ಷಿಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಸ್ವಾಮಿ ದರ್ಶನ ಪಡೆದರು. 41 ವರ್ಷಗಳ ಬಳಿಕ ಮುನಿಶ್ರೀಗಳವರು ಹೊಂಬುಜ ಕ್ಷೇತ್ರಕ್ಕೆ ದರ್ಶನಾರ್ಥ ಆಗಮಿಸಿರುವುದು ಭಕ್ತವೃಂದದವರಿಗೆ ಸಂತಸ ತಂದಿದೆ. ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಊರ ಪರವೂರ ಭಕ್ತರು, ಶ್ರಾವಕ-ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.

ಮುನಿಶ್ರೀಯವರಿಗೆ ಶ್ರೀಗಳವರಿಂದ ಭಕ್ತಿಗೌರವ ಸಮರ್ಪಣೆ | “ಮುನಿಶ್ರೀಗಳವರ ಮಾರ್ಗದರ್ಶನ ಅಪೂರ್ವವಾದುದು” ; ಶ್ರೀಗಳು
ರಿಪ್ಪನ್ಪೇಟೆ : ಪರಮಪೂಜ್ಯ ಗಣಾಧಿಪತಿ ಗಣಧರಾಚಾರ್ಯ ಶ್ರೀ ಕುಂಥುಸಾಗರ ಮಹಾರಾಜರು 60 ವರ್ಷಗಳಿಂದ ಜೈನ ಧರ್ಮದ ಪ್ರಸಾರ ಮತ್ತು ಪ್ರಭಾವನೆ ಮಾಡಿದರು. ಅನೇಕ ಜೈನ ಕ್ಷೇತ್ರಗಳ ಅಭಿವೃದ್ಧಿ ಮಾಡಿ, ಮುನಿದೀಕ್ಷೆ, ಮಾತಾಜಿ ದೀಕ್ಷೆ ನೀಡುತ್ತಾ ಜೈನ ತತ್ವಗಳನ್ನು ಸರಳವಾಗಿ ಬೋಧಿಸುತ್ತಿದ್ದಾರೆ. ಅವರ ಪ್ರೇರಣೆಯಿಂದ ಜೈನ ಸಮಾಜವು ವರ್ಧಿಸಲಿ ಎಂದು ಹೊಂಬುಜ ಶ್ರೀಗಳು ಆಶಯ ವ್ಯಕ್ತಪಡಿಸಿದರು.

ಶ್ರೀಕ್ಷೇತ್ರದಲ್ಲಿ ಮುನಿಶ್ರೀಗಳವರಿಗೆ ಪಾದಪೂಜೆ ನೆರವೇರಿಸಲಾಯಿತು. ನಂತರ ಮಧ್ಯಾಹ್ನ 2:00 ಗಂಟೆಗೆ ಮುನಿಶ್ರೀಗಳವರು ಹಾಗೂ ಸಸಂಘದ ಸಾನಿಧ್ಯದಲ್ಲಿ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಆರಾಧನಾ ಮಹೋತ್ಸವಕ್ಕೆ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು.
ಶ್ರೀಕ್ಷೇತ್ರದಲ್ಲಿ ಮಾ.10 ರಿಂದ 19ರವರೆಗೆ ಪ್ರತಿದಿನ ಶ್ರೀಪದ್ಮಾವತಿ ವಿಧಾನ, ಶಾಂತಿ ವಿಧಾನ, ಗಣಧರವಲಯ ವಿಧಾನ ಆಯೋಜಿಸಲಾಗಿದೆ. ಬೆಳಿಗ್ಗೆ ಅಭಿಷೇಕ, ಮಧ್ಯಾಹ್ನ ಆರಾಧನೆ, ಸಂಜೆ ಆರತಿ ಕಾರ್ಯಕ್ರಮಗಳು ನೆರವೇರಲಿವೆ.

ಮಾ.16ರ ಭಾನುವಾರದಂದು ದಿಗಂಬರ ಜೈನ ಮುನಿದೀಕ್ಷೆ ಕಾರ್ಯಕ್ರಮವು ನೆರವೇರಲಿದೆ.