ಹೊಸನಗರ ; ಭ್ರೂಣ ಲಿಂಗ ಪತ್ತೆ ಶಿಕ್ಷಾರ್ಹವಾದ ಅಪರಾಧ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಕೃಷ್ಣಮೂರ್ತಿ ತಿಳಿಸಿದರು.
ಬಾಲ ನ್ಯಾಯ ಕಾಯ್ದೆ ಮಕ್ಕಳ ಹಕ್ಕು ರಕ್ಷಣೆ ಲೈಂಗಿಕ ಕಿರುಕುಳ ಬಗ್ಗೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ಹಕ್ಕುಗಳ ರಕ್ಷಣಾ ಕಾಯಿದೆ ಮತ್ತು ಮಕ್ಕಳ ರಕ್ಷಣೆ ನಿಯಮಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನುಷ್ಠಾನದಲ್ಲಿ ಶಿಕ್ಷಣ ಇಲಾಖೆ ನೋಡಲ್ ಇಲಾಖೆಯಾಗಿದೆ. ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣ ತಗ್ಗಿಸಲು ಕೈಗೊಳ್ಳಬೇಕಾದ ಕ್ರಮ ಕುರಿತು ಮುಕ್ತ ಚರ್ಚೆ ಆಗಬೇಕು. ಜನಿಸಲಿರುವ ಶಿಶುವಿನ ಲಿಂಗದ ಆಯ್ಕೆಯನ್ನು ಗರ್ಭಧಾರಣೆಯ ಪೂರ್ವದಲ್ಲಿಯೇ ಮಾಡಿಕೊಳ್ಳುವುದು ಮತ್ತು ಗರ್ಭಧಾರಣೆಯ ನಂತರ ಭ್ರೂಣದ ಲಿಂಗವನ್ನು ಪತ್ತೆ ಮಾಡಿಕೊಳ್ಳುವುದು ಶಿಕ್ಷಾರ್ಹವಾದ ಅಪರಾಧ ಎಂದರು.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಜಿ.ಎಸ್ ಸೋಮಶೇಖರಪ್ಪ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿ, ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. 21 ವರ್ಷ ಒಳಗಿನ ಹುಡುಗ, 18 ವರ್ಷದ ಒಳಗಿನ ಹುಡುಗಿಯರ ನಡುವೆ ನಡೆಯುವ ಮದುವೆ ಶಿಕ್ಷಾರ್ಹ ಅಪರಾಧವಾಗಿದೆ. ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳು ಮಾನಸಿಕ ದೌರ್ಬಲ್ಯತೆಗೆ ಒಳಗಾಗುತ್ತಾರೆ. ಖಿನ್ನತೆ ಕಂಡು ಬರುತ್ತದೆ. ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಾರೆ. ವಯಸ್ಸಿಗೆ ಮೀರಿದ ಜವಾಬ್ದಾರಿ ಹೊಂದ ಬೇಕಾಗುತ್ತದೆ. ವಿಕಲಾಂಗ ಮಕ್ಕಳು ಜನಿಸುವ ಸಾಧ್ಯತೆ ಇರುತ್ತದೆ. ರಕ್ತ ಹೀನತೆ ಉಂಟಾಗಿ ಲೈಂಗಿಕ ಕಾಯಿಲೆಗಳಾದ ಎಚ್ಐವಿ ಏಡ್ಸ್ ಮಹಾಮಾರಿಗೆ ತುತ್ತಾಗುವ ಸಂಭವವು ಇದೆ. ಆದುದರಿಂದ ಬಾಲ್ಯ ವಿವಾಹಕ್ಕೆ ಅವಕಾಶ ನೀಡದೆ ಕಾನೂನಿನ ಶಿಕ್ಷೆಯಿಂದ ಹೊರಗುಳಿದು ಆರೋಗ್ಯವಂತರಾಗಿ ಬಾಳುವಂತೆ ಕರೆ ನೀಡಿದರು.
ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ರಕ್ಷಣಾ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಯೋಜನಾಧಿಕಾರಿ ಕೆ.ಜಿ ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಸಾಂಸ್ಥಿಕ ರಕ್ಷಣಾಧಿಕಾರಿ ಗಣೇಶ್, ಮಕ್ಕಳ ಸಹಾಯವಾಣಿಯ ಪ್ರಮೋದ್, ಸಾಮಾಜಿಕ ಕಾರ್ಯಕರ್ತೆ ಶಾಂತಾಬಾಯಿ, ಆಪ್ತ ಸಮಾಲೋಚಕ ಪ್ರಮೋದ್, ಪಟ್ಟಣದ ಸಾರ್ವಜನಿಕ ಡಾ. ಹೇಮಂತ್, ಆರಕ್ಷಕ ಠಾಣೆಯ ಎಎಸ್ಐ ಸತೀಶ್ ರಾಜ್ ತರಬೇತಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ವನಜಾ ಪ್ರಾರ್ಥಿಸಿದರು. ದಿವ್ಯ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಮೇಲ್ವಿಚಾರಕಿ ವೀರಮ್ಮ ಸ್ವಾಗತಿಸಿದರು. ಚಂದ್ರಕಲಾ ವಂದಿಸಿದರು.