ರಿಪ್ಪನ್‌ಪೇಟೆ ; ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಅಧಿದೇವತೆ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿಯ ರಜತ ಉಯ್ಯಾಲೆ ಸೇವೆಯನ್ನು ಶ್ರೀಕ್ಷೇತ್ರದ ಚಂದ್ರಶಾಲೆಯಲ್ಲಿ ಫೆ. 18ರಂದು ಸಾಯಂಕಾಲ ಶೋಡೋಪಚಾರ ಪೂಜಾ ವಿಧಿ-ವಿಧಾನಗಳೊಂದಿಗೆ ನೆರವೇರಿಸಲಾಯಿತು.
ಅಷ್ಟವಿದಾರ್ಚನೆ ಪೂಜೆಯಲ್ಲಿ ವಿವಿಧ ಪುಷ್ಪ, ಫಲ, ಸುಗಂಧ ದ್ರವ್ಯಗಳಿಂದ ಶ್ರೀ ಪದ್ಮಾವತಿ ದೇವಿಯನ್ನು ಆರಾಧಿಸಿ, ಪದ್ಮಾವತಿ ದೇವಿ ಸ್ತುತಿಗಳೊಂದಿಗೆ ಶಾಸ್ತ್ರೋಕ್ತ ವಿಧಾನದಲ್ಲಿ ಉಯ್ಯಾಲೆ ಸೇವೆಯಲ್ಲಿ ಊರ-ಪರವೂರ ಭಕ್ತರು ಸಮರ್ಪಿಸಿಕೊಂಡರು.
ಸ್ವರ್ಣ ಪಲ್ಲಕ್ಕಿಯಲ್ಲಿ ಉತ್ಸವ ಶ್ರೀ ಪದ್ಮಾವತಿ ದೇವಿ ಜಿನಬಿಂಬವನ್ನು ಜಿನಮಂದಿರದಿಂದ ಭಕ್ತರ ಸೇವೆಯಲ್ಲಿ ಜಯಘೋಷ, ವಾದ್ಯ ವಾದನದಲ್ಲಿ ತರಲಾಯಿತು.
ಗಣಾಧಿಪತಿ ಗಣಧರಾಚಾರ್ಯ ಶ್ರೀ 108 ಕುಂಥುಸಾಗರ ಮಹಾರಾಜರು ಸಸಂಘದ ಮುನಿಶ್ರೀಯವರು, ಆರ್ಯಿಕೆಯರು ಉಪಸ್ಥಿತರಿದ್ದರು. ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ವಿಶೇಷ ರಜತ ಉಯ್ಯಾಲೆ ಸೇವೆಯನ್ನು ಮುನಿಶ್ರೀಯವರ ಸಾನಿಧ್ಯದಲ್ಲಿ ಏರ್ಪಡಿಸಿದ್ದರು. ಅಷ್ಟಾವಧಾನ ವಾದ್ಯ, ಶಂಖ, ತಾಳ, ನೃತ್ಯ, ಗದ್ಯ, ಪದ್ಯ, ಸ್ತೋತ್ರ ಪ್ರಸ್ತುತಪಡಿಸಲಾಯಿತು.

ರಜತ ಉಯ್ಯಾಲೆಯಲ್ಲಿ ಶ್ರೀ ಪದ್ಮಾವತಿ ದೇವಿ ಆರಾಧನೆಯನ್ನು ವೀಕ್ಷಿಸಿ, ಪಾಲ್ಗೊಂಡ ಭಕ್ತರು ಧನ್ಯತೆಯಿಂದ ಜಯ ಜಯ ಪದ್ಮಿನಿ ದೇವಿ, ಹರಸು ತಾಯಿ ಪದ್ಮಾವತಿ ಮುಂತಾದ ಜಿನಸ್ತುತಿಗಳನ್ನು ಸಾಮೂಹಿಕವಾಗಿ ಸ್ತುತಿಸಿದರು.
ಶ್ರೀ ಜಿನಭಕ್ತಿ ಗಾಯಕಿ ಜಯಶ್ರೀ ಹೊರನಾಡುರವರಿಂದ ಸುಶ್ರಾವ್ಯ ಪೂಜಾಷ್ಟಕಗಳು ಭಕ್ತರನ್ನು ಭಾವಪರವಶವನ್ನಾಗಿಸಿತು. ಸರ್ವವಾದ್ಯ ಗೋಷ್ಠಿ ಮೇಳೈಸಿ, ಭಕ್ತರನ್ನು ಪುಳಕಿತಗೊಳಿಸಿತು.
ಶ್ರೀ ಪದ್ಮರಾಜ ಹಾಗೂ ಸಹಪುರೋಹಿತರು ಪೂಜಾ ವಿಧಿ-ವಿಧಾನಗಳನ್ನು ಸಾಂಗವಾಗಿ ನೆರವೇರಿಸಿದರು.


ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.