ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ನಿಷಿದ್ದ, ತಪ್ಪಿದ್ದಲ್ಲಿ ರೇಷನ್ ಕಾರ್ಡ್ ಶಾಶ್ವತ ರದ್ದು ; ಚಿದಂಬರ ಎಚ್ಚರಿಕೆ

Written by Mahesha Hindlemane

Published on:

ಹೊಸನಗರ ; ಬಿಪಿಎಲ್ ಕಾರ್ಡ್‌ದಾರರಿಗೆ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ನೀಡುತ್ತಿರುವ ಉಚಿತ ಅಕ್ಕಿಯನ್ನು ಫಲಾನುಭವಿಗಳು ಕಾಳಸಂತೆಯಲ್ಲಿ ಮಾರಾಟ ಮಾಡುವ ಕುರಿತು ಮಾಹಿತಿ ಬಂದಲ್ಲಿ ಅಂತಹ ಪಡಿತರ ಕಾರ್ಡ್‌ಗಳನ್ನು ಶಾಶ್ವತವಾಗಿ ರದ್ದುಪಡಿಸಲು ಸೂಕ್ತ ಕ್ರಮಕ್ಕೆ ಮುಂದಾಗುವುದಾಗಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ತಾಲೂಕು ಅಧ್ಯಕ್ಷ ಚಿದಂಬರ ಫಲಾನುಭವಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶನಿವಾರ ಇಲ್ಲಿನ ತಾಲೂಕು ಪಂಚಾಯತಿ ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ 9ನೇ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಭೆಗೆ ಸೂಕ್ತ ಮಾಹಿತಿ ಇಲ್ಲದೆ ಮೆಸ್ಕಾಂ ಇಲಾಖೆ ಅಧಿಕಾರಿ ಪ್ರತಿ ಬಾರಿ ಹಾಜರಾಗುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಸಂಚಾಲಕ ರಿಪ್ಪನ್‌ಪೇಟೆಯ ಅಮೀರ್ ಹಂಜಾ, ಪ್ರತಿ ಸಭೆಗೆ ಮೆಸ್ಕಾಂನ ಬೇರೆ ಬೇರೆ ಸಿಬ್ಬಂದಿಗಳು ಹಾಜರಾಗುವುದನ್ನು ಖಂಡಿಸಿ, ಇದರಿಂದ ಸಭೆಗೆ ಸೂಕ್ತ ಮಾಹಿತಿ ನೀಡಲು ಅಧಿಕಾರಿಗಳು ವಿಫಲರಾಗುತ್ತಿದ್ದು, ಮುಂಬರುವ ಸಭೆಯಲ್ಲಿ ಅಗತ್ಯ ದಾಖಲೆಯೊಂದಿಗೆ ಹಾಜರಿರುವಂತೆ ಮೆಸ್ಕಾಂ ಸಿಬ್ಬಂದಿಗೆ ಸೂಚಿಸಿದರು. ಅಲ್ಲದೆ, ಶಾಲೆ, ದೇವಸ್ಥಾನ, ಚರ್ಚ್, ಮಸೀದಿ ಹೊರತುಪಡಿಸಿ ಕೇವಲ ಗೃಹಜ್ಯೋತಿ ಬಳಕೆದಾರರ ಸ್ಪಷ್ಟ ಮಾಹಿತಿ ನೀಡುವಂತೆ ತಿಳಿಸಿದರು.

ಸದಸ್ಯೆ ಸುಮಂಗಲ ದೇವರಾಜ್ ಮಾತನಾಡಿ, ಶಕ್ತಿ ಯೋಜನೆ ಅಡಿಯಲ್ಲಿ ತಾಲೂಕು ಕೇಂದ್ರದಿಂದ ತೀರ್ಥಹಳ್ಳಿ, ಶಿವಮೊಗ್ಗ ಸೇರಿದಂತೆ ಹಲವು ಭಾಗಗಳಿಗೆ ಬಸ್ ಸಂಚಾರ ಕಲ್ಪಿಸಬೇಕೆಂದು ಕಳೆದ ಹಲವು ಸಭೆಗಳಲ್ಲಿ ಆಗ್ರಹಿಸಿದ್ದರೂ, ಕೆಎಸ್‌ಆರ್‌ಟಿಸಿ ಇತ್ತ ಗಮನ ಹರಿಸಿಲ್ಲ. ನಿಲ್ಸ್ಕಲ್ ಗ್ರಾಮಕ್ಕೆ ಓಡಿಸುತ್ತಿದ್ದ ಗ್ರಾಮಾಂತರ ಸಾರಿಗೆಯನ್ನು ಬೇಸಿಗೆ ರಜಾ ಹಿನ್ನಲೆಯಲ್ಲಿ ನಿಲ್ಲಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಜನತೆಗೆ ಭಾರೀ ತೊಂದರೆ ಆಗುತ್ತಿದ್ದು, ಕೂಡಲೇ ಬಸ್ ಸಂಚಾರ ಮರು ಜಾರಿ ಮಾಡುವಂತೆ ಕೋರಿದರು.

ಶೀಘ್ರದಲ್ಲೇ ಯುವನಿಧಿ ಸಹಿತ ವಿವಿಧ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಒಳಗೊಂಡ ತಾಲೂಕು ಮಟ್ಟದ ಭಾರೀ ಸಮ್ಮೇಳನವನ್ನು ಶಾಸಕರ ಸಮ್ಮುಖದಲ್ಲಿ ನಡೆಸುವ ಇಂಗಿತ ವ್ಯಕ್ತಪಡಿಸಿದ ಅಧ್ಯಕ್ಷ ಚಿದಂಬರ್, ಅವರ ಮಾತಿಗೆ ಸಭೆ ಒಕ್ಕೊರಲಿನ ಸಮ್ಮತಿ ಸೂಚಿಸಿತು.

25ರ ಮಾರ್ಚ್ ಅಂತ್ಯಕ್ಕೆ ತಾಲೂಕಿನಲ್ಲಿ ಒಟ್ಟು 530 ಯುವನಿಧಿ ಫಲಾನುಭವಿಗಳಿಗೆ 11.46 ಲಕ್ಷ ಹಣ ಸಂದಾಯವಾಗಿದ್ದು, ಇದರಲ್ಲಿ 29 ಪರಿಶಿಷ್ಟ ಜಾತಿ ಹಾಗೂ 5 ಪರಿಶಿಷ್ಟ ಪಂಗಡದ ಫಲಾನುಭವಿ ಇದ್ದಾರೆ ಎಂದು ಜಿಲ್ಲಾ ಕೈಗಾರಿಕೆ ಮತ್ತು ಉದ್ಯೋಗ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಮಹಂತೇಶ್ ಸಭೆಗೆ ತಿಳಿಸಿದರು.

ಸಾಗರ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಶೈಲೇಶ್ ಬಿರದಾರ್ ಮಾತನಾಡಿ, ತಾಲೂಕಿನಲ್ಲಿ ಗ್ರಾಮೀಣ ಭಾಗಕ್ಕೆ ಶಕ್ತಿ ಯೋಜನೆ ಅಡಿಯಲ್ಲಿ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮಕ್ಕೆ ನಿಗಮ ಮುಂದಾಗಿದೆ. ಶೀಘ್ರದಲ್ಲೇ ಮಣಿಪಾಲ ಮೂಲಕ ಮತ್ತೊಂದು ಬಸ್ ಮಂಗಳೂರಿಗೆ ತೆರಳಲಿದೆ. ಏಪ್ರಿಲ್ 15ಕ್ಕೆ ಹೊಸ ಬಸ್‌ಗೆ ಹಸಿರು ನಿಶಾನೆ ದೊರೆಯಲಿದೆ ಎಂದರು.

ತಾಲೂಕಿನಲ್ಲಿ ಒಟ್ಟು 29,011 ಪಡಿತರ ಕಾರ್ಡ್ ಹೊಂದಿದ್ದು, ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ 28,238 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, 27,339 ಫಲಾನುಭವಿಗಳು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಕೇವಲ 773 ಅರ್ಜಿದಾರರು ಯೋಜನೆಯಿಂದ ದೂರವೇ ಉಳಿದಿದ್ದಾರೆ ಎಂಬ ಮಾಹಿತಿಯನ್ನು ಸಿಡಿಪಿಓ ಇಲಾಖೆಯ ಹಿರಿಯ ಮೇಲ್ವಿಚಾರಕಿ ವೀರಮ್ಮ ಸಭೆಗೆ ನೀಡಿದರು.

ಸಭೆಯಲ್ಲಿ ಪಿಡಿಓ ಪವನ್ ಕುಮಾರ್, ಎಸ್‌ಡಿಎ ಮಂಜುನಾಥ್, ಸಮಿತಿ ಸದಸ್ಯರಾದ ಸಿಂಥಿಯಾ ಶೆರಾವೋ, ಪೂರ್ಣಿಮಾ ಮೂರ್ತಿ, ಕೆರೆಹಳ್ಳಿ ರವೀಂದ್ರ, ಪುರಪ್ಪೆಮನೆ ಸಂತೋಷ್, ಫ್ಯಾನ್ಸಿ ರಮೇಶ್, ಮೆಸ್ಕಾಂ ಇಲಾಖೆಯ ಸಹಾಯಕ ಲೆಕ್ಕಾಧಿಕಾರಿ ಲೋಕೇಶ್ ಇದ್ದರು.

Leave a Comment