ತೀರ್ಥಹಳ್ಳಿ ; ಇಲ್ಲಿನ ಅಗ್ನಿಶಾಮಕ ಠಾಣೆ ವತಿಯಿಂದ ಏ.14 ರಿಂದ ‘ಅಗ್ನಿಶಾಮಕ ಸೇವಾ ಸಪ್ತಾಹ’ವನ್ನು ಆಚರಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
1944 ರ ಏ.14ರಂದು ವಿಕ್ಟೋರಿಯಾ ಡಾಕ್ ಬಂದರಿನಲ್ಲಿ ಸ್ಪೋಟಕ ವಸ್ತುಗಳನ್ನು ಸಾಗಿಸುತ್ತಿದ್ದ “ಎಸ್.ಎಸ್. ಪೋರ್ಟ್ ಸ್ಟೈಕೈನ್” ಎಂಬ ಹಡಗು ಘೋರ ಅಗ್ನಿ ಅನಾಹುತಕ್ಕೆ ಒಳಗಾಗಿದ್ದು, ಆ ಬೆಂಕಿಯನ್ನು ನಂದಿಸಲು ಮುಂಬೈ ಫೈರ್ ಬ್ರಿಗೇಡ್‌ನ ಅಧಿಕಾರಿ, ಸಿಬ್ಬಂದಿಯವರು ಕಾರ್ಯನಿರತರಾಗಿದ್ದ ಸಂದರ್ಭದಲ್ಲಿ ಹಡಗು ಸ್ಪೋಟಗೊಂಡು 66 ಜನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವೀರ ಮರಣ ಹೊಂದಿದರು. ಈ ಹುತಾತ್ಮರ ನೆನಪಿಗಾಗಿ ಏಪ್ರಿಲ್ 14 ರಂದು ಹುತಾತ್ಮರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
ಪ್ರತೀ ವರ್ಷ ಏಪ್ರಿಲ್ 14 ರಿಂದ 20ರವರೆಗೆ ಈ ಸಪ್ತಾಹವನ್ನು ದೇಶದಾದ್ಯಂತ ಅಗ್ನಿಶಾಮಕ ಸೇವಾ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ. ಈ ಸಪ್ತಾಹದಲ್ಲಿ ಸಾರ್ವಜನಿಕರಿಗೆ ಅಗ್ನಿ ಸುರಕ್ಷತೆಯ ಬಗ್ಗೆ ತಿಳುವಳಿಕೆಯನ್ನು ನೀಡಿ, ಅಗ್ನಿಶಮನ ವಿಚಾರಗಳ ಬಗ್ಗೆ ಅಣಕು ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ.
ದೇಶದಾದ್ಯಂತ ಸಪ್ತಾಹದ ಮೊದಲ ದಿನವಾದ ಏಪ್ರಿಲ್ 14 ರಂದು ಸಾರ್ವಜನಿಕರ ಪ್ರಾಣ ಮತ್ತು ಆಸ್ತಿ ರಕ್ಷಣಾ ಕಾರ್ಯದಲ್ಲಿ ತಮ್ಮ ಪ್ರಾಣವನ್ನು ಬಲಿದಾನಗೈದು ಅಮರರಾದ ವೀರ ಅಗ್ನಿಶಾಮಕರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.