ಪ್ರಧಾನಿ ಮೋದಿ ಪತ್ರಕ್ಕೂ ಕ್ಯಾರೆ ಎನ್ನದ ಬಿಎಸ್‌ಎನ್‌ಎಲ್ ಅಧಿಕಾರಿಗಳ ವಿರುದ್ಧ ವಾರಂಬಳ್ಳಿ ಗ್ರಾಮಸ್ಥರ ಪ್ರತಿಭಟನೆ

Written by malnadtimes.com

Updated on:

ಹೊಸನಗರ ; ಕಳೆದ ಏಳೆಂಟು ವರ್ಷಗಳ ಗ್ರಾಮಸ್ಥರ ನ್ಯಾಯಯುತ ಬೇಡಿಕೆಗೆ ಬಿಎಸ್‌ಎನ್‌ಎಲ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿದ ಹಿನ್ನಲೆಯಲ್ಲಿ ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ತಾಲೂಕಿನ ಸೊನಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾರಂಬಳ್ಳಿ, ಗೊರಗೋಡು ಗ್ರಾಮದ ನೂರಾರು ಗ್ರಾಮಸ್ಥರು ಗುರುವಾರ ನಡೆಸುತ್ತಿದ್ದ ಪ್ರತಿಭಟನೆಯನ್ನು ದಿಢೀರ್ ಹಿಂಪಡೆಯುವ ಮೂಲಕ ಇಡೀ ವೃತ್ತಾಂತವು ಸುಖಾಂತ್ಯಕ್ಕೆ ಸರಿದು ಮುಷ್ಕರಕ್ಕೆ ಇತಿಶ್ರೀ ಹಾಡಿದ ಪ್ರಸಂಗ ಕಂಡು ಬಂತು.

WhatsApp Group Join Now
Telegram Group Join Now
Instagram Group Join Now

ತಾಲೂಕಿನಲ್ಲಿ ಹಲವು ವರ್ಷಗಳಿಂದ ಬಿಎಸ್‌ಎನ್‌ಎಲ್ ಮೊಬೈಲ್ ಟವರ್‌ಗಳ ನೆಟ್‌ವರ್ಕ್ ಸಮಸ್ಯೆ ನಿರಂತರವಾಗಿದ್ದು, ಕೊರೋನ ಕಾಲದಿಂದ ಇದು ತಾರಕಕ್ಕೇರಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಗ್ರಾಮೀಣ ಭಾಗದ ಯುವಜನತೆ ಸಿಕ್ಕ ಸಣ್ಣಪುಟ್ಟ ಕೆಲಸಕ್ಕೆ ವರ್ಕ್ ಫ್ರಮ್ ಹೋಮ್‌ಗೆ ಮೊಬೈಲ್ ನೆಟ್‌ವರ್ಕ್‌ನ ಅವಶ್ಯಕತೆ ಇದ್ದು, ನೆಟ್‌ವರ್ಕ್ ಪದೇಪದೇ ಕೈಕೊಡುತ್ತಿದ್ದ ಕಾರಣ ಕರ್ತವ್ಯ ನಿರ್ವಹಿಸಲು ಅಡ್ಡಿಯಾಗಿತ್ತು.

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/18SuanqGhs/


ಈ ಕುರಿತು ಗ್ರಾಮದ ವಿನಾಯಕ ಪ್ರಭು ಎಂಬ ಯುವಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊಬೈಲ್ ಟವರ್ ದಯಪಾಲಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಪತ್ರ ಬರೆಯುವ ಮೂಲಕ ಇಡೀ ಜಿಲ್ಲೆಯ ಗಮನ ಸೆಳೆದಿದ್ದ. ಆ ಬಳಿಕ ಬಿಎಸ್‌ಎನ್‌ಎಲ್ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಟವರ್ ನಿರ್ಮಿಸುವ ಭರವಸೆ ನೀಡಿದ್ದರು. ಇನ್ನೇನು ಗ್ರಾಮಸ್ಥರ ಬಹುದಿನದ ಕನಸು ಶೀಘ್ರದಲ್ಲೇ ನೆನಸಾಗಲಿದೆ ಎಂಬ ಆಕಾಂಕ್ಷೇಗೆ ಅರಣ್ಯ ಇಲಾಖೆ ನೀರೆರೆಚಿತ್ತು.

ಕಾರಣ ಉದ್ದೇಶಿತ ಜಾಗ ಅರಣ್ಯ ಇಲಾಖೆಗೆ ಸೇರಿದೆ ಎಂದು ರಾಗ ಎಳೆದಿತ್ತು. ಬಳಿಕ ಗ್ರಾಮಸ್ಥರೆಲ್ಲ ಒಗ್ಗೂಡಿ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಸೇರಿದಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಹಲವು ಬಾರಿ ಟವರ್ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದ್ದರೂ ಅದು ನೆನೆಗುದಿಗೆ ಬಿದ್ದಿತ್ತು.

ಆ ಕಾರಣಕ್ಕೆ ಗ್ರಾಮಸ್ಥರೆಲ್ಲಾ ನೆಟ್‌ವರ್ಕ್ ಹೋರಾಟ ಸಮಿತಿ ರಚಿಸಿಕೊಂಡು ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಗಮನ ಸೆಳೆಯಲು ಬೀದಿಗಿಳಿದು ಹೋರಾಟ ಮಾಡುವ ನಿರ್ಧಾರಕ್ಕೆ ಬಂದರು. ಯುವಕ ವಿನಾಯಕ ಪ್ರಭು ನೇತೃತ್ವದಲ್ಲಿ ಪಕ್ಷಭೇದ ಮರೆತು ಹೋರಾಟಕ್ಕೆ ನಿಂತ ಪ್ರತಿಫಲವೇ ಗುರುವಾರ ವಾರಂಬಳ್ಳಿ ಗ್ರಾಮದಿಂದ ಹೊಸನಗರ ತಾಲೂಕು ಕಚೇರಿವರೆಗೆ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥ. ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ಜಾಥದಲ್ಲಿ ಸುಮಾರು 15 ಕಿ.ಮೀ ಪಾದಯಾತ್ರೆ ಮಾಡಿ ಅಧಿಕಾರಿ ಹಾಗು ಜನಪ್ರತಿನಿಧಿಗಳ ವಿರುದ್ದ ಘೋಷಣೆ ಕೂಗುತ್ತಿದ್ದ ಪರಿಣಾಮ ಸ್ಥಳೀಯ ಬಿಎಸ್‌ಎನ್‌ಎಲ್ ಇಲಾಖೆ ಜೆಟಿಒ ರಾಜೇಶ್, ಎಜಿಎಂ ಸೆಂಥಿಲ್ ಹಾಗು ಬಿಎಸ್‌ಎನ್‌ಎಲ್ ಜಿಲ್ಲಾ ನಾಮ ನಿರ್ದೇಶನ ಸದಸ್ಯ ಗಣಪತಿ ಬೆಳಗೋಡು ಸೇರಿದಂತೆ ಹಲವರು ಪ್ರತಿಭಟನಾ ಸ್ಥಳಕ್ಕೆ ಧಾವಿಸಿದರು.

ವಿಷಯ ಕಾಡ್ಗಿಚ್ಚಿನಂತೆ ಹರಡಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ತಾಲೂಕು ಪಂಚಾಯತಿ ಮಾಜಿ ಸದಸ್ಯೆ ಪೂರ್ಣಿಮಾ ಮೂರ್ತಿ, ಪ್ರಮುಖರಾದ ಎನ್.ಆರ್. ದೇವಾನಂದ್, ನಗರ ನಿತಿನ್, ರಮೇಶ್ ನೇರಲೆ ಸೇರಿದಂತೆ ಹಲವರು ಪ್ರತಿಭಟನೆಗೆ ಸಾಥ್ ನೀಡಿದರು.

ಪ್ರತಿಭಟನೆಯ ಕಾವು ತೀವ್ರ ಆಗುತ್ತಿದೆ ಎಂದು ಮನಗಂಡ ಜೆಟಿಒ ರಾಜೇಶ್, ಶಿವಮೊಗ್ಗ ಜಿಲ್ಲಾ ಬಿಎಸ್‌ಎನ್‌ಎಲ್ ಇಲಾಖೆಯ ಡಿಜಿಎಂ ಕೃಷ್ಣ ಮೊಗೇರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ವಾಸ್ತವ ಸಂಗತಿ ವಿವರಿಸಿದರು.

ಪ್ರತಿಭಟನೆಯಲ್ಲಿ ನಿರತರಾಗಿದ್ದ ವಿನಾಯಕ ಪ್ರಭು, ಸುಧೀಂದ್ರ ಪಂಡಿತ್, ಸೊನಲೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕೃಷ್ಣಮೂರ್ತಿ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ, ಆಟಾಟೋಪಕ್ಕೆ ಸಿಡಿಮಿಡಿಗೊಂಡು, ಕೂಡಲೇ ಟವರ್ ನಿರ್ಮಾಣಕ್ಕೆ ಅಗತ್ಯ ಕ್ರಮಕೊಳ್ಳುವಂತೆ ಒತ್ತಾಯಿಸಿದರು. ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ನಿಮ್ಮ ಕಚೇರಿ ಎದುರು ಗ್ರಾಮಸ್ಥರೆಲ್ಲರೂ ಸೇರಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ, ಪ್ರತಿಭಟನೆ ತೀವ್ರತೆ ಅರಿತ ಡಿಜಿಎಂ ಕೃಷ್ಣ ಮೊಗೇರ, ಇನ್ನೊಂದು ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡುವ ಭರವಸೆ ನೀಡಿದ ಬೆನ್ನಲ್ಲೇ ಪ್ರತಿಭಟನಾಕಾರರು ಮುಷ್ಕರ ಅಂತ್ಯಗೊಂಡಿಸಿದ್ದು ವಿಶೇಷ.

Leave a Comment