ಹೊಸನಗರ ; ಇತ್ತೀಚೆಗೆ ರಾಜ್ಯದ ಬೀದರ್, ಸಾಗರ, ಶಿವಮೊಗ್ಗ ಸೇರಿದಂತೆ ಹಲವು ಭಾಗಗಳಲ್ಲಿ ಸಿಇಟಿ ಪರೀಕ್ಷೆ ಬರೆಯಲು ಪರೀಕ್ಷಾ ಕೊಠಡಿಗೆ ತೆರಳಿದ್ದ ಬ್ರಾಹ್ಮಣ ವಿದ್ಯಾರ್ಥಿಗಳ ಮೇಲೆ ಪರಿಶೀಲನೆ ನೆಪದಲ್ಲಿ ಅವರು ಸನಾತನ ಧಾರ್ಮಿಕ ನಂಬಿಕೆ ಮೂಲಕ ಗಾಯತ್ರಿ ಮಂತ್ರ ಪಠಿಸಿ, ತಂದೆಯ ಸಮ್ಮುಖದಲ್ಲಿ ದೀಕ್ಷೆ ಪಡೆದು ಧರಿಸಿದ್ದ ಪವಿತ್ರ ಜನಿವಾರವನ್ನು ಬಲವಂತವಾಗಿ ಕತ್ತರಿಸಿ ತೆಗೆದು ಕಸದಬಟ್ಟಿಗೆ ಎಸೆದ ಪರೀಕ್ಷಾ ಕೇಂದ್ರದ ಅಧಿಕಾರಿಗಳ ಧೋರಣೆಯನ್ನು ತೀವ್ರವಾಗಿ ಖಂಡಿಸಿ ಹೊಸನಗರದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಾ. ರಾಮಚಂದ್ರ ರಾವ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಇಲ್ಲಿನ ಗಾಯತ್ರಿ ಮಂದಿರಲ್ಲಿ ಸಭೆ ನಡೆಸಿ, ಬ್ರಾಹ್ಮಣ ಸಮಾಜ ಸುಸಂಸ್ಕೃತ ಸಮಾಜವಾಗಿದ್ದು, ಸಮಾಜದ ಏಳಿಗೆಗೆ ತನ್ನದೆ ಆದ ಕೊಡುಗೆ ನೀಡುತ್ತ ಬಂದಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ರಾಜಕೀಯ ಪಕ್ಷಗಳು ಸಮಾಜದ ಏಳಿಗೆ ಸಹಿಸದೆ, ಸಮಾಜದ ಒಗ್ಗಟನ್ನು ಒಡೆಯುವ ಹುನ್ನಾರ ನಡೆಸುತ್ತಿವೆ. ವಿಪ್ರರು ಮೂಲತಃ ಬುದ್ದಿವಂತಿಕೆಯಿಂದ ಜೀವನ ಸಾಗಿಸುತ್ತಿದ್ದು, ಅವರ ವಿದ್ಯಾರ್ಜನೆಗೆ ರಾಜಕೀಯ ಲೇಪ ಬಳಿಯುವ ಮೂಲಕ ವಿದ್ಯಾಭ್ಯಾಸಕ್ಕೂ ಹಿನ್ನಡೆ ಉಂಟು ಮಾಡಲು ಕುತಂತ್ರ ನಡೆಸಿವೆ. ಈ ಕಾರಣ ಪವಿತ್ರ ಯಜ್ಞೋಪವಿತ್ರದ ಮೇಲೆ ಕಣ್ಣು ಹಾಕಿದ್ದು, ಸಮಾಜದಲ್ಲಿ ಅಶಾಂತಿ ಮೂಡಿಸುವ ತಂತ್ರ ರೂಪಿಸಿವೆ. ವಿಪ್ರ ಸಮಾಜವನ್ನು ಒಡೆಯುವ ಕಿಡಿಗೇಡಿಗಳ ಯತ್ನ ಎಂದೂ ಫಲಿಸದು. ವಿಪ್ರರ ತಂಟೆಗೆ ಯಾರೊಬ್ಬರು ಬಂದಲ್ಲಿ ತಕ್ಕ ಉತ್ತರ ನೀಡಲು ವಿಪ್ರ ಸಮಾಜ ಈಗ ಸನ್ನದ್ದವಾಗಿದೆ. ಇಂದಿನ ಪ್ರತಿಭಟನೆಯು ಕಿಡಿಗೇಡಿಗಳಿಗೆ ಎಚ್ಚರಿಕೆಯ ಸಂದೇಶವಾಗಲಿ ಎಂದು ಬ್ರಾಹ್ಮಣ ಸಮಾಜದ ಮುಂಖಡ ಕೆ.ವಿ.ಕೃಷ್ಣಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖರಾದ ಎಲ್.ಕೆ.ಮುರಳಿ ಮಾತನಾಡಿ, ಇದೊಂದು ಅಧಿಕಾರಿಗಳ ಹೇಯ ಕೃತ್ಯ. ಸನಾತನ ಪರಂಪರೆಯ ಹಿಂದು ಸಂಸ್ಕೃತಿಗೆ ಮಾಡಿದ ಅಪಚಾರ. ಇದು ಒಂದು ಧರ್ಮದ ವಿರುದ್ದ ಕಿಡಿಗೇಡಿಗಳಿಗೆ ಇರುವ ಅಸಹಿಷ್ಣತೆಯನ್ನು ತೋರಿಸುತ್ತದೆ. ಇಂತಹ ಘಟನೆಗಳಿಂದ ಬ್ರಾಹ್ಮಣರ ಧಾರ್ಮಿಕ ಭಾವನೆಗೆ ತೀವ್ರತರ ಧಕ್ಕೆ ಉಂಟಾಗುತ್ತಿದೆ. ಮುಂಬರುವ ದಿನಗಳಲ್ಲಿ ಇಂತಹ ಕೃತ್ಯೆಗಳು ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕಿದೆ. ಸರ್ಕಾರ ಕೂಡಲೇ ಎಚ್ಚೆತ್ತು ತಪ್ಪಿತ್ತಸ್ಥರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗ ಬೇಕೆಂದು ಆಗ್ರಹಿಸಿದರು.
ಸಮಾಜದ ತಾಲೂಕು ಅಧ್ಯಕ್ಷ ಡಾ. ರಾಮಚಂದ್ರರಾವ್ ಮಾತನಾಡಿ, ವಿದ್ಯಾರ್ಥಿಯ ಜನಿವಾರ ಕಿತ್ತೆಸೆದ ಕ್ರಮ ಬ್ರಾಹ್ಮಣ ಸಮುದಾಯಕ್ಕೆ ಮಾಡಿರುವ ಘೋರ ಅವಮಾನವಾಗಿದೆ. ಇದನ್ನು ಹೊಸನಗರ ತಾಲೂಕು ಬ್ರಾಹ್ಮಣ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ. ಪ್ರಕರಣದ ಹಿಂದಿನ ಕಾಣದ ಕೈಗಳನ್ನು ಕೂಡಲೇ ಬಂಧಿಸಿ ತನಿಖೆ ನಡೆಸಬೇಕು. ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಕೂಡಲೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಮುಂದೆ, ಈ ರೀತಿಯ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಸೂಕ್ತ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡುವ ಮೂಲಕ ವಿದ್ಯಾರ್ಥಿಗಳ ಹಿತ ಕಾಪಾಡಬೇಕೆಂದು ಆಗ್ರಹಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆಕಾರರು ಸರ್ಕಾರ ಹಾಗೂ ಕೃತ್ಯೆಯಲ್ಲಿ ಭಾಗಿಯಾದ ಅಧಿಕಾರಿವರ್ಗಗಳ ವಿರುದ್ದ ಘೋಷಣೆಗಳನ್ನು ಹಾಕಿ ರಾಜ್ಯಪಾಲರಿಗೆ ತಹಶೀಲ್ದಾರ್ ಮೂಲಕ ಮನವಿಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವಿಪ್ರಸಮಾಜದ ಪ್ರಮುಖರಾದ ಕಾರ್ಯದರ್ಶಿ ಕಲಕೈ ಸ್ವರೂಪ್, ಗುಬ್ಬಿಗ ಅನಂತರಾವ್, ಕೋಡೂರು ವಿಜೇಂದ್ರರಾವ್, ಗುಬ್ಬಿಗಾ ರಾಮಚಂದ್ರ, ಶ್ರೀಧರ ಉಡುಪ, ದತ್ತಾತ್ರೇಯ ಉಡುಪ, ಎನ್.ಆರ್. ದೇವಾನಂದ್, ವಕೀಲ ವಿನಾಯಕ, ರಾಜಶ್ರೀ, ಶಶಿಕಲಾ, ಕುಂಬತ್ತಿ ಕೃಷ್ಣಮೂರ್ತಿ, ತೊಗರೆ ಪ್ರಸಾದ್, ಗುರುಶಕ್ತಿ ರಾಘವೇಂದ್ರ, ಗುಂಜತ್ತಿ ವಿಕಾಸ್, ಮೂಡಬಾಗಿಲು ರಮಾನಂದ ಸೇರಿದಂತೆ ನೂರಾರು ವಿಪ್ರ ಸಮಾಜ ಬಾಂಧವರು ಉಪಸ್ಥಿತರಿದ್ದರು.