ಹೊಸನಗರ ; ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಗುಣಮಟ್ಟದ ಕಲಿಕೆಗಾಗಿ ಸರ್ಕಾರ ಹತ್ತು ಹಲವು ಶೈಕ್ಷಣಿಕ ಸೌಲಭ್ಯಗಳನ್ನು ಪ್ರೋತ್ಸಾಹಕಗಳನ್ನು ನೀಡುತ್ತಿದೆ ಎಂದು ಅಕ್ಷರ ದಾಸೋಹದ ತಾಲ್ಲೂಕು ಸಮನ್ವಯಾಧಿಕಾರಿ ಶೇಷಾಚಲ ನಾಯಕ್ ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಗಳು ಗುಣಮಟ್ಟದ ಅರ್ಹತೆ ಹೊಂದಿದ ಶಿಕ್ಷಕರು, ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಗ್ರಂಥಾಲಯ, ಬಿಸಿಯೂಟ, ಕ್ಷೀರಭಾಗ್ಯ ಯೋಜನೆ, ಮೊಟ್ಟೆ, ಬಾಳೆಹಣ್ಣು ವಿತರಣೆ ಇತ್ಯಾದಿ ಕೊಡುಗೆಗಳು ನೀಡುತ್ತಿದ್ದರೂ ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಪೋಷಕರು ಬಲಿಯಾಗುತ್ತಿದ್ದಾರೆ. ಸರ್ಕಾರದ ಜೊತೆಗೆ ವಿದ್ಯಾರ್ಥಿಗಳ ಪೋಷಕರು ಹಾಗೂ ಸಮುದಾಯದ ಸಹಕಾರಗಳ ಸಿಕ್ಕರೆ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಇಂದಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಹೆಮ್ಮೆಯಾಗುತ್ತಿದ್ದು ಸರ್ಕಾರಿ ಶಾಲೆಯೆಂದರೆ ಬಡವರ ಶಾಲೆ ಎಂಬ ತಪ್ಪು ಕಲ್ಪನೆ ಬಿಟ್ಟು ಎಲ್ಲರೂ ಸರ್ಕಾರ ಶಾಲೆಯತ್ತಾ ಚಿತ್ತ ಹರಿಸಬೇಕೆಂದರು.
ಈ ಕಾರ್ಯಕ್ರಮವನ್ನು ಕ್ಷೇತ್ರ ಸಮನ್ವಯಾಧಿಕಾರಿ ರಂಗನಾಥ್ ಉದ್ಘಾಟಿಸಿ ಮಾತನಾಡಿ ಸರ್ಕಾರಿ ಶಾಲೆಯ ಶಿಕ್ಷಣದ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಅಶ್ವಿನಿಕುಮಾರ್ ವಹಿಸಿ ಮಾತನಾಡಿ, ಸರ್ಕಾರದ ಯೋಜನೆಗಳ ಜೊತೆಗೆ ನಮ್ಮ ಶಾಲಾಭಿವೃದ್ಧಿ ಸಮಿತಿ ಸಂಪೂರ್ಣ ಜವಾಬ್ದಾರಿ ಅರಿತು ನಮ್ಮ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಪರಿಣಾಮವಾಗಿ ಗುಣಾತ್ಮಕ ಫಲಿತಾಂಶ ನಮಗೆ ಸಿಗುತ್ತಿದೆ ಸರ್ಕಾರಿ ಶಾಲೆಗಳನ್ನು ಉಳಿಸಲು ಬೆಳೆಸಲು ಹೊರಟಿರುವ ಸರ್ಕಾರಿ ಶಿಕ್ಷಕರು ಮತ್ತು ಇನ್ನಿತರ ಅಧಿಕಾರಿಗಳು ತಮ್ಮ ಮಕ್ಕಳನ್ನು ಮೊದಲು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕರಾದ ವಿನಯ್ ಹೆಗಡೆ, ಪ್ರೌಡ ಶಾಲಾ ಮುಖ್ಯ ಶಿಕ್ಷಕರಾದ ರೇಣುಕೇಶ್, ಶಿಕ್ಷಕಿ ಅಂಜಲಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ರಮ್ಯಾ, ಶಾಹಿನ ನಾಸಿರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯೆ ಲಿಲ್ಲಿ ಡಿಸೋಜ, ತಾಲ್ಲೂಕಿನ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಪೋಷಕರು, ವಿದ್ಯಾರ್ಥಿಗಳು ಅಡುಗೆಯ ಸಿಬ್ಬಂದಿಗಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.