3ನೇ ಬಾರಿಗೆ ಕಳೂರು ಶ್ರೀ ರಾಮೇಶ್ವರ ಸಹಕಾರಿ ಸಂಘದ ಅಧ್ಯಕ್ಷರಾಗಿ ಡಿ.ಆರ್.ವಿನಯ್ ಕುಮಾರ್ ಅವಿರೋಧ ಆಯ್ಕೆ ; ಹಿತೈಷಿಗಳಿಂದ ಹರಿದು ಬಂದ ಅಭಿನಂದನೆಗಳ ಮಹಾಪೂರ

Written by malnadtimes.com

Updated on:

HOSANAGARA ; ಪಟ್ಟಣದ ಪ್ರತಿಷ್ಠಿತ ಕಳೂರು ಶ್ರೀ ರಾಮೇಶ್ವರ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ದುಮ್ಮ ಗ್ರಾಮದ ಡಿ.ಆರ್. ವಿನಯ್ ಕುಮಾರ್ ನೇತೃತ್ವದಲ್ಲಿ ಸಂಘದ ನಿರ್ದೇಶಕರ ಆಯ್ಕೆ ನಡೆದಿತ್ತು. ಒಟ್ಟು 12 ಸದಸ್ಯ ಬಲದ ಸಂಘದಲ್ಲಿ ಒಂಬತ್ತು ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು.

WhatsApp Group Join Now
Telegram Group Join Now
Instagram Group Join Now

ಸಾಲಗಾರರ ಕ್ಷೇತ್ರ-1ರಲ್ಲಿ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಹಾಗು ಮಾಜಿ ನಿರ್ದೇಶಕ ಗುಬ್ಬಿಗ ರವಿ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಜಯಶಾಲಿ ಆಗಿದ್ದರು. ಸಾಲಗಾರರಲ್ಲದ ಕ್ಷೇತ್ರ-1ರಲ್ಲಿ ಸ್ಪರ್ಧಿಸಿದ್ದ ಸಂಘದ ನಿವೃತ್ತ ನೌಕರ ಹೆಚ್. ಶ್ರೀನಿವಾಸ್ ತಮ್ಮ ಪ್ರತಿಸ್ಪರ್ಧಿಯಾದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಜಿ.ನಾಗರಾಜ್ ವಿರುದ್ದ ಭರ್ಜರಿ ಜಯ ಸಾಧಿಸುವ ಮೂಲಕ ಸಹಕಾರಿ ಕ್ಷೇತ್ರದ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ಸಂಕ್ರಾಂತಿ ದಿನದಂದು ಇಲ್ಲಿನ ಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರೆಯಿತು. 

ಅಧ್ಯಕ್ಷ ಸ್ಥಾನಕ್ಕೆ ಡಿ.ಆರ್. ವಿನಯ್ ಕುಮಾರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಆರ್. ಚಿನ್ನಪ್ಪ ಹೊರತು ಬೇರಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಮುಖ್ಯ ಚುನಾವಣಾಧಿಕಾರಿ ವಿನಾಯಕ ನಾವಡ ಅವರು ಫಲಿತಾಂಶ ಘೋಷಿಸಿದರು.

ಸತತ ಮೂರನೇ ಬಾರಿಗೆ ಸಂಘದ ಅಧ್ಯಕ್ಷ ಸ್ಥಾನ ವಿನಯ್ ಕುಮಾರ್ ಅಲಂಕರಿಸಿದರೆ, ಎರಡನೆಯ ಬಾರಿಗೆ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಜಿ.ಆರ್. ಚಿನ್ನಪ್ಪ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

ನಂತರ ನೂತನ ಅಧ್ಯಕ್ಷ ದುಮ್ಮ ವಿನಯ್ ಕುಮಾರ್ ಪತ್ರಕರ್ತರೊಂದಿಗೆ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಸಲ್ಲದು. ಕಳೂರು, ಮುಂಬಾರು ಸೇರಿದಂತೆ ತಾಲ್ಲೂಕಿನ ಕೆಲವು ಸಂಘದಲ್ಲಿ ಈ ಬಾರಿ ಚುನಾವಣೆ ನಡೆದಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಚುನಾವಣೆ ನಡೆದಯಂತೆ ತಡೆಯುವ ಮನೋಸಂಕಲ್ಪ ಸದಸ್ಯರು ಹೊಂದಬೇಕಿದೆ. ಇದರಿಂದ ಸಂಘಕ್ಕೆ ತಗಲುವ ಆರ್ಥಿಕ ನಷ್ಟ ತಪ್ಪಿಸಲು ಸಹಕಾರಿ ಆಗಲಿದೆ.

ಚುನಾವಣೆಯನ್ನು ಯಾವೊಬ್ಬ ಸದಸ್ಯರು ವೈಯಕ್ತಿಕ ಪ್ರತಿಷ್ಠೆಯಾಗಿ ಪರಿಗಣಿಸಬಾರದೆಂದು ವಿನಂತಿಸಿದ ಅವರು, ಸಂಘದ ಹಿರಿಯರ ಮಾರ್ಗದರ್ಶನ, ಸದಸ್ಯರ ಸಹಕಾರವೇ ಈ ಬಾರಿ ತಾವು ಅಧ್ಯಕ್ಷ ಗಾಧಿ ಏರಲು ಕಾರಣವೆಂದರು. ಸಹಕಾರಿ ಧುರೀಣ ಡಾ. ಆರ್.ಎಂ. ಮಂಜುನಾಥ ಗೌಡರ ನಿರಂತರ ಪ್ರೋತ್ಸಾಹ, ಸಲಹೆ, ಸಹಕಾರಗಳೇ ತಾವು ಸಹಕಾರಿ ಕ್ಷೇತ್ರದಲ್ಲಿ ಒಂದಿಷ್ಟು ಸಾಧಿಸಲು ಸಾಧ್ಯವಾಯಿತು ಎಂಬುದಾಗಿ ಆರ್.ಎಂ.ಎಂ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಶಿಮುಲ್ ಅಧ್ಯಕ್ಷ ಗುರುಶಕ್ತಿ ವಿದ್ಯಾಧರ, ಬಾಲಾಜಿ ಇಂಡೇನ್ ಗ್ಯಾಸ್ ಮಾಲೀಕ ಜಗದೀಶ್, ಗುರುಶಕ್ತಿ ಪೆಟ್ರೋಲ್ ಬಂಕ್ ಮಾಲೀಕ ರಾಘವೇಂದ್ರ, ಗುರುಶಕ್ತಿ ಬಸ್ ಮಾಲೀಕ ಸುಹಾಸ್, ಮೇಲಿನಬೆಸಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಹೀರೋ ಹೊಂಡಾ ಶೋ ರೂಂ ಮಾಲೀಕ ಮಲ್ಲಿಕಾ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ತಾ.ಪಂ.ಮಾಜಿ ಸದಸ್ಯ ಎರಗಿ ಉಮೇಶ್, ಪ್ರಮುಖರಾದ ಬಿ.ಆರ್. ಪ್ರಭಾಕರ್, ಶ್ರೀನಿವಾಸ್ ಕಾಮತ್,  ಮಹೇಂದ್ರ, ನಾಸೀರ್, ಗೌತಮ ಆಚಾರ್ಯ, ಮಾಧವ, ಗಿರಿದರ್ಶಿನಿ ಮೆಡಿಕಲ್ ಅನಿಲ್ ಕುಮಾರ್, ಜಯನಗರ ಗೋಪಿನಾಥ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಚಿದಂಬರ, ಲೇಖನಮೂರ್ತಿ ಸೇರಿದಂತೆ ಹಲವರು ಹಾಜರಿದ್ದು ಶುಭ ಕೋರಿದರು.

Leave a Comment