ಹೊಸನಗರ

ಗೊತ್ತಿಲ್ಲದೆ ಆದ ತಪ್ಪನ್ನು ಅರಿವಾದ ಮೇಲೆ ಮರುಕಳಿಸಬಾರದು: ಡಾ. ಸೊನಲೆ ಶ್ರೀನಿವಾಸ್

ದುಶ್ಚಟ ಹಾಗೂ ದುಷ್ಟರ ಸಹವಾಸದಿಂದ ದೂರವಿದ್ದು, ಮಹಾತ್ಮ ಗಾಂಧೀಜಿಯವರ ತತ್ವ-ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ಸತ್ಪ್ರಜೆಗಳಾಗಿ ಬಾಳಬೇಕು ಎಂದು ವಿಶ್ರಾಂತ ಪ್ರಾಚಾರ್ಯ ಹಾಗೂ ಕುವೆಂಪು ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಸೊನಲೆ ಶ್ರೀನಿವಾಸ್ ಕರೆ ನೀಡಿದರು.

Sonale Srinivasa MT

ಹೊಸನಗರ: “ಮನುಷ್ಯನಿಂದ ಗೊತ್ತಿಲ್ಲದೆ ತಪ್ಪುಗಳು ಆಗುವುದು ಸಹಜ, ಆದರೆ ಅದು ತಪ್ಪು ಎಂದು ಅರಿವಾದ ಮೇಲೆ ಮತ್ತೆಂದೂ ಅದನ್ನು ಮಾಡಬಾರದು. ದುಶ್ಚಟ ಹಾಗೂ ದುಷ್ಟರ ಸಹವಾಸದಿಂದ ದೂರವಿದ್ದು, ಮಹಾತ್ಮ ಗಾಂಧೀಜಿಯವರ ತತ್ವ-ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ಸತ್ಪ್ರಜೆಗಳಾಗಿ ಬಾಳಬೇಕು” ಎಂದು ವಿಶ್ರಾಂತ ಪ್ರಾಚಾರ್ಯ ಹಾಗೂ ಕುವೆಂಪು ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಸೊನಲೆ ಶ್ರೀನಿವಾಸ್ ಕರೆ ನೀಡಿದರು.

WhatsApp Group Join Now
Telegram Group Join Now
Instagram Group Join Now

ಪಟ್ಟಣದ ಶ್ರೀ ಗಣಪತಿ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ನವಜೀವನ ಸಮಿತಿಯ ಸಂಯೋಗದೊಂದಿಗೆ ಗಾಂಧಿ ಜಯಂತಿ ಸಂಭ್ರಮಾಚರಣೆಯ ಅಂಗವಾಗಿ ‘ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ’ ಆಯೋಜಿಸಲಾಗಿದ್ದ ಗಾಂಧಿ ಸ್ಮೃತಿ ಹಾಗೂ ನವಜೀವನೋತ್ಸವ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.

ಗಾಂಧೀಜಿಯವರು ಕಂಡ ಕನಸಿನಂತೆ ಗ್ರಾಮಗಳ ಉದ್ಧಾರವಾಗಬೇಕಾದರೆ ಮೊದಲು ಜನರು ದುಶ್ಚಟಗಳಿಂದ ಮುಕ್ತರಾಗಬೇಕು. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿ ಮದ್ಯಪಾನ ಅಥವಾ ಇತರ ದುಶ್ಚಟಗಳಿಗೆ ದಾಸನಾದರೆ ಇಡೀ ಕುಟುಂಬವೇ ಆರ್ಥಿಕ ಹಾಗೂ ಮಾನಸಿಕವಾಗಿ ಕುಗ್ಗಿಹೋಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ದುಶ್ಚಟಮುಕ್ತ ಸಮಾಜದ ನಿರ್ಮಾಣವಾದಾಗ ಮಾತ್ರ ನಾಡಿನಲ್ಲಿ ಸುಭಿಕ್ಷೆ ಹಾಗೂ ಶಾಂತಿ ನೆಲೆಸಲು ಸಾಧ್ಯ. ಈ ನಿಟ್ಟಿನಲ್ಲಿ ಜನಜಾಗೃತಿ ವೇದಿಕೆಯು ಮದ್ಯವರ್ಜನ ಶಿಬಿರಗಳ ಮೂಲಕ ನೂರಾರು ಕುಟುಂಬಗಳಲ್ಲಿ ಹೊಸ ಬೆಳಕು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಸಂಘಟನಾ ಅಧ್ಯಕ್ಷ ಮೋಹನ್ ಜಿ. ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮುರಳಿಧರ್ ಶೆಟ್ಟಿ ಅವರು ಯೋಜನೆಯ ಸಮಾಜಮುಖಿ ಕಾರ್ಯಗಳ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಎನ್.ಆರ್. ದೇವಾನಂದ್ ಹಾಗೂ ಜಿ.ಎಚ್. ದೇವೇಂದ್ರ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.

ಗೌರವ ಸಮರ್ಪಣೆ:

ಇದೇ ಸಂದರ್ಭದಲ್ಲಿ ದುಶ್ಚಟಗಳನ್ನು ತ್ಯಜಿಸಿ ಸಮಾಜದಲ್ಲಿ ಮಾದರಿ ಜೀವನ ನಡೆಸುತ್ತಿರುವ ನವಜೀವನ ಸಮಿತಿಯ ಸದಸ್ಯರುಗಳಿಗೆ ಶಾಲು ಹೊದಿಸಿ ಗೌರವಿಸಲಾಯಿತು.

ಆಶಾಲತಾ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ಯೋಜನಾಧಿಕಾರಿ ನಾರಾಯಣ್ ಸ್ವಾಗತಿಸಿದರು. ಮಧುಕೇಶ್ ಕಾರ್ಯಕ್ರಮ ನಿರೂಪಿಸಿ, ಶ್ಯಾಮಲ ಶ್ರೀಧರ್ ವಂದಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಹಾಗೂ ನವಜೀವನ ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!