ಶಿಕ್ಷಣ ಕ್ಷೇತ್ರಕ್ಕೂ ಭ್ರಷ್ಟಾಚಾರದ ಕಲೆ ಅಂಟಿದೆ ; ಆತಂಕ ವ್ಯಕ್ತಪಡಿಸಿದ ಆರಗ ಜ್ಞಾನೇಂದ್ರ

Written by malnadtimes.com

Published on:

HOSANAGARA ; ಸುಶಿಕ್ಷಿತ ವರ್ಗದ ಜನರೇ ಇಂದು ಭಯೋತ್ಪಾದನೆ ದಾಳಿ ಮಾರ್ಗ ಅನುಸರಿಸುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಖೇಧ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Instagram Group Join Now

ತಾಲೂಕಿನ ಕಾರಣಗಿರಿ ಸರಕಾರಿ ಪ್ರೌಢಶಾಲೆಗೆ ವಿವೇಕ ಶಾಲಾ ಯೋಜನೆ ಹಾಗೂ ರಾಜ್ಯ ವಲಯ ಯೋಜನೆ ಅಡಿಯಲ್ಲಿ 54 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡಿದ್ದ ಮೂರು ನೂತನ ಕೊಠಡಿಗಳನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಆಗಬೇಕಿದ್ದು, ರಾಷ್ಟ್ರ ಭಕ್ತಿ, ಸ್ವಾತಂತ್ರ್ಯ ಹೋರಾಟಗಾರರು, ಹಲವು ದೇಶ ಪ್ರೇಮಿಗಳನ್ನು ಕುರಿತಂತೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಮೂಲಕ ಜಾಗೃತಿ ಮೂಡಿಸಬೇಕಿದೆ. ಆಧುನಿಕತೆಯ ನಾಗಾಲೋಟಕ್ಕೆ ಮನಸೋತ ಇಂದಿನ ಯುವಸಮೂಹ ಮಾದಕವಸ್ತುಗಳ ವ್ಯವಸದಿಂದ ದೂರ ಇರುವಂತೆ ನೋಡಿಕೊಳ್ಳಬೇಕಾದ ಗುರುತರ ಜವಾಬ್ದಾರಿ ಇಡೀ ಸಮಾಜದ ಮೇಲಿದೆ. ಅಲ್ಲದೆ, ಶಿಕ್ಷಣದಿಂದ ಸಾಮಾಜಿಕ ಪರಿವರ್ತನೆಯೂ ಆಗಬೇಕಿದೆ ಎಂದರು.

ಶಿಕ್ಷಣ ಕ್ಷೇತ್ರಕ್ಕೆ ಭ್ರಷ್ಟಾಚಾರದ ಕಲೆ ಅಂಟಿದೆ ಎಂಬ ಆತಂಕ ವ್ಯಕ್ತಡಿಸಿದ ಆರಗ, ಈ ಹಿಂದೆ ತಾವು ರಾಜ್ಯ ಗೃಹ ಖಾತೆ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ನಡೆದ ಸುಮಾರು 450 ಪೊಲೀಸ್ ಸಬ್ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ ನಡೆದ ಪರೀಕ್ಷೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿತ್ತು. ಉತ್ತರ ಕರ್ನಾಟಕದ ಹಲವು ಮಂದಿ ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಸೂಕ್ತ ತನಿಖೆಗಾಗಿ ನಾನು ನೇಮಿಸಿದ ಪೊಲೀಸ್ ಎಸ್ಐಟಿ ತಂಡವು, ಪರೀಕ್ಷೆಯಲ್ಲಿ ಅಕ್ರಮ ಎಸಗಲು ಸಹಕಾರ ನೀಡಿದ್ದ ಓರ್ವ ಐಪಿಎಸ್ ಅಧಿಕಾರಿ ಸೇರಿದಂತೆ ಪ್ರಕರಣದಲ್ಲಿ ಶಾಮೀಲಾಗಿದ್ದ ಸುಮಾರು 106 ಆರೋಪಿಗಳ ಹೆಡೆಮುರಿ ಕಟ್ಟಿ ಬಂಧಿಸಲಾಯಿತು. ‌ಇದರಿಂದ ಆಡಳಿತದಲ್ಲಿನ ಪಾರದರ್ಶಕತೆ ಕಾಯ್ದುಕೊಳ್ಳಲು ಸಹಕಾರಿಯಾಯಿತು ಎಂದರು.

ಪ್ರಾಸ್ತಾವಿಕ ಮತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಕೃಷ್ಣಮೂರ್ತಿ, ಸರ್ಕಾರದ ಬಿಸಿಯೂಟ, ಮೊಟ್ಟೆ, ಸಮವಸ್ತ್ರ ಸೇರಿದಂತೆ ಹಲವಾರು ಉಚಿತ ಯೋಜನೆಗಳ ಸದುಪಯೋಗದಿಂದ ಗ್ರಾಮೀಣ ಭಾಗದ ಮಕ್ಕಳಿಂದ ರಾಷ್ಟ್ರಮಟ್ಟದ ಎಲ್ಲಾ ವಿಭಾಗಗಳಲ್ಲಿ ಪೈಪೋಟಿ ನೀಡಲು ಸಹಕಾರಿ ಆಗಿದೆ ಎಂದರು.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎನ್.ಎಸ್. ಶ್ರೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ರಾಮಚಂದ್ರಪುರ ಗ್ರಾಮ ಪಂಚಾಯತಿ ಅಧ್ಯಕ್ಷ ವಿ.ಎನ್.ಸುಬ್ರಮಣ್ಯ, ಉಪಾಧ್ಯಕ್ಷೆ ರುಕ್ಮಿಣಿ, ಸದಸ್ಯರಾದ ಗುರುಮೂರ್ತಿ, ರತ್ನಮ್ಮ, ಆದಿಲ್, ಪಾರ್ವತಿ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ತಹಶೀಲ್ದಾರ್ ರಶ್ಮಿ, ಪ್ರಮುಖರಾದ ಶಿಕ್ಷಕ ಪುಟ್ಟಪ್ಪ, ರೇಣುಕೇಶ್, ಕರಿಬಸಪ್ಪ, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ, ಎಸ್ಡಿಎಂಸಿ ಸದಸ್ಯರಾದ ಗಂಗಾಧರ್, ರಾಜೇಶ್, ಜಗನ್ನಾಥ, ಮಂಜುನಾಥ್, ಕಲಾವತಿ, ಲೋಲಾಕ್ಷಿ, ಪಾರ್ವತಿ, ಶೋಭಾ ನಾಗರಕೊಡಿಗೆ ಶಶಿ, ಶ್ರೀಪತಿ ವಾಟಗದ್ದೆ, ಹನಿಯ ರವಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ನಿವೃತ್ತ ಶಿಕ್ಷಕರಾದ ತಿರುಪತಿ ನಾಯ್ಕ್, ಸೇರಿದಂತೆ ಹಲವರನ್ನು ಆತ್ಮೀಯವಾಗಿ ಸನ್ಮಾನಿಸಿದರು.

Leave a Comment