ಹೊಸನಗರ ; ಹೆಗ್ಗೋಡಿನ ಕೆ.ವಿ. ಸುಬ್ಬಣ್ಣ ರಂಗ ಸಮೂಹ ಮತ್ತು ದೊಂಬೆಕೊಪ್ಪ ಸಾರ ಕೇಂದ್ರ ಇವರ ಸಹಯೋಗದಲ್ಲಿ ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಗ್ರಾಮದ ಸಾರ ಸಂಸ್ಥೆಯಲ್ಲಿ ನಡೆಸುತ್ತಿರುವ ರಂಗಕರ್ಮಿ, ಚಲನಚಿತ್ರ ನಟ ದಿ. ಯೇಸುಪ್ರಕಾಶ್ ಅವರ ನೆನಪು ಕುರಿತಾದ ನಾಟಕೋತ್ಸವ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಹೆಸರಾಂತ ರಂಗಭೂಮಿ, ಚಲನಚಿತ್ರ ನಟ ಪ್ರಕಾಶ್ ಬೆಳವಾಡಿ ಚಾಲನೆ ನೀಡಿ ಮಾತನಾಡಿದರು.
ಪರಿಸರ ಜಾಗೃತಿಯ ಜೊತೆ ಜೊತೆಗೆ ಪ್ರತಿಯೊಬ್ಬರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಕುರಿತು ಅವಲೋಕಿಸ ಬೇಕಿದೆ. ತಪ್ಪಿದಲ್ಲಿ ಭವಿಷ್ಯದಲ್ಲಿ ಭಾರೀ ಗಂಡಾತರ ಕಾದಿದೆ ಎಂದರು.
ಪ್ರಸನ್ನ ಹುಣಸೆಕೊಪ್ಪ ಪ್ರಾಸ್ಥಾವಿಕ ಮಾತನಾಡಿ, ಯೇಸು ಪ್ರಕಾಶ್ ಅವರು ಕೆ ವಿ ಸುಬ್ಬಣ್ಣ ರಂಗ ಸಮೂಹ ಮತ್ತು ಸಾರ ಸಂಸ್ಥೆಯ ಹತ್ತಿರದ ಒಡನಾಡಿಯಾಗಿದ್ದು ಸಾಮಾಜಿಕ, ಪರಿಸರ ಕುರಿತಂತೆ ಹಲವು ಸಮಾಜಪರ ಕಾರ್ಯಗಳಿಗೆ ಕೈ ಜೋಡಿಸಿದ್ದು ಅವರ ಹೆಗ್ಗಳಿಕೆ. ಅನೇಕ ನಾಟಕ, ಸಿನಿಮಾಗಳಲ್ಲಿ ಅಭಿನಯದ ಜೊತೆಗೆ, ತನ್ನ ಸುತ್ತಲ ಸಂಕಷ್ಟದಲ್ಲಿದ್ದ ಜೀವಗಳಿಗೆ ಸಹಾಯ ನೀಡುವ ಮೂಲಕ ಸಮಾಜಮುಖಿ ಮನೋಭಾವ ಹೊಂದಿದ್ದರು ಎಂದರು.
ಹಿರಿಯ ರಂಗಕರ್ಮಿ ಪುರಪ್ಪೆಮನೆ ನಾರಾಯಣ ಭಟ್ ಮತ್ತು ನಿರ್ಮಲ ದಂಪತಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೀಪಾದ ಭಗವತ್ ಪರಿಚಯಸಿದರು. ನಂತರ ಮಂಚಿಕೆರೆ ಕಲಾತಂಡದಿಂದ ‘ಕಾಲ ಚಕ್ರ’ ನಾಟಕ ಪ್ರದರ್ಶನಗೊಂಡಿತು.
ಈ ವೇಳೆ ಸಾರ ಕೇಂದ್ರದ ಅಧ್ಯಕ್ಷ ಗುರುಪಾದಪ್ಪ ಗೌಡ, ಕೆ.ವಿ ಸುಬ್ಬಣ್ಣ ರಂಗ ಸಮೂಹದ ಅಧ್ಯಕ್ಷ ಗುರುಮೂರ್ತಿ ವರದಾಮೂಲ, ಸಾರ ಸಂಸ್ಥೆ ಸಂಸ್ಥಾಪಕ ಅರುಣ್ ಕುಮಾರ್ ಉಪಸ್ಥಿತರಿದ್ದರು.
ರತ್ನಾಕರ್ ಸಿ ಕುನುಗೋಡು ನಿರೂಪಿಸಿ, ಪದ್ಮಶ್ರೀ ಹಾರೆಗೊಪ್ಪ ಸ್ವಾಗತಿಸಿದರು. ಗಣಪತಿ ಹೆಗಡೆ ನಂದೀತಳೆ ವಂದಿಸಿದರು.
ವೀರಾಂಜನೇಯ ರಥೋತ್ಸವ ನಾಳೆ
ಹೊಸನಗರ ; ಹನುಮ ಜಯಂತಿ ದಿನವಾದ ಇಂದು ಪಟ್ಟಣದ ಶ್ರೀ ವೀರಾಂಜನೇಯ ದೇವರ 17 ವರ್ಧಂತ್ಯುತ್ಸವ ಅಂಗವಾಗಿ ಶ್ರೀ ದೇವರ ರಥೋತ್ಸವ ನಡೆಯಲಿದೆ.
ಶನಿವಾರ ಬೆಳಗ್ಗೆ ಗೋಪೂಜೆ, ಗಣಹೋಮ, ರಾಮತಾರಕ ಹೋಮ, ತೊಟ್ಟಿಲು ಸೇವೆ, ರುದ್ರಾಭಿಷೇಕ, ಪವಮಾನ ಅಭಿಷೇಕ, ತತ್ವಾಧಿವಾಸ ಹೋಮ ಮಹಾಮಂಗಳಾರತಿ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಸಹಿತ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿದ್ದು, ಸಂಜೆ 5 ಗಂಟೆಗೆ ಶ್ರೀ ವೀರಾಂಜನೆಯ ದೇವರ ರಥೋತ್ಸವ ನಡೆಯಲಿದೆ ಎಂದು ದೇವಾಲಯದ ಸಂಚಾಲಕ ವಿನಯ್ ತಿಳಿಸಿದ್ದಾರೆ.