ಹೊಸನಗರ

ಹೊಸನಗರ ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆ ಗಂಭೀರ; ಕಾಂಗ್ರೆಸ್ ನಾಯಕರ ಹೇಳಿಕೆಗೆ ಆಲವಳ್ಳಿ ವೀರೇಶ್ ಆಕ್ಷೇಪ

ಕಾಂಗ್ರೆಸ್ ಮುಖಂಡರು ವಾಸ್ತವವನ್ನು ಮುಚ್ಚಿಟ್ಟು ಎಲ್ಲವೂ ಸುಸ್ಥಿತಿಯಲ್ಲಿದೆ ಎಂಬಂತೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಾ.ಪಂ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಆಲವಳ್ಳಿ ವೀರೇಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Veeresh Alavalli

ಹೊಸನಗರ: ತಾಲ್ಲೂಕಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ನಿರಂತರ ಏರುಪೇರಾಗುತ್ತಿದ್ದರೂ, ಕಾಂಗ್ರೆಸ್ ಮುಖಂಡರು ವಾಸ್ತವವನ್ನು ಮುಚ್ಚಿಟ್ಟು ಎಲ್ಲವೂ ಸುಸ್ಥಿತಿಯಲ್ಲಿದೆ ಎಂಬಂತೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಾ.ಪಂ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಆಲವಳ್ಳಿ ವೀರೇಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಬುಧವಾರ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಸ್ಥಳೀಯ ಮುಖಂಡರ ನಿರ್ಲಕ್ಷ್ಯದ ಕುರಿತು ಹರಿಹಾಯ್ದರು.

ವಾಸ್ತವ ಮುಚ್ಚಿಡುವ ಯತ್ನ: ವೀರೇಶ್ ಕಿಡಿ

ಖಾಲಿ ಭರವಸೆಗಳು: ಬ್ಲಾಕ್ ಕಾಂಗ್ರೆಸ್ ಮುಖಂಡ ಬಿ.ಜಿ. ಚಂದ್ರಮೌಳಿ ಅವರು ತಾಲ್ಲೂಕಿನಲ್ಲಿ ವಿದ್ಯುತ್ ಕೊರತೆಯೇ ಇಲ್ಲವೆಂಬಂತೆ ಹೇಳಿಕೆ ನೀಡುತ್ತಿದ್ದಾರೆ. ಆದರೆ, ತಮ್ಮದೇ ಸ್ವಂತ ಊರಿನಲ್ಲಿ ವಿದ್ಯುತ್ ಕೇಂದ್ರವನ್ನು ಸ್ಥಾಪಿಸಲು ಇವರಿಂದ ಸಾಧ್ಯವಾಗಿಲ್ಲ.

ಹಿಂದಿನ ಯೋಜನೆಗಳ ಪಾಡು: ರಿಪ್ಪನ್‌ಪೇಟೆ ಸಮೀಪದ ಅಮೃತ ಗ್ರಾಮದಲ್ಲಿ ಬಹುತೇಕ ಪೂರ್ಣಗೊಂಡಿದ್ದ 110 ಕೆ.ವಿ. ವಿದ್ಯುತ್ ಉಪಕೇಂದ್ರವು ಇನ್ನೂ ಅನುಷ್ಠಾನಗೊಂಡಿಲ್ಲ. ಇತ್ತ ಕೋಡೂರಿನ 33 ಕೆ.ವಿ. ಕೇಂದ್ರದ ಪ್ರಸ್ತಾವನೆ ಕಡತದಲ್ಲೇ ಕೊಳೆಯುತ್ತಿದೆ. ಇವುಗಳನ್ನು ಪೂರ್ಣಗೊಳಿಸುವುದನ್ನು ಬಿಟ್ಟು, ಹೊಸನಗರ ಬಳಿ ಹೊಸದಾಗಿ 110 ಕೆ.ವಿ. ಸ್ಥಾವರ ಮಾಡುತ್ತೇವೆಂದು ಜನರಿಗೆ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ.

ಅಭಿವೃದ್ಧಿ ಶೂನ್ಯ: ಮೆಸ್ಕಾಂನ ಹಿರಿಯ ಅಧಿಕಾರಿಗಳೇ ತಾಂತ್ರಿಕ ಅಡಚಣೆಗಳಿವೆ ಎಂದು ಒಪ್ಪಿಕೊಳ್ಳುತ್ತಿದ್ದರೂ, ಆಡಳಿತ ಪಕ್ಷದವರು ಜನರ ಸಮಸ್ಯೆಗಳಿಗೆ ಕಿವುಡಾಗಿದ್ದಾರೆ. ಸರ್ಕಾರದಿಂದ ಸೂಕ್ತ ಅನುದಾನ ಬಿಡುಗಡೆಯಾಗುತ್ತಿಲ್ಲ, ಯಾವುದೇ ಯೋಜನೆಗಳನ್ನು ಪೂರ್ಣಗೊಳಿಸುವ ಇಚ್ಛಾಶಕ್ತಿಯೂ ಇವರಿಗಿಲ್ಲ ಎಂದು ಆಪಾದಿಸಿದರು.

“ಹಿಂದೆ ಹರತಾಳು ಹಾಲಪ್ಪ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಹರಿದ್ರಾವತಿಯಲ್ಲಿ 33 ಕೆ.ವಿ. ಕೇಂದ್ರ ಸ್ಥಾಪನೆಯಾಯಿತು. ಆರಗ ಜ್ಞಾನೇಂದ್ರ ಅವರ ಕ್ಷೇತ್ರದ ಬೈಸೆ ಗ್ರಾಮದಲ್ಲೂ ಕಾಮಗಾರಿ ಅಂತಿಮ ಹಂತ ತಲುಪಿದೆ. ಆದರೆ, ಪ್ರಸ್ತುತ ಸರ್ಕಾರದ ಅವಧಿಯಲ್ಲಿ ನಡೆದಿರುವ ಹೊಸ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಶೂನ್ಯ. ಪತ್ರಿಕಾ ಹೇಳಿಕೆಗಳನ್ನು ಕೊಡುವ ಮುನ್ನ ಕಾಂಗ್ರೆಸ್ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಲಿ.”
– ಆಲವಳ್ಳಿ ವೀರೇಶ್, ತಾ.ಪಂ. ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ

ಆಡಳಿತ ಯಂತ್ರ ಸ್ಥಗಿತ

ತಾಲ್ಲೂಕಿನ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಪ್ರಮುಖ ಅಧಿಕಾರಿಗಳ ಹುದ್ದೆಗಳು ಭರ್ತಿಯಾಗದೆ ಖಾಲಿ ಬಿದ್ದಿವೆ. ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು, ಇದಕ್ಕೆ ಕಾರಣವೇನು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎನ್. ಸತೀಶ್, ಪ್ರಮುಖರಾದ ಉಮೇಶ್ ಕಂಚುಗಾರ್, ಹಾಲಗದ್ದೆ ಉಮೇಶ್, ಶಿವಾನಂದ ಹಿರೇಮಣತಿ, ಗಣೇಶ್ ಹಿರೇಮಣತಿ, ಮಂಡಾನಿ ಮೋಹನ, ರಾಜೇಶ್ ಜೈನ್, ಮೆಣಸೆ ಆನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!