ಹೊಸನಗರ: ಪಟ್ಟಣದ ಶಿವಮೊಗ್ಗ ರಸ್ತೆಯ ನಿವಾಸಿ, ಆಟೋ ಚಾಲಕ ಹಾಗೂ ನಂದಿನಿ ಹಾಲು ವಿತರಕರಾದ ಜಗದೀಶ್ ಶೆಣೈ (43) ಅನಾರೋಗ್ಯದ ಕಾರಣ ಮಂಗಳವಾರ ಬೆಳಿಗ್ಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವಿಧಿವಶರಾದರು.
ಪಾಂಡುರಂಗ ಶೆಣೈ ಹಾಗೂ ಗಿರಿಜಮ್ಮ ದಂಪತಿಯ ಪುತ್ರರಾದ ಇವರು, ಹೊಸನಗರದಲ್ಲಿ ‘ಜಗ್ಗು’ ಎಂದೇ ಚಿರಪರಿಚಿತರಾಗಿದ್ದರು. ಜೀವನದ ಏಳುಬೀಳುಗಳ ನಡುವೆಯೂ ಕಷ್ಟಪಟ್ಟು ದುಡಿಯುತ್ತಿದ್ದ ಜಗದೀಶ್, ಸ್ವಂತ ಆಟೋ ಓಡಿಸಿಕೊಂಡು ಹಾಗೂ ನಂದಿನಿ ಹಾಲು ವಿತರಕರಾಗಿ ಕಾಯಕ ನಿಷ್ಠೆ ಮೆರೆದಿದ್ದರು. ತಮ್ಮ ವಿನಯವಂತಿಕೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಇವರು, ವೃದ್ಧ ತಂದೆ-ತಾಯಿಗೆ ಆಸರೆಯಾಗಿದ್ದರು.
ಮೃತರು ತಂದೆ, ತಾಯಿ, ಪತ್ನಿ, ಮೂರು ವರ್ಷದ ಮಗು, ಓರ್ವ ಸಹೋದರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಸ್ವಯಂಪ್ರೇರಿತ ಬಂದ್ ಮೂಲಕ ಗೌರವ:
ಜಗದೀಶ್ ಅವರ ಅಕಾಲಿಕ ನಿಧನಕ್ಕೆ ಹೊಸನಗರದ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ನಂದಿನಿ ಹಾಲು ವಿತರಕರು ತೀವ್ರ ಕಂಬನಿ ಮಿಡಿದಿದ್ದಾರೆ. ಮೃತರ ಗೌರವಾರ್ಥವಾಗಿ ಮಧ್ಯಾಹ್ನ 2 ಗಂಟೆಯವರೆಗೆ ಪಟ್ಟಣದಲ್ಲಿ ಆಟೋ ಸಂಚಾರವನ್ನು ಸ್ಥಗಿತಗೊಳಿಸಿ, ನಂದಿನಿ ಹಾಲಿನ ಮಳಿಗೆಗಳನ್ನು ಬಂದ್ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

