ಹೊಸನಗರ

ಮಲೆನಾಡಿನ ಜಮೀನುಗಳಲ್ಲಿ ಮೇಳೈಸಿದ ಭೂಮಿ ಹುಣ್ಣಿಮೆ ಸಂಭ್ರಮ: ಹಬ್ಬದ ವಿಶೇಷತೆ ಮೆಲುಕು ಹಾಕಿದ ಹರತಾಳು ಹಾಲಪ್ಪ

ಪ್ರಕೃತಿ ಹಾಗೂ ಕೃಷಿ ಬದುಕಿನ ಅವಿನಾಭಾವ ಸಂಬಂಧವನ್ನು ಸಾರುವ ಮಲೆನಾಡಿನ ಸಾಂಪ್ರದಾಯಿಕ ‘ಭೂಮಿ ಹುಣ್ಣಿಮೆ’ ಹಬ್ಬವನ್ನು ಈ ಭಾಗದಲ್ಲಿ ಅತ್ಯಂತ ಶ್ರದ್ಧೆ ಹಾಗೂ ಸಡಗರದಿಂದ ಆಚರಿಸಲಾಯಿತು.

Harathalu Halappa Bhoomi Hunnime2

ರಿಪ್ಪನ್‌ಪೇಟೆ: ಪ್ರಕೃತಿ ಹಾಗೂ ಕೃಷಿ ಬದುಕಿನ ಅವಿನಾಭಾವ ಸಂಬಂಧವನ್ನು ಸಾರುವ ಮಲೆನಾಡಿನ ಸಾಂಪ್ರದಾಯಿಕ ‘ಭೂಮಿ ಹುಣ್ಣಿಮೆ’ ಹಬ್ಬವನ್ನು ಈ ಭಾಗದಲ್ಲಿ ಅತ್ಯಂತ ಶ್ರದ್ಧೆ ಹಾಗೂ ಸಡಗರದಿಂದ ಆಚರಿಸಲಾಯಿತು.

WhatsApp Group Join Now
Telegram Group Join Now
Instagram Group Join Now

ಹಬ್ಬದ ಪ್ರಯುಕ್ತ ಮಾಧ್ಯಮಗಳೊಂದಿಗೆ ತಮ್ಮ ಅನುಭವ ಹಂಚಿಕೊಂಡ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, “ಭೂಮಿಯನ್ನು ತಾಯಿಯಂತೆ ಆರಾಧಿಸುವ ಅನ್ನದಾತರು ಜಮೀನಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುವುದು ತಲೆತಲಾಂತರಗಳಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಪೂರ್ವಿಕರ ಈ ಆಚರಣೆಯನ್ನು ಮುಂದಿನ ಪೀಳಿಗೆಗೂ ಪರಿಚಯಿಸಿ ಉಳಿಸಿ-ಬೆಳೆಸುವ ಉದ್ದೇಶದಿಂದ ನಾನು ಪ್ರತಿವರ್ಷ ತಪ್ಪದೇ ಸ್ವಗ್ರಾಮದಲ್ಲಿ ಹಬ್ಬ ಆಚರಿಸುತ್ತೇನೆ” ಎಂದರು.

ಭೂಮಿ ಹುಣ್ಣಿಮೆ ಹಬ್ಬದ ಅಂಗವಾಗಿ ಮಾಜಿ ಸಚಿವ ಹರತಾಳು ಹಾಲಪ್ಪ ತಮ್ಮ ಸ್ವಗ್ರಾಮ ಹರತಾಳಿನಲ್ಲಿ ಜಮೀನಿನಲ್ಲಿ ಭೂಮಿತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.

ಹಬ್ಬದ ಆಚರಣೆಯ ಕುರಿತು ವಿವರಿಸಿದ ಅವರು, “ಮನೆಯ ಮುತ್ತೈದೆಯರು ರಾತ್ರಿಯಿಡೀ ಶುದ್ಧಾಚಾರದಿಂದ ಸಿದ್ಧಪಡಿಸಿದ ತರಹೇವಾರಿ ಖಾದ್ಯಗಳನ್ನು ಚಿತ್ತಾರ ಬಿಡಿಸಿದ ಭೂಮಣಿ ಬುಟ್ಟಿಯಲ್ಲಿ ಇರಿಸುತ್ತಾರೆ. ಮುಂಜಾನೆ ಕಾಗೆ ಹಾರುವ ಮುನ್ನವೇ ಮನೆಯ ಹಿರಿಯರು ಈ ಬುಟ್ಟಿ, ಮಣ್ಣಿನ ಹಣತೆ ಹಾಗೂ ಕಳಸವನ್ನು ಹಿಡಿದು ಜಮೀನಿಗೆ ತೆರಳಿ ಪೂಜೆ ಸಲ್ಲಿಸುವುದು ಈ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ” ಎಂದು ಸ್ಮರಿಸಿದರು.

ಹೊಸನಗರ ತಾಲ್ಲೂಕಿನ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದಲ್ಲಿ ಅಭಿನವ ಚನ್ನಬಸವ ಮಹಾಸ್ವಾಮೀಜಿ ಭೂಮಿ ಹುಣ್ಣಿಮೆ ಪ್ರಯುಕ್ತ ಭಕ್ತರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಸಂಭ್ರಮಸಿದರು.

ಹಬ್ಬದ ಆಚರಣೆಯ ವಿಶೇಷತೆ:

ಹಬ್ಬದ ಮುನ್ನಾದಿನ ಸಂಜೆಯೇ ರೈತರು ತಮ್ಮ ಭತ್ತದ ಗದ್ದೆ ಹಾಗೂ ಅಡಿಕೆ ತೋಟಗಳ ನಡುವೆ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸುತ್ತಾರೆ. ಅಲ್ಲಿ ಬಾಳೆಕಂದು, ಕಬ್ಬಿನ ಜಲ್ಲೆ, ತಳಿರು-ತೋರಣ ಹಾಗೂ ಚೆಂಡುಹೂವಿನ ಗಿಡಗಳನ್ನು ನೆಟ್ಟು ಸಿಂಗರಿಸುತ್ತಾರೆ. ಮರುದಿನ ಬೆಳಿಗ್ಗೆ ಆ ಸ್ಥಳಕ್ಕೆ ತೆರಳಿ ಭೂತಾಯಿಗೆ ಬಿಳಿ, ಹಸಿರು ಮತ್ತು ಹಳದಿ ಬಣ್ಣದ ಕುಪ್ಪಸ ತೊಡಿಸಿ, ಚಿನ್ನಾಭರಣ ಹಾಗೂ ಹೂವುಗಳಿಂದ ಅಲಂಕರಿಸಿ ಭಕ್ತಿಯಿಂದ ಪೂಜಿಸಲಾಗುತ್ತದೆ.

ಹೊಸನಗರ ತಾಲ್ಲೂಕಿನ ಹಾರೋಹಿತ್ತಲು ಗ್ರಾಮದ ನಾಗರತ್ನ ಸಿದ್ದಪ್ಪಗೌಡರ ಕುಟುಂಬದವರು ಭೂಮಿ ಹುಣ್ಣಿಮೆ ಪ್ರಯುಕ್ತ ಭೂತಾಯಿಗೆ ಪೂಜೆ ಸಲ್ಲಿಸಿ ಸಂಭ್ರಮಸಿದರು.

ರಾತ್ರಿಯಿಡೀ ಜಾಗರಣೆ ಮಾಡಿ ವಿವಿಧ ಬಗೆಯ ಸೊಪ್ಪು-ತರಕಾರಿಗಳಿಂದ ತಯಾರಿಸಿದ ಬೆರಕೆ ಸೊಪ್ಪಿನ ಪಲ್ಯ, ಹೋಳಿಗೆ, ಕಡಬು ಸೇರಿದಂತೆ ಬಗೆಬಗೆಯ ಭಕ್ಷ್ಯಗಳನ್ನು ಭೂದೇವಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಬಳಿಕ ಬೆಳೆಗಳಿಗೆ ಯಾವುದೇ ರೋಗ-ರುಜಿನ ಬಾರದಿರಲಿ, ಉತ್ತಮ ಫಸಲು ದೊರೆಯಲಿ ಎಂದು ಪ್ರಾರ್ಥಿಸುತ್ತಾ ಹೊಲ-ತೋಟಗಳಲ್ಲಿ ‘ಚರಗ’ ಚೆಲ್ಲಲಾಗುತ್ತದೆ. ಪೂಜಾ ಕೈಂಕರ್ಯಗಳು ಪೂರ್ಣಗೊಂಡ ನಂತರ ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಹಿತೈಷಿಗಳು ಜಮೀನಿನಲ್ಲಿಯೇ ಒಟ್ಟಾಗಿ ಕುಳಿತು ಹಬ್ಬದ ವಿಶೇಷ ಭೋಜನ ಸವಿಯುವ ಮೂಲಕ ಸಂಭ್ರಮಿಸುತ್ತಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!