ಹೊಸನಗರ

ಹೊಸನಗರ ಜಿ.ಪಂ ಕ್ಷೇತ್ರ – ಕಾಂಗ್ರೆಸ್‌ನಲ್ಲಿ ಮಹಿಳಾ ನಾಯಕತ್ವದ ಪೈಪೋಟಿ: ಟಿಕೆಟ್ ರೇಸ್‌ನಲ್ಲಿ ಮುಂಚೂಣಿಗೆ ರಾಧಿಕಾ ಶ್ರೇಷ್ಟಿ

ಹೊಸನಗರ ಜಿ.ಪಂ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಾಲ್ಲೂಕಿನ ಪ್ರಮುಖ ಸಮಾಜ ಸೇವಕಿ ಹಾಗೂ ಸಾಂಸ್ಕೃತಿಕ ಸಂಘಟಕಿ ರಾಧಿಕಾ ರತ್ನಾಕರ ಶ್ರೇಷ್ಟಿ ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.

Radhika Rathnakar

ಹೊಸನಗರ: ಮುಂಬರುವ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಚುನಾವಣೆಯ ಕಣ ರಂಗೇರುತ್ತಿದ್ದು, ಹೊಸನಗರ ಜಿ.ಪಂ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಾಲ್ಲೂಕಿನ ಪ್ರಮುಖ ಸಮಾಜ ಸೇವಕಿ ಹಾಗೂ ಸಾಂಸ್ಕೃತಿಕ ಸಂಘಟಕಿ ರಾಧಿಕಾ ರತ್ನಾಕರ ಶ್ರೇಷ್ಟಿ ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಹೌದು, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ರಾಜಕೀಯ ರಂಗಗಳಲ್ಲಿ ಕಳೆದ ಎರಡೂವರೆ ದಶಕಗಳಿಗೂ ಹೆಚ್ಚು ಕಾಲದಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ಮಹಿಳಾ ಸಬಲೀಕರಣ ಹಾಗೂ ಯುವಜನ ಸೇವೆಯ ಮೂಲಕ ತಾಲ್ಲೂಕಿನಲ್ಲಿ ತಮ್ಮದೇ ಆದ ಜನಪ್ರಿಯತೆ ಗಳಿಸಿದ್ದಾರೆ.

ಬಾಲ್ಯ ಹಾಗೂ ಸಾಂಸ್ಕೃತಿಕ ಬದುಕು:

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದವರಾದ ಇವರು ರಂಗನಾಥ ಶ್ರೇಷ್ಟಿ ಹಾಗೂ ನಾಗರತ್ನ ದಂಪತಿಯ ಪುತ್ರಿ. ಬಾಲ್ಯದಿಂದಲೇ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ಇವರು, ಬಾಲ ರಾಮಾಯಣ ಹಾಗೂ ಮಹಾಭಾರತ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಹಿಂದಿ ಭಾಷೆಯ ಪ್ರಥಮ, ಮಧ್ಯಮ, ಪ್ರವೇಶಿಕ ಪರೀಕ್ಷೆಗಳು ಹಾಗೂ ಆಂಗ್ಲ ಟೈಪಿಂಗ್ ಸೀನಿಯರ್ ಪರೀಕ್ಷೆಗಳನ್ನು ಪೂರೈಸಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ.

ಯುವಶಕ್ತಿ ಸಂಘಟನೆ ಹಾಗೂ ರಾಷ್ಟ್ರಮಟ್ಟದ ಸಾಧನೆ:

1993ರಲ್ಲಿ ಹೊಸನಗರದ ಡಿ.ಎಂ. ರತ್ನಾಕರ ಶ್ರೇಷ್ಟಿ ಅವರೊಂದಿಗೆ ವಿವಾಹವಾದ ಬಳಿಕ, ಇಲ್ಲಿನ ಕಳೂರು ಯುವತಿ ಮಂಡಳಿಯ (ರಿ) ಅಧ್ಯಕ್ಷೆಯಾಗಿ ಸತತ 28 ವರ್ಷಗಳಿಂದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಇವರ ನಾಯಕತ್ವದಲ್ಲಿ ವಾರಾಣಸಿಯಲ್ಲಿ ನಡೆದ ಅಂತಾರಾಷ್ಟ್ರೀಯ ಯುವಜನ ಮೇಳದಲ್ಲಿ ರಾಜ್ಯ ತಂಡ ಭಾಗವಹಿಸಿತ್ತು. ಜಾನಪದ ನೃತ್ಯ ಸ್ಪರ್ಧೆಗಳಲ್ಲಿ ಇವರ ತಂಡ 14 ಬಾರಿ ರಾಜ್ಯ ಪ್ರಶಸ್ತಿ ಹಾಗೂ ಒಂದು ಬಾರಿ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ತಾಲ್ಲೂಕಿಗೆ ಕೀರ್ತಿ ತಂದಿದೆ.

ರಾಜಕೀಯ ಹಾಗೂ ಸಾಂಸ್ಥಿಕ ಹಿನ್ನೆಲೆ:

ಹೊಸನಗರ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಮೂರು ಬಾರಿ ಸದಸ್ಯರಾಗಿ ಜನಸೇವೆ ಮಾಡಿರುವ ಡಿ.ಎಂ. ರತ್ನಾಕರ ಶ್ರೇಷ್ಟಿ ಅವರ ಬೆನ್ನೆಲುಬಾಗಿ ನಿಂತು ರಾಜಕೀಯ ರಂಗದಲ್ಲೂ ಪಳಗಿರುವ ರಾಧಿಕಾ ಅವರು, ಪ್ರಸ್ತುತ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನ ಸಂಘಟನಾ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಜೊತೆಗೆ ತಾಲ್ಲೂಕು ಆಶ್ರಯ ಸಮಿತಿಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಮುಖ ಹುದ್ದೆಗಳ ವಿವರ:

  • ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ
  • ತಾಲೂಕು ಕಸಾಪ ಮಹಿಳಾ ಸಾಂಸ್ಕೃತಿಕ ಕಾರ್ಯದರ್ಶಿ
  • ತಾಲೂಕು ಜಾನಪದ ಪರಿಷತ್ತಿನ ಮಹಿಳಾ ಪ್ರತಿನಿಧಿ
  • ಜಿಲ್ಲಾ ಯುವ ಒಕ್ಕೂಟದ ಮಹಿಳಾ ಪ್ರತಿನಿಧಿ
  • ಕರ್ನಾಟಕ ರಾಜ್ಯ ವಿದ್ಯಾರ್ಥಿ ಪರಿಷತ್ತಿನ ತಾಲ್ಲೂಕು ಅಧ್ಯಕ್ಷೆ
  • ತಾಲೂಕು ವಾಸವಿ ಮಹಿಳಾ ಮಂಡಳಿಯ ಉಪಾಧ್ಯಕ್ಷೆ
  • ಶೃಂಗೇರಿ ಭಜನಾ ಮಂಡಳಿ ಹಾಗೂ ದೇವಸ್ಥಾನ ಸಮಿತಿಗಳ ಸಂಚಾಲಕಿ
  • ಜೆಸಿಐ ಕೊಡಚಾದ್ರಿ ಹಾಗೂ ಕರ್ನಾಟಕ ರಾಜ್ಯ ಜನಪದ ಕಲಾವಿದರ ಸಹಕಾರ ಸಂಘದ ಸದಸ್ಯೆ

ಸಾಹಿತ್ಯ ಹಾಗೂ ಸಮಾಜ ಸೇವೆಗೆ ಸಂದ ಗೌರವ:

ಪ್ರೊ. ಶ್ರೀಪತಿ ಹಳಗುಂದ ಅವರ ‘ನಮ್ಮೂರ ಕಣಜ’ ಕೃತಿಯಲ್ಲಿ ಲೇಖಕಿಯಾಗಿ ಸ್ಥಾನ ಪಡೆದಿರುವ ಇವರು, ಕಳೆದ 25 ವರ್ಷಗಳಿಂದ ನಾಡಹಬ್ಬ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಯಲ್ಲೂ ಶ್ರಮಿಸುತ್ತಿದ್ದಾರೆ. ಇವರ ನಿರಂತರ ಜನಪರ ಕಾಳಜಿಯನ್ನು ಗುರುತಿಸಿ ರಾಜ್ಯಮಟ್ಟದ ಯುವಜನ ಮೇಳ, ರೋಟರಿ ಕ್ಲಬ್, ಶರಾವತಿ ಉತ್ಸವ ಸಮಿತಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಗೌರವಿಸಿ, ಸನ್ಮಾನಿಸಿವೆ.

“ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಗೆ ಬಂದು ಸಮಾಜದ ಮುಖ್ಯವಾಹಿನಿಯಲ್ಲಿ ನಿಲ್ಲಬೇಕಿದೆ. ಪಕ್ಷವು ಹೊಸನಗರ ಜಿ.ಪಂ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಜನರ ಸೇವೆಗೆ ಸದಾ ಸಿದ್ಧ,” ಎಂದು ರಾಧಿಕಾ ರತ್ನಾಕರ ಶ್ರೇಷ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!