ಹೊಸನಗರ ; ತರಬೇತಿ ನೀಡುವ ವೇಳೆ ತಮ್ಮದೇ ಪ್ಯಾರಾಚೂಟ್ ಸರಿಯಾದ ಸಮಯಕ್ಕೆ ತೆರೆದುಕೊಳ್ಳದ ಪರಿಣಾಮ ಶಿವಮೊಗ್ಗ ಜಿಲ್ಲೆಯ ಹೊಸನಗರ ಮೂಲದ ಮಂಜುನಾಥ್ (36) ಭಾರತೀಯ ವಾಯುಸೇನೆಯ ತರಬೇತುದಾರ ನೆಲಕ್ಕೆ ಅಪ್ಪಳಿಸಿ ಸ್ಥಳದಲ್ಲೇ ಸಾವಿಗೀಡಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಆಗ್ರ ವಾಯುಸೇನ ಪಿಟಿಎಸ್ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಮೃತರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಜೇನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಕೂರು ಸಮೀಪದ ಗೋರನಗದ್ದೆ ವಾಸಿ ಜಿ.ಎಸ್ ಮಂಜುನಾಥ್ (36) ಬಿನ್ ಜಿ.ಎಂ. ಸುರೇಶ್. ಮೃತ ಮಂಜುನಾಥ್ ತಂದೆ, ತಾಯಿ, ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಮೃತರು 1988ರ ಜುಲೈ 26 ರಂದು ಜನಿಸಿದ್ದು 2005ರ ಡಿ. 27 ರಂದು ಸೇನೆಗೆ ಸೇರ್ಪಡೆಗೊಂಡಿದ್ದರು. 2023ರಲ್ಲಿ ಭಾರತೀಯ ವಾಯುಸೇನೆಗೆ ಜ್ಯೂನಿಯರ್ ವಾರೆಂಟ್ ಅಧಿಕಾರಿಯಾಗಿ ಸೇವೆಗೆ ಸೇರ್ಪಡೆಗೊಂಡಿದ್ದು, ನಂತರ, ಜಮ್ಮು-ಕಾಶ್ಮೀರ್, ಅಸ್ಸಾಂ, ಗಾಜೀಯಬಾದ್, ದೆಹಲಿಯಲ್ಲಿ ಸೇವೆ ಸಲ್ಲಿಸಿದ ಬಳಿಕ ಕಳೆದ ಒಂದುವರೆ ತಿಂಗಳಿನಿಂದ ಉತ್ತರ ಪ್ರದೇಶದ ಆಗ್ರದ ಭಾರತೀಯ ವಾಯುಸೇನೆಯ ಪ್ಯಾರ ಜೆಂಪ್ ಜ್ಯೂನಿಯರ್ ವಾರೆಂಟ್ ಅಧಿಕಾರಿಯಾಗಿ ಕರ್ತವ್ಯ ನಿರತರಾಗಿದ್ದರು.
ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1BfoUAEBD3/
ಮೂಲತಃ ಕೃಷಿ ಕುಟುಂಬಕ್ಕೆ ಸೇರಿದ ಮಂಜುನಾಥ್ ಇವರು 2019ರಲ್ಲಿ ಅಸ್ಸಾಂ ಮೂಲದ ಯುವತಿ ಕಲ್ಪಿತಾ ಸಕಿಯಾ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದು, ಸಂತಾನದ ನಿರೀಕ್ಷೆಯಲ್ಲಿದ್ದರು. ಒಟ್ಟಾರೆ 16 ವರ್ಷಗಳ ಕಾಲ ವಾಯುಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಮಂಜುನಾಥ್, ಇದೇ ಫೆಬ್ರವರಿ 7ರ ಶುಕ್ರವಾರ ಬೆಳಗ್ಗೆ ಸರಿ ಸುಮಾರು 7 ರಿಂದ 8 ಗಂಟೆಯ ವೇಳೆಯಲ್ಲಿ ಆಗ್ರ ವಾಯುಸೇನೆ ಪಿಟಿಎಸ್ ಕೇಂದ್ರದಲ್ಲಿ ಮಂಜುನಾಥ್ ಅವರನ್ನು ಒಳಗೊಂಡಂತೆ ಸುಮಾರು 12 ಜನರ ತಂಡಕ್ಕೆ ಕಾರ್ಗೋ ಮಾದರಿ ವಿಮಾನದಿಂದ ಸುಮಾರು 18 ಸಾವಿರ ಅಡಿ ಎತ್ತರದಿಂದ ಪ್ಯಾರ ಜೆಂಪ್ ತರಬೇತಿ ನೀಡುವ ಸಮಯದಲ್ಲಿ, ಎಲ್ಲಾ 11 ಮಂದಿ ಶಿಬಿರಾರ್ಥಿಗಳು ಸುರಕ್ಷಿತವಾಗಿ ಜಂಪ್ ಪೂರೈಸಿದ್ದು, ಕೊನೆಯವರಾಗಿ ಮಂಜುನಾಥ್ ಜಿಗಿದಿದ್ದು, ಅವರ ಪ್ಯಾರಚೂಟ್ ಸರಿಯಾದ ಸಮಯಕ್ಕೆ ತೆರೆದುಕೊಳ್ಳದ ಪರಿಣಾಮ ಸಾವನ್ನಪ್ಪಿದ್ದಾರೆ.
ಗ್ರಾಮದಲ್ಲಿ ಮಡುಗಟ್ಟಿದ ಶೋಕ :
ವಿಷಯದ ತಿಳಿಯುತ್ತಿದ್ದಂತೆ ಮೃತರ ಗ್ರಾಮದಲ್ಲಿ ಅತೀವ ಶೋಕ ಮನೆ ಮಾಡಿದ್ದು, ಸಂಬಂಧಿಕರು, ಹಿತೈಷಿಗಳಿಂದ ನೊಂದ ಕುಟುಂಬಕ್ಕೆ ಸಂತಾಪ ಸೂಚನೆ ಕಾರ್ಯ ನಡೆದಿದೆ.
ಸಕಲ ಸರ್ಕಾರಿ ಗೌರವ :
ಮೃತ ಸೈನಿಕನ ಕಳೆಬರಹವು ಆಗ್ರದಿಂದ ವಿಮಾನದಲ್ಲಿ ಹೊರಟು ಇಂದು ರಾತ್ರಿ ಬೆಂಗಳೂರು ತಲುಪಿ, ಬೆಳಿಗ್ಗೆ 7.30ಕ್ಕೆ ಹೊಸನಗರದ ಮಾವಿನಕೊಪ್ಪ ಸರ್ಕಲ್ ತಲುಪಲುದೆ. ನಂತರ ಹೊಸನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ಮೃತ ಮಂಜುನಾಥ್ ಅವರ ಹುಟ್ಟೂರು ಸಂಕೂರಿಗೆ ತಲುಪಲಿದೆ. ಅಲ್ಲಿ ಬೆಳಗಾವಿಯ ವಾಯುಸೇನಾ ಅಧಿಕಾರಿಗಳು ಸೇನಾ ಗೌರವ ಸಲ್ಲಿಸುವರು. ನಂತರ ತಾಲೂಕು ಆಡಳಿತದಿಂದ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗುವುದು. ಈ ಪ್ರಕ್ರಿಯೆಗಳ ನಂತರ ಸೈನಿಕ ಮಂಜುನಾಥ್ ಅವರ ಶರೀರವನ್ನು ಸುಮಾರು ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು.
ಸಂತಾಪ ;
ಮೃತ ಮಂಜುನಾಥ್ ಅವರ ನಿಧನಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಸಿಇಒ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಮಲೆನಾಡಿನ ಯೋಧನೊಬ್ಬ ಭಾರತ ಮಾತೆಯ ರಕ್ಷಣೆಗಾಗಿ ಸೈನ್ಯ ಸೇರಿದ್ದು, ಕರ್ತವ್ಯದಲ್ಲಿದ್ದಾಗಲೇ, ಅಮರನಾಗಿದ್ದಾರೆ. ಗ್ರಾಮದಲ್ಲಿ ಮನೆಯವರು ಮನೆಗೆಲಸದಲ್ಲಿ ನಿರತರಾಗಿರುವ ಇವರ ತಂದೆ, ತಾಯಿಗೆ ಊರಿನವರಿನ್ನು ವಿಷಯ ತಿಳಿಸದೇ ಇದ್ದರೂ, ಇಡೀ ಗ್ರಾಮ ಮಾತ್ರ ಶೋಕ ಸಾಗರದಲ್ಲಿ ಮುಳುಗಿರುವುದಂತೂ ಸತ್ಯ.