RIPPONPETE ; ದೇವ ನಿರ್ಮಿತವಾದ ಈ ಪ್ರಪಂಚವನ್ನು ಮುಂದುವರೆಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಮಹಿಳೆಯರ ಸಹನೆಯನ್ನು ಸರ್ವರೂ ಗೌರವಿಸಬೇಕೆಂದು ಶ್ರೀಶ್ರೀಶ್ರೀ 1008 ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನ ಶ್ರೀಶೈಲ ಸೂರ್ಯ ಸಿಂಹಾಸನ ಶಾಖಾ ಶ್ರೀ ಶಿವಲಿಂಗೇಶ್ವರ ಬೃಹನ್ಮಠದಲ್ಲಿ ಗುರುವಾರ ಆಯೋಜಿಸಲಾಗಿದ್ದ ಇಷ್ಠಲಿಂಗ ಮಹಾಪೂಜೆ ಮತ್ತು 1008 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮಕ್ಕೆ ಚಾಲನೊಯೊಂದಿಗೆ ಆಶೀರ್ವಚನ ನೀಡಿ, ಒಂದು ಮನೆಯನ್ನು ಸಂಸ್ಕಾರಯುತವಾಗಿ ರೂಪುಗೊಳಿಸಬೇಕಾದರೆ ಹೆಣ್ಣಿನ ಮಹತ್ವ ಹೆಚ್ಚಿದೆ. ಮಹಿಳೆಯೆ ನಿಜವಾಧ ಮನೆಯಾಗಿದ್ದು ಸ್ವಚ್ಛ, ಪವಿತ್ರ ಮತ್ತು ಅಚ್ಚುಕಟ್ಟಾಗಿ ಇರಿಸುವಲ್ಲಿ ಮಹಿಳೆ ಜವಾಬ್ದಾರಿಯೇ ಅತ್ಯಧಿಕ. ಮನೆಯವರೆಲ್ಲರನ್ನು ಕೂಡಿಸಿಕೊಂಡು ಒಗ್ಗಟ್ಟನ್ನು ಕಾಪಾಡುವುದರಲ್ಲಿ, ಹುಟ್ಟಿದ ಮಕ್ಕಳನ್ನು ಪಾಲನೆ, ಪೋಷಣೆ ಮಾಡಿ ಬೆಳೆಸುವಲ್ಲಿ ತಾಯಿಯಂದರು ಪಡುವ ಶ್ರಮಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ ಇಂತಹ ಮಹಿಳೆಯ ಸಹನೆಯನ್ನು ಗೌರವಿಸುವುದರ ಪ್ರತೀಕವೇ ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮವಾಗಿದೆ.
ಮಹಿಳೆಯರು ಎಲ್ಲಿ ತಲೆಯೆತ್ತಿ ಗೌರವಪೂರ್ವಕವಾಗ ಬದುಕುವರೋ ಅಲ್ಲಿ ದೇವಾನುದೇವತೆಗಳು ಪೂಜೆಗೊಳ್ಳುತ್ತಾರೆ. ಸಂತೃಪ್ತಿಯಿಂದ ಕೃಪೆ ನೀಡುತ್ತಾರೆ. ಆದ್ದರಿಂದ ಮಹಿಳೆಯರನ್ನು ಕಣ್ಣೀರು ಹಾಕುವಂತೆ ಮಾಡಬಾರದು. ಮನೆಯ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರುವು ಎಂಬಂತೆ ಮಹಿಳೆ ಕೇವಲ ಕುಟುಂಬದ ಒಂದು ಭಾಗಮಾತ್ರವಾಗಿರದೆ ಮಕ್ಕಳು ಉತ್ತಮ ಸಂಸ್ಕಾರ ನೀಡುವ ಒಬ್ಬ ಗುರು ಕೂಡ ಆಗಿದ್ದಾಳೆ. ಪಂಚ ವೇದಗಳಲ್ಲಿ ಪ್ರಸಿದ್ಧವಾದ ಪಂಚವರ್ಣವನ್ನು ಆಶೀರ್ವಾದ ರೂಪದಲ್ಲಿ ಪಡೆದು ಪಂಚವರ್ಣದ ಐದು ಮುತ್ತಗಳನ್ನು ಧರಿಸಿ, ಮುತ್ತೈದೆಯಾಗಿ ಪೀಠಪರಂಪರೆಯನ್ನು ಹೊತ್ತು ಗೌರವಿಸುವ ಕಾರ್ಯವನ್ನುಕೂಡ ಮಹಿಳೆಯರು ಮಾಡುತ್ತಾರೆ. ಆದ್ದರಿಂದ ಸಮಾಜದಲ್ಲಿ ಮಹಿಳೆಗೆ ಸದಾಕಾಲ ಗೌರವಾಧಾರಗಳು ಸಿಗುವಂತಾಗಲಿ ಎಂದು ಆಶಿಸಿದರು.
ಉಜ್ಜಯನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು, ನಿವೃತ್ತ ಪ್ರಾಚಾರ್ಯರಾದ ಶ್ರೀಮತಿ ಕಿರಣ್ ದೇಸಾಯಿ ಮತ್ತು ನ್ಯಾಯವಾದಿ ಶೋಭ ಸನಾತನ ಸಂಸ್ಕೃತಯಲ್ಲಿ ಮಹಿಳೆಯ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು. ಶ್ರೀಮಠದ ವತಿಯಿಂದ ಪಾರ್ವತಮ್ಮನವರಿಗೆ ನವಧಾನ್ಯಗಳಿಂದ ತುಲಾಭಾರ ಮಾಡಿ ‘ಮಾತೃವಾತ್ಸಲ್ಯ ಸೇವಾ ಸಿರಿ’ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಸಮಾರಂಭದಲ್ಲಿ ಕೋಣಂದೂರು ಬೃಹ್ಮಠದ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ, ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ನಂದಿಪುರದ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಬೀರೂರಿನ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ. ಕ್ಯಾಸನೂರು ಗುರುಬಸವ ಪಂಡಿತಾರಾಧ್ಯ ಸ್ವಾಮೀಜಿ, ನಂಜೇಶ್ವರಮಠದ ಗುರುಮಹೇಶ್ವರ ಸ್ವಾಮೀಜಿ, ಅಕ್ಕಿಆಲೂರು ಮಠದ ಶಿವಬಸವ ಸ್ವಾಮೀಜಿ, ಅಂಕುಶ ಮಠದ ವಾಸುದೇವ ಶಿವಾಚಾರ್ಯ ಸ್ವಾಮೀಜಿ, ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ, ಮುಖಂಡರಾದ ಹಾಲಸ್ವಾಮಿಗೌಡ, ಕೆ.ಆರ್. ಪ್ರಕಾಶ್, ಪ್ರಸಾದ್, ಲೀಲಾಶಂಕರ್, ಎನ್. ವರ್ತೇಶ, ಶಾಂತಾನಂದ್, ದೀಫ್ತಿ ಇನ್ನಿತರರಿದ್ದರು.