ಸಂಪತ್ತಿನೊಂದಿಗೆ ಒಂದಿಷ್ಟಾದರೂ ಧರ್ಮ ಪ್ರಜ್ಞೆ ಅವಶ್ಯಕ ; ರಂಭಾಪುರಿ ಜಗದ್ಗುರುಗಳು

Written by Mahesh Hindlemane

Published on:

ಶಿವಮೊಗ್ಗ ; ಧರ್ಮಾಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ ನೆಲೆ ಸಿಗಲಾರದು. ಸಂಸ್ಕಾರದಿಂದ ಬೆಲೆಯುಳ್ಳ ಬದುಕು ಸಾರ್ಥಕಗೊಳ್ಳುತ್ತದೆ. ಸಂಪತ್ತಷ್ಟೇ ಮುಖ್ಯವಲ್ಲ ಅದರೊಂದಿಗೆ ಒಂದಿಷ್ಟಾದರೂ ಶಿವಜ್ಞಾನದ ಅರಿವು ಮತ್ತು ಧರ್ಮಪ್ರಜ್ಞೆ ಬೆಳೆಸಿಕೊಳ್ಳುವ ಅಗತ್ಯವಿದೆಯೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಮಂಗಳವಾರ ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಕೈಗಾರಿಕಾ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ಜರುಗಿದ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ, ಎಸ್.ಜೆ.ಪಿ.ಐಟಿಐ 31ನೇ ವರ್ಷದ ವಾರ್ಷಿಕೋತ್ಸವ ಹಾಗೂ ವೀರಶೈವ ಲಿಂಗಾಯತ ವಧು ವರರ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮನುಷ್ಯನಿಗೆ ನೀರು ಅನ್ನ ದೈಹಿಕ ವಿಕಾಸಕ್ಕೆ ಕಾರಣವಾದರೆ ಧರ್ಮ ಬದುಕನ್ನು ವಿಕಾಸಗೊಳಿಸಿ ಅಭಿವೃದ್ಧಿಯತ್ತ ಸಾಗಿಸುತ್ತದೆ. ದುಡಿಮೆಯ ಬೆವರಿನಿಂದ ಗಳಿಸಿದ್ದು ಶಾಶ್ವತ ಮತ್ತು ಸುಖದಾಯಕ. ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಕಾಯಕವೇ ಕಳಾ ಚೈತನ್ಯವೆಂದು ಬೋಧಿಸಿದ್ದಾರೆ. ಪರಿಶ್ರಮ-ಸಾಧನೆಯಿಲ್ಲದೇ ಶ್ರೇಯಸ್ಸು ಸಿಗಲಾರದು. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಯಾವಾಗಲೂ ಶಾಶ್ವತವಾಗಿರುತ್ತವೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟಪಡಿಸಿದ್ದಾರೆ. ಸಂತೃಪ್ತಿ ಸಮೃದ್ಧಿಗಾಗಿ ಮನುಷ್ಯ ಧರ್ಮಾಚರಣೆ ಮಾಡಬೇಕಾಗುತ್ತದೆ. ಬಿತ್ತಿದ ಬೀಜದಂತೆ ಫಸಲು ಹ್ಯಾಗೋ ಹಾಗೆಯೇ ನಮ್ಮ ಆಚರಣೆಯಂತೆ ಫಲ ಪ್ರಾಪ್ತಿ ದೊರಕುತ್ತದೆ. ಬದುಕು ಅನ್ನೋ ಹೊಲದಲ್ಲಿ ಸಮಸ್ಯೆ ಅನ್ನೋ ಕಳೆ ಬೆಳೆಯುತ್ತಲೇ ಇರುತ್ತದೆ. ಆ ಕಳೆಯನ್ನು ಕಿತ್ತು ಅರಿವು ಉಂಟು ಮಾಡುವಾತನೇ ಶ್ರೀ ಗುರುವಾಗಿದ್ದಾನೆ. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕು. ಎಸ್.ಜೆ.ಪಿ. ಐಟಿಐ ಸಂಸ್ಥಾಪಕರಾದ ವಿಘ್ನೇಶ್ವರಯ್ಯನವರ ಶ್ರಮದ ಬೆವರಿನ ಫಲದಿಂದ ಸಂಸ್ಥೆ ಇಂದು ಇಷ್ಟೊಂದು ಹೆಮ್ಮರವಾಗಿ ಬೆಳೆದಿದೆ ಎಂದು ಹರುಷ ವ್ಯಕ್ತಪಡಿಸಿದರು.
ನೂತನ “ಕಾಯಕ ಕಳಾ ಚೈತನ್ಯ ವೇದಿಕೆ” ಇದೇ ಸಂದರ್ಭದಲ್ಲಿ ಉದ್ಘಾಟನೆಗೊಂಡಿತು.

ಸಮಾರಂಭ ಉದ್ಘಾಟಿಸಿದ ಶ್ರೀ ಬಸವೇಶ್ವರ ವೀ.ಸ.ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್
ಮಾತನಾಡಿ, ಆಧುನಿಕ ಕಾಲದಲ್ಲಿ ಮನುಷ್ಯ ಧರ್ಮ ಸಂಸ್ಕೃತಿ ಮತ್ತು ಪರಂಪರೆ ಬಗೆಗೆ ನಿರ್ಲಕ್ಷ್ಯ ಮನೋಭಾವ ತಾಳಿದ್ದಾನೆ. ಶಾಂತಿ ನೆಮ್ಮದಿಯ ಬದುಕಿಗೆ ಧರ್ಮವೊಂದೇ ಆಶಾ ಕಿರಣ. ಸನಾತನ ಹಿಂದೂ ಸಂಸ್ಕೃತಿ ಸಂವರ್ಧಿಸುವ ಸಂಕಲ್ಪ ಎಲ್ಲರದು ಆಗಬೇಕು. ವಿಘ್ನೇಶ್ವರಯ್ಯ ಸೋಲಾಪುರ ಛಲದಂಕ ಮಲ್ಲನಾಗಿ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ಸ್ವಾವಲಂಬನೆ ಬದುಕಿಗೆ ಶಕ್ತಿ ತುಂಬಿದ್ದಾರೆ. ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ- ವೀರಶೈವ ಲಿಂಗಾಯತ ವಧು ವರರ ಸಮಾವೇಶ ಹಮ್ಮಿಕೊಂಡಿರುವುದು ಅವರ ದೂರ ದೃಷ್ಠಿಗೆ ಮತ್ತು ಗುಣಾತ್ಮಕ ಕಾರ್ಯಗಳಿಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್.ಆರ್.ಎನ್.ಇ. ಸಂಸ್ಥೆಯ ಅಧ್ಯಕ್ಷ ಹುನಗುಂದದ ಎಸ್.ಆರ್. ನವಲಿ ಹಿರೇಮಠ ಮಾತನಾಡಿ, ವಿಘ್ನೇಶ್ವರಯ್ಯ ಸೋಲಾಪುರ ತಮ್ಮ ಧಾರ್ಮಿಕ ಸಾಮಾಜಿಕ ಕಾರ್ಯಗಳಿಂದ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ಬಿ.ಟಿ.ಶೇಖರಪ್ಪ ಲಿಂಗಸುಗೂರು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸರ್ವೇಶ್ವರಿ ಹಿರೇಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಎಸ್.ಜಿ.ಶೇಖರ, ಮಂಜುನಾಥ, ಸಿ.ಎಚ್. ಬಾಳನಗೌಡ್ರ ವಿಶೇಷ ಆಹ್ವಾನಿತರಾಗಿ ಗೌರವ ಸನ್ಮಾನ ಸ್ವೀಕರಿಸಿದರು. ಶಿವಮೊಗ್ಗ ನಿವೃತ್ತ ಇಂಜನಿಯರ್ ನಾಗರಾಜ ಬೆಳಕೇರಿಮಠ ಹಾಗೂ ಜಾವಳ್ಳಿ ದಯಾನಂದಸ್ವಾಮಿ ಗುರುರಕ್ಷೆ ಸ್ವೀಕರಿಸಿದರು.

ಮಳಲಿ ಸಂಸ್ಥಾನದ ಡಾ|| ನಾಗಭೂಷಣ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು ಹಾಗೂ ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿ ಉಪದೇಶವನ್ನಿತ್ತರು.

ಸ್ವಾಗತ ಬಯಸಿ ಪ್ರಾಸ್ತಾವಿಕ ಮಾತನಾಡಿದ ವಿಘ್ನೇಶ್ವರಯ್ಯ ಸೋಲಾಪುರ, ಸಂಸ್ಥೆ ಅಲ್ಪಾವಧಿಯಲ್ಲಿ ಇಷ್ಟೊಂದು ಬೆಳೆಯಬೇಕಾದರೆ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಆಶೀರ್ವಾದ ಮಾರ್ಗದರ್ಶನ, ತಮ್ಮೊಡನೆ ಕೈ ಜೋಡಿಸಿದ ಸಂಸ್ಥೆಯ ಸಿಬ್ಬಂದಿಯ ಪರಿಶ್ರಮ ಕಾರಣವಾಗಿದೆ ಎಂದರು.

ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ 2025ರ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಿಬ್ಬಂದಿಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮುಂಡರಗಿಯ ಪ್ರಭಾವತಿ ವಿಶ್ವನಾಥ ಹಿರೇಮಠ ಅವರು ಸಂಸ್ಥೆಯ ಏಳಿಗೆ ಅಭ್ಯುದಯ ನಡೆದು ಬಂದ ದಾರಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿವಮೊಗ್ಗ ಶಾಂತಾ ಆನಂದ ನಿರೂಪಿಸಿದರು. ಬೆಳಿಗ್ಗೆ ಟಿ.ಎಮ್.ಎ.ಇ.ಎಸ್. ಆಯುರ್ವೇದ ಮಹಾವಿದ್ಯಾಲಯ ನಿಧಿಗೆ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಜರುಗಿತು.

ಸಮಾರಂಭದ ನಂತರ ವೀರಶೈವ ಲಿಂಗಾಯತ ವಧು ವರರ ಸಮಾವೇಶ ಜರುಗಿತು.
ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಎಂ.ಆರ್.ಎಸ್. ಸರ್ಕಲ್ಲಿನಿಂದ ಎಸ್.ಜೆ.ಪಿ.ಐಟಿಐ ವರೆಗೆ ವಿವಿಧ ವಾದ್ಯ ವೈಭವಗಳೊಂದಿಗೆ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು.

Leave a Comment