RIPPONPETE ; ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಸಮೀಪವಿರುವ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಇಂದು ಕಂಕಣ ಕಟ್ಟುವ ಮೂಲಕ ವಿದ್ಯುಕ್ತ ಚಾಲನೆ ದೊರೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಭಾಸ್ಕರ್ ಜೋಯ್ಸ್ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರುವ ಮೂಲಕ ಜಾತ್ರಾ ಮಹೋತ್ಸಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ‘ಮಲ್ನಾಡ್ ಟೈಮ್ಸ್’ ಜೊತೆ ಮಾತನಾಡಿದ ಅರ್ಚಕ ಭಾಸ್ಕರ್ ಜೋಯ್ಸ್, ವರ್ಷದ ಭಾದ್ರಪದ ಮಾಸದ ಕೃಷ್ಣ ಪಕ್ಷದ ಪಾಡ್ಯಮಿಯಿಂದ ಅಮಾವಾಸ್ಯೆಯವರೆಗೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಇಲ್ಲಿ ದೇವಿಯ ಜಾತ್ರಾ ಮಹೋತ್ಸವ ನಡೆಯುತ್ತದೆ.
ನಿನ್ನೆ ಸೋಮವಾರದಂದು ಹತ್ತಾರು ಭಕ್ತರು ದೇವಿಯ ಸಹಿತ ಹಳೇ ಅಮ್ಮನಘಟ್ಟಕ್ಕೆ ದುರ್ಗಮ ಹಾದಿಯಲ್ಲಿ ಮೂರ್ನಾಲ್ಕು ಕಿ.ಮೀ. ಪಾದಸೇವೆಯಲ್ಲಿ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಲಾಯಿತು.
ಇಂದು ಶ್ರೀ ದೇವಿಗೆ ಹಾಗೂ ಭೋವಿ ಜನಾಂಗಕ್ಕೆ ಸೇರಿದ ಹಿರಿಯ ಮುಖಂಡನಿಗೆ ಕಂಕಣ ಕಟ್ಟಲಾಯಿತು. ಕಂಕಣ ಕಟ್ಟಿದ ಬಳಿಕ ಭೋವಿ ಜನಾಂಗದ ಪ್ರಮುಖ ಮುಖಂಡ 25 ದಿನಗಳ ಕಾಲ ದೇವಿಯ ಸನ್ನಿಧಿಯಲ್ಲಿ ತಂಗಿ, ಪೂಜಾ ಸೇವಾಕಾರ್ಯಗಳಲ್ಲಿ ತೊಡಗಬೇಕು. ಕ್ಷೇತ್ರಕ್ಕೆ ಬರುವಾಗ ಆತ ಮನೆ ದೇವರ ಸಂಗಡ ಮಂಗಳವಾದ್ಯದೊಂದಿಗೆ ಕಾಲಿಡಬೇಕು. ಈ ಸಮಯದಲ್ಲಿ ಅನ್ಯ ಆಹಾರ ಸೇವಿಸುವಂತಿಲ್ಲ. ಪಿತೃಪಕ್ಷ ಆರಂಭದಿಂದ ನವರಾತ್ರಿಯ ಅಮಾವಾಸ್ಯೆ ಮುಗಿಯುವ ತನಕ ಆತ ಹಲವು ನಿಯಮ, ನಿಷ್ಠೆಗೆ ಒಳಪಟ್ಟು ವ್ರತ ಆಚರಣೆ ಅನುಸರಿಸಬೇಕು. ದೇವಿಯ ಜೊತೆಯಲ್ಲಿ ಆತನಿಗೂ ಅರಿಶಿನ ಕೊಂಬಿನ ಕಂಕಣ ಕಟ್ಟುವುದು ಇಲ್ಲಿನ ವಾಡಿಕೆ. ದೇವಿಗೆ ಕಂಕಣ ಕಟ್ಟಿದ ಬಳಿಕವೇ ಹೊಸ ಅಮ್ಮನಘಟ್ಟದಲ್ಲಿ ಜಾತ್ರೆ ನಡೆಸಲು ಅನುಮತಿ ದೊರೆತಂತೆ. ಇದು ಇಲ್ಲಿನ ಸಂಪ್ರದಾಯ. ಹಲವು ಶತಮಾನದಿಂದ ನಡೆದು ಬಂದಿದೆ ಎಂದರು.
ಇನ್ನೂ ಇಲ್ಲಿಗೆ ಭಕ್ತರು ತಮ್ಮ ಹೊಲದಲ್ಲಿ ಹಾಕಲಾದ ಬೆಳೆಗಳಿಗೆ ರೋಗ-ರುಜಿನ ಬಾರದಂತೆ ಮತ್ತು ಹೆಚ್ಚು ಇಳುವರಿ ಬರುವಂತೆ ಹಾಗೂ ಮಕ್ಕಳಿಗೆ ರೋಗ ರುಜಿನ ಹರಡದಂತೆ, ಕಣ್ಣಿನ ದೋಷ ಮತ್ತು ಕಜ್ಜಿ ಇನ್ನಿತರ ಮಾರಕ ರೋಗಗಳು ಬಾರದಂತೆ ದೇವಿಗೆ ಹರಕೆ, ಕಾಣಿಕೆ, ಹಣ್ಣು – ಕಾಯಿ ಸಮರ್ಪಿಸುವುದು ಮತ್ತು ಹೆಣ್ಣು ಮಕ್ಕಳಿಗೆ ಮದುವೆಯಾಗಲಿ ಎಂದು, ಮಕ್ಕಳಿಲ್ಲದವರಿಗೆ ಮಕ್ಕಳ ಭಾಗ್ಯ ಕರುಣಿಸಲೆಂದು ಪ್ರಾರ್ಥಿಸಿದರೆ ಭಕ್ತರ ಬೇಡಿಕೆ ಈಡೇರುತ್ತದೆ ಎಂಬ ನಂಬಿಕೆ ಇದೆ.
ಭಕ್ತರು ತಮ್ಮ ಹೊಲದಲ್ಲಿ ಬೆಳೆದ ಶುಂಠಿ, ಮೆಕ್ಕೆಜೋಳ, ಅಕ್ಕಿ, ತೆಂಗಿನಕಾಯಿ, ಬಾಳೆಗೊನೆ ತರಕಾರಿಯನ್ನು ತಂದು ದೇವಿಗೆ ಸಮರ್ಪಿಸಿ ಹೆಚ್ಚಿನ ಇಳುವರಿ ಬರುವಂತೆ ಮತ್ತು ಮಾರಕ ರೋಗ ಬಾರದಂತೆ ಕಾಪಾಡು ಎಂದು ಪ್ರಾರ್ಥಿಸುತ್ತಾರೆ ಎಂದು ತಿಳಿಸಿದರು.
ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಬಿ.ಸ್ವಾಮಿರಾವ್ ಸಮ್ಮುಖದಲ್ಲಿ ಅರ್ಚಕ ಭಾಸ್ಕರ ಜೋಯ್ಸ್ ಅವರು ಭೋವಿ ಜನಾಂಗದ ಪ್ರಮುಖ ಗಿಡ್ಡಪ್ಪ ಅವರಿಗೆ ಕಂಕಣ ಕಟ್ಟುವ ಮೂಲಕ ಜಾತ್ರೆಗೆ ಇಂದು ಚಾಲನೆ ದೊರೆಯಿತು.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಧೀರ್ ಭಟ್, ಶ್ರೀನಿವಾಸ ಹಿಂಡ್ಲೆಮನೆ, ಪುಟ್ಟಪ್ಪ, ಸಂತೋಷ್, ಹರೀಶ್ ಗೌಡ, ರತ್ನಮ್ಮ, ವಿಜೇಂದ್ರರಾವ್, ಹರತಾಳು ರಾಮಚಂದ್ರ, ಕಾಪಿ ಗೋಪಾಲ ಮತ್ತಿತರರು ಇದ್ದರು.