RIPPONPETE ; ವಿದ್ಯುತ್ ತಂತಿಗಳ ಸ್ಪರ್ಷದಿಂದ ಕಿಡಿಗಳು ಉದುರಿ ಭತ್ತದ ಹುಲ್ಲಿನ ಬಣವೆ ಬಹುಪಾಲು ಭಸ್ಮವಾಗಿ ಭಾರಿ ನಷ್ಟ ಸಂಭವಿಸಿದ ಘಟನೆ ಅರಸಾಳು ಗ್ರಾ.ಪಂ. ವ್ಯಾಪ್ತಿಯ ಬಸವಾಪುರ ಗ್ರಾಮದ ಗುಂಡ್ರೂಮೂಲೆಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಉಮೇಶ್ ಆಚಾರ್ ಮತ್ತು ಪರಮೇಶ್ವರ ಎಂಬುವರಿಗೆ ಸೇರಿದ ಹುಲ್ಲಿನ ಬಣವೆ ಇದಾಗಿದೆ. ಹುಲ್ಲಿನ ಬಣವೆಯ ಮೇಲೆ ವಿದ್ಯುತ್ ತಂತಿಗಳು ಹಾದುಹೋಗಿದ್ದು, ಭಾರಿ ಗಾಳಿ ಬೀಸಿದ್ದರಿಂದ ತಂತಿಗಳು ಪರಸ್ಪರ ಸ್ಪರ್ಶವಾಗಿ ವಿದ್ಯುತ್ ಕಿಡಿಗಳು ಉದುರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1E6UoAgYm8/
ಸ್ಥಳೀಯರ ಸಹಾಯದಿಂದ ಪಂಪ್‌ಸೆಟ್ ಮೂಲಕ ನೀರು ಹಾಯಿಸಿ ಬೆಂಕಿ ನಂದಿಸಲಾಯಿತಾದರೂ ಸಾವಿರಾರು ರೂ. ಮೌಲ್ಯದ ಹುಲ್ಲು ಸುಟ್ಟು ಭಸ್ಮವಾಗಿದೆ.
ಘಟನೆ ನಡೆದ ಪಕ್ಕದಲ್ಲೇ ಕಬ್ಬು ಬೆಳೆಯಲಾಗಿದ್ದು ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಸ್ಥಳಕ್ಕೆ ಗ್ರಾ.ಪಂ. ಸದಸ್ಯ ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.