ಹೊಸನಗರ: ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಶರನ್ನವರಾತ್ರಿ ಮಹೋತ್ಸವದ ಐದನೇ ದಿನದ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.
ಈ ಸಂದರ್ಭದಲ್ಲಿ ಮಂಗಲ ಪ್ರವಚನ ನೀಡಿದ ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಬಾಲ್ಯದಿಂದಲೇ ಸದ್ಗುಣ ಹಾಗೂ ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಾತ್ವಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಅಂತಹ ಅನಂತ ಸದ್ಗುಣಗಳಿಂದ ಜೀವನದಲ್ಲಿ ಅನಂತಕೀರ್ತಿ ಲಭಿಸುತ್ತದೆ ಎಂದು ಆಶೀರ್ವಚನ ನೀಡಿದರು. ನವರಾತ್ರಿಯ ಒಂಬತ್ತು ದಿನಗಳ ಕಾಲ ತೀರ್ಥಂಕರರ ಹಾಗೂ ಯಕ್ಷ-ಯಕ್ಷಿಯರ ಆರಾಧನೆ ಮತ್ತು ಸ್ತುತಿ ಮಾಡುವುದರಿಂದ ನಮ್ಮ ಪ್ರಾಚೀನ ಧರ್ಮ ಪರಂಪರೆಯ ಮಹತ್ವದ ಅರಿವಾಗುತ್ತದೆ ಎಂದು ತಿಳಿಸಿದರು.
ಐದನೇ ದಿನದ ಉತ್ಸವದ ಅಂಗವಾಗಿ ಕುಮದ್ವತಿ ತೀರ್ಥದಿಂದ ಪವಿತ್ರ ಅಗ್ರೋಧಕವನ್ನು ವಾದ್ಯಮೇಳ ಹಾಗೂ ಜಿನಭಜನೆಯೊಂದಿಗೆ ಭವ್ಯ ಮೆರವಣಿಗೆಯಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಯಕ್ಷಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಗೆ ತರಲಾಯಿತು.
ಶ್ರೀಮಠದಲ್ಲಿ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ ಹಾಗೂ ಶ್ರೀ ಸರಸ್ವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ತರುವಾಯ, ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರಿಗೆ ಭಕ್ತರ ಸಮ್ಮುಖದಲ್ಲಿ ಷೋಡಶೋಪಚಾರ ಪೂಜೆ ನೆರವೇರಿತು. ಭಕ್ತಾದಿಗಳು ಜಿನನಾಮ ಮತ್ತು ಸ್ತೋತ್ರಗಳನ್ನು ಪಠಿಸುತ್ತಾ ಪುಷ್ಪ, ಹಣ್ಣು ಹಾಗೂ ನೈವೇದ್ಯಗಳನ್ನು ಸಮರ್ಪಿಸಿದರು.
ನೇರಳೆ ಬಣ್ಣದ ಸೀರೆ ಹಾಗೂ ರಜತ ಪ್ರಭಾವಳಿಯ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಶ್ರೀ ಪದ್ಮಾವತಿ ದೇವಿಯ ದರ್ಶನ ಪಡೆದು ಭಕ್ತರು ಪುನೀತರಾದರು.
ಕ್ಷೇತ್ರದ ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕ್ಷೇತ್ರಪಾಲ ಹಾಗೂ ನಾಗಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು. ಇದರೊಂದಿಗೆ ತ್ರಿಕೂಟ ಜಿನಾಲಯ, ಬೋಗಾರ ಬಸದಿ ಮತ್ತು ನಗರ ಜಿನಾಲಯಗಳಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ರಾತ್ರಿ ಜರುಗಿದ ಅಷ್ಟಾವಧಾನ ಸೇವೆಯನ್ನು ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ಕಣ್ತುಂಬಿಕೊಂಡರು.
ಕಾರ್ಯಕ್ರಮದಲ್ಲಿ ಶ್ರೀ ಕುಂದಕುಂದ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಶ್ರೀ ಪದ್ಮಾವತಿ ಮಹಿಳಾ ಸಮಾಜದ ಸದಸ್ಯೆಯರು ಪಾಲ್ಗೊಂಡು ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.
ಕೊನೆಯಲ್ಲಿ ಪೂಜ್ಯ ಸ್ವಾಮೀಜಿಯವರು ನೆರೆದಿದ್ದ ಭಕ್ತರಿಗೆ ಶ್ರೀಫಲ ಹಾಗೂ ಮಂತ್ರಾಕ್ಷತೆ ನೀಡಿ ಹರಸಿದರು. ಅಂದಿನ ಪೂಜಾ ಸೇವಾಕರ್ತರಾದ ಗೌಹಾಟಿಯ ರಾಕೇಶ್ ಮತ್ತು ಅವರ ಕುಟುಂಬ ವರ್ಗದವರಿಗೆ ಶ್ರೀಗಳು ವಿಶೇಷ ಆಶೀರ್ವಾದ ಮಾಡಿದರು.

