SHIVAMOGGA ; ಜಿಲ್ಲೆಯಾದ್ಯಂತ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನವರಾತ್ರಿ ಉತ್ಸವದ ಭಾಗವಾಗಿ ಆಯುಧಪೂಜೆ ಮತ್ತು ವಿಜಯದಶಮಿ ಆಚರಣೆಗೆ ಜನರು ಸಜ್ಜುಗೊಂಡಿದ್ದು, ಪೂಜೆಗೆ ಬೇಕಾದ ಸಾಮಗ್ರಿಗಳ ಖರೀದಿ ಭರಾಟೆ ಜೋರಿದೆ.
ಶಿವಮೊಗ್ಗ ನಗರದಲ್ಲಿ ಹಿಂಗಾರು ಹಂಗಾಮು ಮಳೆಯ ಕಿರಿಕಿರಿಯ ನಡುವೆಯೂ ನಾಡಹಬ್ಬ ದಸರಾಕ್ಕೆ ಕಳೆಕಟ್ಟಿದೆ. ಈಗಾಗಲೇ ಅಂತಿಮ ಸುತ್ತಿನ ಸಿದ್ಧತೆಗಳು ನಡೆದಿದ್ದು, ಆಯುಧಪೂಜೆ ಹಾಗೂ ವಿಜಯದಶಮಿ ಅಂಗವಾಗಿ ಮಾರುಕಟ್ಟೆಯಲ್ಲಿ ಹೂವು, ಹಣ್ಣು ಮತ್ತು ಇತರೆ ವಸ್ತುಗಳ ಮಾರಾಟ ಜೋರಾಗಿತ್ತು.
ಎಲ್ಲೆಡೆ ಆಯುಧ ಪೂಜೆಯ ಹಿಂದಿನ ದಿನವಾದ ಗುರವಾರ ವಾಹನಗಳು, ಯಂತ್ರೋಪಕರಣಗಳು, ಕೃಷಿ ಉಪಕರಣಗಳ ಸ್ವಚ್ಛತಾ ಕಾರ್ಯದಲ್ಲಿ ಜನರು ತೊಡಗಿದರು.
ಬೂದುಕುಂಬಳ ವ್ಯಾಪಾರ ಇಲ್ಲ :
ಆಯುಧ ಪೂಜೆ ಪ್ರಯುಕ್ತ ನಗರಕ್ಕೆ ಬೂದುಕುಂಬಳ ಕಾಯಿ ರಾಶಿ ರಾಶಿ ಬಂದಿದೆ. ಎತ್ತ ನೋಡಿದರೂ ಕುಂಬಳಕಾಯಿ ರಾಶಿ ಕಾಣಿಸುತ್ತಿತ್ತು. ಆದರೆ, ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ನಗರದ ಬಿ.ಎಚ್.ರಸ್ತೆ, ದುರ್ಗಿಗುಡಿ, ಪ್ರವಾಸಿ ಮಂದಿರ, ಕುವೆಂಪು ರಸ್ತೆ, ಗೋಪಿ ಸರ್ಕಲ್, ಗಾಂಧಿ ಬಜಾರ್, ವಿನೋಬನಗರ, ವಿದ್ಯಾನಗರ, ಬಿ.ಎಚ್. ರಸ್ತೆ ಹೀಗೆ ರಸ್ತೆ ಬದಿಗಳಲ್ಲಿ ಬೂದುಕುಂಬಳಕಾಯಿ ರಾಶಿ ಹಾಕಲಾಗಿದ್ದು, ಪ್ರತಿ ಕೆಜಿಗೆ 20 ರಿಂದ 30 ರೂ.ಗೆ ಕುಂಬಳ ಮಾರಾಟವಾಗುತ್ತಿದೆ.
ನಾಳೆ ಆಯುಧ ಪೂಜೆ, ಭರದ ಸಿದ್ಧತೆ ತಾಲ್ಲೂಕಿನ ವಿವಿಧೆಡೆಯಿಂದ ಬಂದಿದ್ದ ಜನರು ವಿವಿಧ ಅಂಗಡಿಗಳ ಪೂಜೆ, ದಿನಸಿ ಅಂಗಡಿ, ಕಾರ್ಖಾನೆ, ವಾಹನಗಳ ಪೂಜೆಗಾಗಿ ಬೂದುಕುಂಬಳ ಕಾಯಿಯನ್ನು ಖರೀದಿಸಿದರು.
ನಮ್ಮಲ್ಲಿ ಕೆಲವರು ಈ ಕಾಯಿಯನ್ನು ಬೆಳೆಯುವವರಿದ್ದಾರೆ. ಆದರೆ, ನಾವು ರೈತರಿಂದ ಖರೀದಿಸಿ ತಂದು ಮಾರಾಟ ಮಾಡುತ್ತಿದ್ದೇವೆ. ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಕಾಯಿ ಮಾರುಕಟ್ಟೆಗೆ ಬಂದಿದೆ. ಕಾಯಿ ಕೇಳುವವರೇ ಇಲ್ಲ. ಕಡಿಮೆ ಬೆಲೆಗೆ ಕೇಳುತ್ತಾರೆ. ತಂದಿರುವ ಕಾಯಿ ಮಾರಿದರೆ ಸಾಕು. ಕೊನೆಯ ಪಕ್ಷ ಬಾಡಿಗೆ ಹಾಗೂ ಅಸಲಿನ ದುಡ್ಡು ಹುಟ್ಟಿದರೆ ಸಾಕು ಎನ್ನುವಂತಾಗಿದೆ.
– ಪರಶುರಾಮಪ್ಪ, ವ್ಯಾಪಾರಿ
ನಿಂಬೆ ಹಣ್ಣು ಹಾಗೂ ಇತರ ಹೂ, ಹಣ್ಣುಗಳ ಬೆಲೆ ಈ ಬಾರಿ ಹೆಚ್ಚಳವಾಗಿದ್ದು, ಚೆಂಡು ಹೂವಿಗೆ ಮಾರಿಗೆ 60 ರಿಂದ 100 ರವರೆಗೆ ಇದೆ. ಇತರ ಸೇವಂತಿಗೆ, ಜಾಜಿ, ಮತ್ತು ಕಾಕಡ ಮಾರಿಗೆ 170 ರಿಂದ 250 ರವರೆಗೆ ಇದೆ. ಬಿಡಿ ಹೂವುಗಳು ಕೆಜಿ.400 ರೂ. ಗಡಿ ದಾಟಿದೆ. ಸೇಬು,ಬಾಳೆಹಣ್ಣು, ಮುಸುಂಬಿ ಎಲ್ಲಾ ರೀತಿಯ ಹಣ್ಣುಗಳು ಕೂಡ ಏರಿಕೆಯಾಗಿವೆ. ನಾಳೆ ಆಯುಧಪೂಜೆಯಿದ್ದು, ಗ್ರಾಹಕರು ಖರೀದಿ ಭರಾಟೆಯಲ್ಲಿ ತೊಡಗಿದ್ದಾರೆ.