ಹೊಸನಗರ: ತಾಲೂಕಿನ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಸರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮತ್ತು ಕೆರೆ ಅಚ್ಚುಕಟ್ಟುದಾರರ ಸಂಯೋಜನೆಯೊಂದಿಗೆ ‘ನಮ್ಮ ಊರು ನಮ್ಮ ಕೆರೆ’ ಕಾರ್ಯಕ್ರಮದಡಿ ಅಭಿವೃದ್ಧಿಪಡಿಸಲಾದ ಕೆರೆಯನ್ನು ಶಾಸಕ ಆರಗ ಜ್ಞಾನೇಂದ್ರ ಗ್ರಾಮ ಪಂಚಾಯಿತಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.
ಬಾಳೆಸರದ ಸರ್ವೇ ನಂ. 10ರಲ್ಲಿರುವ 1.06 ಎಕರೆ ವಿಸ್ತೀರ್ಣದ ಈ ಕೆರೆಯನ್ನು ಕಳೆದ ಮಾರ್ಚ್ ತಿಂಗಳಲ್ಲಿ ಸುಮಾರು ₹4.30 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಗ್ರಾಮದ ಜಲಮೂಲವನ್ನು ಸುಸ್ಥಿತಿಯಲ್ಲಿಡುವುದು ಹಾಗೂ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.
ಕೆರೆ ಹಸ್ತಾಂತರಿಸಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, “ಗ್ರಾಮೀಣ ಭಾಗದಲ್ಲಿ ಕೆರೆಗಳು ಕೇವಲ ನೀರಿನ ತಾಣಗಳಾಗಿರದೆ, ಕೃಷಿ, ಜಾನುವಾರುಗಳ ಪೋಷಣೆ ಹಾಗೂ ಅಂತರ್ಜಲ ವೃದ್ಧಿಗೆ ಜೀವಾಳವಾಗಿವೆ. ಮಳೆನೀರನ್ನು ಸಮರ್ಪಕವಾಗಿ ಸಂಗ್ರಹಿಸಿ ಬೇಸಿಗೆಯಲ್ಲೂ ನೀರಿನ ಕೊರತೆಯಾಗದಂತೆ ತಡೆಯಲು ಕೆರೆಗಳ ಸಂರಕ್ಷಣೆ ಅತ್ಯಗತ್ಯ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಇಂತಹ ಜನಪರ ಕಾರ್ಯಗಳು ಗ್ರಾಮೀಣಾಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿವೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ, ಅಭಿವೃದ್ಧಿಗೊಂಡ ಕೆರೆಯನ್ನು ಅಕ್ರಮ ಒತ್ತುವರಿಯಿಂದ ರಕ್ಷಿಸಿ, ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯರ ಮೇಲಿದೆ. ಗ್ರಾಮಸ್ಥರ ಸಹಭಾಗಿತ್ವದಲ್ಲಿ ಕೆರೆಯ ಸಮರ್ಪಕ ನಿರ್ವಹಣೆಯಾದಾಗ ಮಾತ್ರ ಸುತ್ತಮುತ್ತಲಿನ ಪರಿಸರದಲ್ಲಿ ಅಂತರ್ಜಲ ಮಟ್ಟ ಸುಧಾರಿಸಲು ಸಾಧ್ಯ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ತಾಲೂಕು ಯೋಜನಾಧಿಕಾರಿ ಜಗದೀಶ್ ಅಲಸೆ, ಕೃಷಿ ಅಧಿಕಾರಿ ವಸಂತ್ ಕುಮಾರ್, ಕ್ಷೇತ್ರಾಧಿಕಾರಿ ನಾಗರಾಜ್, ಪಿಡಿಒ ಮಂಜುಳಾ, ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಎಸ್., ಅಮೃತ ಒಕ್ಕೂಟದ ಅಧ್ಯಕ್ಷ ರಾಮಚಂದ್ರ, ಗ್ರಾ.ಪಂ. ಮಾಜಿ ಸದಸ್ಯರಾದ ಸುರೇಶ್ ಎ.ವಿ., ಸೋಮಶೇಖರ್ ಟಿ.ಡಿ., ಲಿಂಗರಾಜ್ ಬಂಡಿ, ಮಂಜುಳಾ ರಾಘವೇಂದ್ರ, ಗ್ರಾಮದ ಹಿರಿಯರಾದ ಹೆಚ್.ಎಸ್. ಅನಂತಮೂರ್ತಿ ಸೇರಿದಂತೆ ಗ್ರಾಮಸ್ಥರು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

