ಹೊಸನಗರ ; ನಿರಂತರ ಶೋಷಣೆ, ತುಳಿತಕ್ಕೆ ಒಳಗಾಗಿದ್ದ ನಮ್ಮ ಸಮುದಾಯವಿಂದು ಶಿಕ್ಷಣ ಹಾಗೂ ಸಂಘಟನೆಯ ಮೂಲಕ ಸಮಾಜದಲ್ಲಿ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಬಲಾಡ್ಯವಾಗಿ ಬೆಳೆದು ನಿಂತಿರುವುದು ಆಶಾದಾಯಕ ಬೆಳವಣಿಗೆ ಆಗಿದೆ ಎಂದು ತಾಲೂಕಿನ ನಿಟ್ಟೂರಿನ ಶ್ರೀ ನಾರಾಯಣಗುರು ರೇಣುಕಾನಂದ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಅಲಗೇರಿಮಂಡ್ರಿ ಗ್ರಾಮದ ಚೆನ್ನಮಾಜಿ ಪ್ರೌಢಶಾಲೆ ಆವರಣದಲ್ಲಿ ಬಟ್ಟೆಮಲ್ಲಪ್ಪದ ಧೀರ ದೀವರ ಸಂಘವು ತನ್ನ ಮೊದಲ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ‘ದೀವರ ಸುಗ್ಗಿಹಬ್ಬ’ ವಿಶೇಷ ಕಾಯಕ್ರಮದ ದಿವ್ಯ ಸಾನಿದ್ಯ ವಹಿಸಿ ಅವರು ಮಾತನಾಡಿದರು.

ಹಿರಿಯ ರಾಜಕೀಯ ಮುತ್ಸದಿಗಳಾದ ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಹಾಗು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ನಮ್ಮ ಸಮುದಾಯದ ಎರಡು ಕಣ್ಣುಗಳಿದ್ದಂತೆ ಎಂದು ಅವರು, ಇಂತಹ ಹಿರಿಯ ನಾಯಕರ ಮಾರ್ಗದರ್ಶನ, ಸಲಹೆ, ಸಹಕಾರದಲ್ಲಿ ಸಮುದಾಯದ ಯುವಜನತೆ ಸಂಘಟನಾತ್ಮಕವಾಗಿ ಗಟ್ಟಿಗೊಳ್ಳಬೇಕಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಸಾರಗನಜೆಡ್ಡು ಶ್ರೀ ಕ್ಷೇತ್ರ ಕಾರ್ತಿಕೇಯ ಪೀಠದ ಶ್ರೀ ಯೋಗೇಂದ್ರ ಅವದೂತರು ಮಾತನಾಡಿ, 26 ಉಪ ಪಂಗಡ ಒಳಗೊಂಡ ಆರ್ಯ ಈಡಿಗ ಸಮಾಜದ ಬಹುಪಾಲು ಮಂದಿ ಕೃಷಿಯನ್ನೇ ಅವಲಂಭಿಸಿದ್ದರೂ, ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ್ದು ದೇಶ-ವಿದೇಶಗಳಲ್ಲಿ ಅತ್ಯುನ್ನತ ಸಾಧನೆ ಮೂಲಕ ಉನ್ನತ ಸ್ಥಾನ ಅಲಂಕರಿಸಿರುವುದು ಶ್ಲಾಘನೀಯ ಸಂಗತಿ ಎಂದರು.

ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಡಾ. ರಾಮಪ್ಪ ಮಾತನಾಡಿ, ನಮ್ಮ ಸಮುದಾಯ ಎಷ್ಟೇ ಆರ್ಥಿಕವಾಗಿ ಮುಂದುವರೆದ್ದರೂ, ಸಂಸ್ಕೃತಿ, ಸಂಪ್ರದಾಯ ಆಚರಣೆ ವಿಷಯದಲ್ಲಿ ಸಾಕಷ್ಟು ಹಿಂದುಳಿದ್ದು, ದಾನ-ಧರ್ಮ ಮಾಡುವವರ ಸಂಖ್ಯೆ ವಿರಳವಿದೆ. ಸಮಾಜದ ಮಠ-ದೇಗುಲಗಳ ರಕ್ಷಣೆಗೆ ಟೊಂಕಕಟ್ಟಿ ನಿಲ್ಲುವ ಸ್ವಾಭಿಮಾನದಿಂದ ಯುವಸಮೂಹ ಜಾಗೃತೆ ಹೊಂದುವ ಅವಶ್ಯಕತೆ ಇದೆ. ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಸಮಾಜವನ್ನು ನಿರ್ಲಕ್ಷಿಸಲಾಗಿದೆ. ಈ ಬಗ್ಗೆ ಸಮಾಜದ ಜನಪ್ರತಿನಿಧಿಗಳು ಸರ್ಕಾರವನ್ನು ಎಚ್ಚರಿಸುವ ಕಾರ್ಯ ಆಗಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಈ ಹಿಂದೆ ಬಿಜೆಪಿ ಆಡಳಿತರೂಢ ಸರ್ಕಾರವಿದ್ದಾಗ, ನಮ್ಮದೇ ಶ್ರೀ ಕ್ಷೇತ್ರ ಸಿಗಂದೂರಿಗೆ ಗಂಡಾಂತರ ಒದಗಿ ಬಂದಿತ್ತು. ದೇವಾಲಯವನ್ನು ಮುಜರಾಯಿ ಇಲಾಖೆಗೆ ಸರ‍್ರ್ಪಡೆಗೊಳಿಸುವ ಹಾಗೂ ಆಡಳಿತ ಅಧಿಕಾರಿ ನೇಮಕ ಮಾಡುವ ಹುನ್ನಾರ ನಡೆದಿತ್ತು. ಅದಿನ ಸರ್ಕಾರದಲ್ಲಿದ್ದ ಸಮುದಾಯದ ಯಾವೊಬ್ಬ ಈ ಕುರಿತು ಚಕಾರ ಎತ್ತಲಿಲ್ಲ. ಆದರೆ, ಇದನ್ನು ನಾನು ತೀವ್ರವಾಗಿ ವಿರೋಧಿಸಿದ್ದೆ. ಇಂದು ಅದಕ್ಕೆಲ್ಲೆ ಇತಿಶ್ರೀ ಹಾಡಲಾಗಿದೆ ಎಂದರು.
ಭಕ್ತಾದಿಗಳ ಸಹಿತ ಸಮುದಾಯದ ಆರ್ಥಿಕ ಪ್ರಬಲರು ದೇವಾಲಯಗಳ ಅಭಿವೃದ್ದಿಗೆ ಸಾಕಷ್ಟು ದೇಣಿಗೆ ನೀಡಿದಲ್ಲಿ ಮಾತ್ರವೇ ಭಕ್ತಾದಿಗಳಿಗೆ ಸೌಲಭ್ಯ ಕಲ್ಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸಮುದಾಯ ಮನಸ್ಸು ಮಾಡಬೇಕೆಂಬ ಕರೆ ನೀಡಿದರು.

ಜನಪ್ರತಿನಿಧಿಗಳು ಸಮುದಾಯಕ್ಕೆ ತಪ್ಪು ಸಂದೇಶ ರವಾನಿಸಬಾರದು. ಸಿಗಂದೂರು ಕ್ಷೇತ್ರಕ್ಕೆ ಆಡಳಿತ ಅಧಿಕಾರಿ ನೇಮಿಸುವ ವಿಷಯದಲ್ಲಿ ನಾನು ಸರ್ಕಾರವನ್ನು ವಿರೋಧಿಸಿದ್ದು, ನೈಜ್ಯ ಸಂಗತಿಯನ್ನು ಅಂದಿನ ಸರ್ಕಾರದ ಗಮನಕ್ಕೆ ತಂದಿದ್ದೆ. ಆಡಳಿತ ಅಧಿಕಾರಿಗಳ ನೇಮಕ ಮಾಡದಂತೆ ತಡೆಯುವಲ್ಲಿ ನನ್ನ ಪಾತ್ರವೂ ಇದೆ. ಇಂತಹ ವೇದಿಕೆಯ ಮೂಲಕ ಜನತೆಗೆ ತಪ್ಪು ಸಂದೇಶ ರವಾನಿಸುವ ಪರಿ ಸರಿಯಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ವಿರುದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಹರಿಹಾಯ್ದರು.
ನಾನು ಸಹ ಎಸ್. ಬಂಗಾರಪ್ಪ ಅವರ ರಾಜಕೀಯ ಗರಡಿಯಿಂದಲೇ ಪಳಗಿ ಬಂದವನು. ಎಂತಹ ಪರಿಸ್ಥಿತಿಯನ್ನು ಎದುರಿಸುವ ಚಾಕಚಕ್ಯತೆ ತಮಗಿದೆ ಎಂದು ಸವಾಲ್ ಹಾಕಿದರು.

ಶಾಸಕ ಗೋಪಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಮಾಜದ ಹಿರಿಯ ಮಾಜಿ ಶಾಸಕರಾದ ಬಿ. ಸ್ವಾಮಿರಾವ್, ಡಾ. ಜಿ.ಡಿ. ನಾರಾಯಣಪ್ಪ ಹಾಗೂ ಇತ್ತೀಚೆಗೆ ಒಂದೇ ದಿನ ಎರಡು ವಿಶ್ವ ವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಹಿರಿಯ ರಾಜಕೀಯ ಮುತ್ಸದಿ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಗಣಪತಿ ಮಾಕನಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಉದಯ್ ನಾಯಕ್, ವಕೀಲ ಡಿ.ಎನ್. ಹಿರಿಯಪ್ಪ, ಕಲಗೋಡು ರತ್ನಾಕರ್, ಮಧು ಗಣಪತಿ ಮೊದಲಾದವರು ವೇದಿಕೆಯಲ್ಲಿದ್ದರು.