ರಿಪ್ಪನ್‌ಪೇಟೆ: ಸುಖಮಯ ಜೀವನಕ್ಕೆ ಉತ್ತಮ ಆರೋಗ್ಯವೇ ಬುನಾದಿ. ಹೀಗಾಗಿ ಬಿಪಿ, ಶುಗರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಆತಂಕಪಡುವ ಬದಲು, ನಿಯಮಿತವಾಗಿ ತಜ್ಞ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಗತ್ಯ ಎಂದು ಶಿವಮೊಗ್ಗದ ಸರ್ಜಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಅಭಿಷೇಕ್ ಕಿವಿಮಾತು ಹೇಳಿದರು.
ಅವರು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಸರ್ಜಿ ಸಮೂಹ ಸಂಸ್ಥೆ, ರಿಪ್ಪನ್‌ಪೇಟೆ ರೋಟರಿ ಕ್ಲಬ್, ಒಬಿಸಿ ಮೋರ್ಚಾ ಹಾಗೂ ಬಿಜೆಪಿ ಹೊಸನಗರ ಮಂಡಳದ ಸೇವಾ ಸಂಕಲ್ಪ ಅಭಿಯಾನದ (ಕೆರೆಹಳ್ಳಿ ಮಹಾಶಕ್ತಿ ಕೇಂದ್ರ) ಜಂಟಿ ಆಶ್ರಯದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ಬಲ್ಲಾಳ್ ಮಾತನಾಡಿ, ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಜನರಿಗೆ ಹೃದಯದ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕಿದೆ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ವೈದ್ಯಾಧಿಕಾರಿ ಡಾ. ಅಂಜನಪ್ಪ, ಸರ್ಜಿ ಆಸ್ಪತ್ರೆಯ ಡಾ. ಲೇಖಾ, ರೋಟರಿ ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷ ಎಂ.ಬಿ. ಲಕ್ಷ್ಮಣಗೌಡ, ಒಬಿಸಿ ಮೋರ್ಚಾ ಅಧ್ಯಕ್ಷ ಬುಕ್ಕಿವರೆ ರಾಜೇಶ್ ಹಾಗೂ ಇತರ ಪ್ರಮುಖರಾದ ಎಂ. ಸುರೇಶ್ ಸಿಂಗ್, ಗಣೇಶ್ ಎನ್. ಕಾಮತ್, ಸುಂದರೇಶ್ ಕೆರೆಹಳ್ಳಿ, ಪದ್ಮಾ ಸುರೇಶ್, ರೇಖಾ ರವಿರಾವ್, ಗೀತಾ ಕರಿಬಸಪ್ಪ, ದೇವೇಂದ್ರಪ್ಪಗೌಡ, ಮುರುಳಿಧರ ಕೆರೆಹಳ್ಳಿ, ದೇವದಾಸ್ ಆಚಾರ್ ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗದವರಾದ ಆಕಾಶ್, ಮಂಜುನಾಥ್, ಸೌಜನ್ಯ, ಪ್ರಿಯಾಂಕ, ಶ್ವೇತಾ ಹಾಜರಿದ್ದರು.

