ಸಾಗರ: ಸರ್ಕಾರಿ ಅಧಿಕಾರಿಗಳ ಕರ್ತವ್ಯ ಕೇವಲ ಕಚೇರಿಯ ನಾಲ್ಕು ಗೋಡೆಗಳಿಗೆ ಸೀಮಿತವಾಗಬಾರದು, ಬದಲಾಗಿ ಜನಸಾಮಾನ್ಯರ ಕಷ್ಟ-ಸುಖಗಳಿಗೆ ಸ್ಪಂದಿಸಿ, ಸರ್ಕಾರ ಮತ್ತು ಪ್ರಜೆಗಳ ನಡುವೆ ಭರವಸೆಯ ಸೇತುವೆಯಾಗಿ ಕೆಲಸ ಮಾಡಬೇಕು ಎಂದು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ತಾಲೂಕಿನ ಆನಂದಪುರ ಸಮೀಪದ ಕಡ್ಲೆಹಂಕ್ಲು ಶ್ರೀ ಮಾರಿಕಾಂಬಾ ದೇಗುಲದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋಬಳಿ ಮಟ್ಟದ ‘ಪ್ರಜಾಸೇವಾ ಆಂದೋಲನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು. ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ನೇರವಾಗಿ ಹಾಗೂ ಪಾರದರ್ಶಕವಾಗಿ ತಲುಪಿಸುವುದೇ ಈ ಆಂದೋಲನದ ಮುಖ್ಯ ಗುರಿಯಾಗಿದೆ. ಮುಖ್ಯಮಂತ್ರಿಗಳ ಆಶಯದಂತೆ ಭ್ರಷ್ಟಾಚಾರ ಮುಕ್ತ ಹಾಗೂ ಜವಾಬ್ದಾರಿಯುತ ಆಡಳಿತ ನೀಡಲು ಅಧಿಕಾರಿಗಳ ಕಾರ್ಯವೈಖರಿಗೆ ಚುರುಕು ಮುಟ್ಟಿಸಲಾಗುತ್ತಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಮಾನವೀಯತೆ ಹಾಗೂ ಸೇವಾ ಮನೋಭಾವದಿಂದ ಕೆಲಸ ಮಾಡಿದಾಗ ಮಾತ್ರ ಜನಕಲ್ಯಾಣ ಸಾಧ್ಯ ಎಂದು ಶಾಸಕರು ಅಭಿಪ್ರಾಯಪಟ್ಟರು.
ಕಾಲಮಿತಿಯಲ್ಲಿ ಸಮಸ್ಯೆ ಇತ್ಯರ್ಥ:
ಈ ಅಭಿಯಾನದಲ್ಲಿ ಸಲ್ಲಿಕೆಯಾಗುವ ಸಾರ್ವಜನಿಕರ ಅಹವಾಲುಗಳನ್ನು ನಿಗದಿತ ಸಮಯದೊಳಗೆ ಬಗೆಹರಿಸಲಾಗುವುದು. ಗ್ರಾಮೀಣ ಭಾಗದ ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ನೈರ್ಮಲ್ಯ ಹಾಗೂ ಉದ್ಯೋಗದಂತಹ ಮೂಲಸೌಕರ್ಯಗಳ ಜೊತೆಗೆ ಜನರ ವೈಯಕ್ತಿಕ ಸಮಸ್ಯೆಗಳಿಗೂ ಸ್ಥಳದಲ್ಲೇ ಪರಿಹಾರ ಒದಗಿಸಲು ಆದ್ಯತೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ರೈತರ ಪರ ಸರ್ಕಾರ, ವಸತಿಹೀನರಿಗೆ ನಿವೇಶನ:
ಮಲೆನಾಡಿಗರಲ್ಲಿ ಆತಂಕ ಮೂಡಿಸಿರುವ ಕಸ್ತೂರಿ ರಂಗನ್ ವರದಿ ಹಾಗೂ ಅರಣ್ಯ ಕಾಯ್ದೆಗಳ ವಿಚಾರದಲ್ಲಿ ಸರ್ಕಾರವು ರೈತರ ಹಿತ ಕಾಯಲು ಬದ್ಧವಾಗಿದೆ ಎಂದು ಭರವಸೆ ನೀಡಿದ ಶಾಸಕರು, ರೈತರು ಕೂಡ ತಮ್ಮ ಜಮೀನಿನಲ್ಲಿ ಗಿಡ-ಮರಗಳನ್ನು ಬೆಳೆಸುವ ಮೂಲಕ ಪರಿಸರ ಉಳಿವಿಗೆ ಕೈಜೋಡಿಸಬೇಕು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ವಸತಿ ಯೋಜನೆಯ ಕುರಿತು ಮಾತನಾಡಿದ ಅವರು, ಸೂರಿಲ್ಲದವರಿಗೆ ನೆಲೆ ಕಲ್ಪಿಸಲು ಸರ್ಕಾರ ಪ್ರತಿ ಜಿಲ್ಲೆಯಲ್ಲಿ 50 ಸಾವಿರ ಅರ್ಹರಿಗೆ ನಿವೇಶನ ಹಂಚಿಕೆ ಮಾಡುವ ಗುರಿ ಹೊಂದಿದೆ. ಸಾಗರ ತಾಲೂಕೊಂದರಲ್ಲೇ ಸುಮಾರು 8 ಸಾವಿರ ಕುಟುಂಬಗಳಿಗೆ ನಿವೇಶನ ಒದಗಿಸುವ ಸಂಕಲ್ಪ ತೊಟ್ಟಿರುವುದಾಗಿ ತಿಳಿಸಿದರು.

ಜನರಿಂದ ಉತ್ತಮ ಸ್ಪಂದನೆ:
ಬೆಳಿಗ್ಗೆ 9 ಗಂಟೆಯಿಂದಲೇ ಸಾವಿರಾರು ಗ್ರಾಮಸ್ಥರು ಸರದಿ ಸಾಲಿನಲ್ಲಿ ನಿಂತು ತಮ್ಮ ಅರ್ಜಿಗಳನ್ನು ಸಲ್ಲಿಸಿದರು. ಭೂಮಿ ಹಕ್ಕುಪತ್ರ, ಕೃಷಿ ಜಮೀನಿಗೆ ಕಾಲುದಾರಿ, ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಅಂಗವಿಕಲರ ವೇತನ, ಭಾಗ್ಯಲಕ್ಷ್ಮಿ ಬಾಂಡ್ ಹಾಗೂ ಅಪಾಯಕಾರಿ ಮರಗಳ ತೆರವು ಸೇರಿದಂತೆ ಹಲವು ಬೇಡಿಕೆಗಳ ಕುರಿತು ಅಹವಾಲುಗಳು ಸ್ವೀಕಾರವಾದವು. ಕಾರ್ಯಕ್ರಮದ ನಡುವೆ ಶಾಸಕರು ರೈತರಿಗೆ ಮೇವಿನ ಬೀಜದ ಕಿಟ್ಗಳನ್ನು ವಿತರಿಸಿದರು.
ವೇದಿಕೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ. ಸಿಇಓ ರಿಷಿ ಆನಂದ್, ಉಪವಿಭಾಗಾಧಿಕಾರಿ ವೀರೇಶ್ ಕುಮಾರ್, ಹೆಚ್ಚುವರಿ ಎಸ್ಪಿ ಬೆನಕಪ್ಪ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಾದ ಡಾ. ಪ್ರತಿಭಾ ಆರ್., ಮೌನೇಶ್, ಸುಜಾತಾ, ನಂದಿನಿ, ಸಂತೋಷಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

