ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ; ವಿದ್ಯಾರ್ಥಿಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಕಿವಿಮಾತು

Written by malnadtimes.com

Published on:

HOSANAGARA | ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆಯುವ ಮಕ್ಕಳಿಗೂ ಇಂದು ಅವಕಾಶಗಳಿಗೆ ಕೊರತೆಯಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಷ್ಟರ ಮಟ್ಟಿಗೆ ಬೆಳೆಯುಷ್ಟು ಅವಕಾಶಗಳಿವೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ವಿದ್ಯಾರ್ಥಿಗಳಿಗೆ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಯ ಈಡಿಗರ ಭವನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳು ಅಧ್ಯಯನಕ್ಕೆ ಮಾತ್ರ ಮಹತ್ವ ನೀಡಬೇಕು. ಮೊಬೈಲ್ ಗೀಳಿಗೆ ಮಕ್ಕಳು ಬಲಿಯಾಗುತ್ತಿದ್ದಾರೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ದೂರು. ಆದರೆ ವೈಜ್ಞಾನಿಕವಾಗಿ ದಿನೇ ದಿನೇ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ತಮ್ಮ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು. ಮೊಬೈಲ್‌ ಅನ್ನು ದೂರುತ್ತಾ ಕುಳಿತರೆ ಫಲವಿಲ್ಲ. ಸದುದ್ದೇಶದೊಂದಿಗೆ ಮಿತವಾಗಿ ಬಳಸಿಕೊಳ್ಳುವ ಜಾಣ್ಮೆಯನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕೆಂದರು.

ಹೊಸನಗರ ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಂಕ ಪಡೆದು ಕಾಲೇಜಿನ ಕೀರ್ತಿ ಪತಾಕೆ ಹಾರಿಸಿದ ವಿದ್ಯಾರ್ಥಿಗಳನ್ನು ಶಾಲಕ ಬೇಳೂರು ಗೋಪಾಲಕೃಷ್ಣ ಸನ್ಮಾನಿಸುತ್ತಿರುವುದು.

ಪೋಷಕರು ತಮ್ಮ ಮಕ್ಕಳ ಯಶಸ್ಸಿನ ಕುರಿತು ಅದೆಷ್ಟೋ ಕನಸು ಕಂಡಿರುತ್ತಾರೆ. ಗುರು-ಹಿರಿಯರು ಸಹಾ ವಿದ್ಯಾರ್ಥಿಗಳ ಒಳಿತನ್ನು ಬಯಸಿರುತ್ತಾರೆ. ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಅದು ಹುಸಿಯಾಗದಂತೆ ನೋಡಿಕೊಳ್ಳುವುದು ಪ್ರತಿ ವಿದ್ಯಾರ್ಥಿಯ ಕೈಯಲ್ಲಿದೆ. ಈ ದಿನಗಳಲ್ಲಿ ಅವಕಾಶಗಳು ವಿಫಲವಾಗಿವೆ. ಬಳಸಿಕೊಂಡಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ಓದಿದ ವಿದ್ಯಾರ್ಥಿಯೂತನ್ನ ಪ್ರತಿಭೆಯನ್ನು ಬಳಸಿಕೊಂಡು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಬಹುದಾಗಿದೆ ಎಂದರು.

ತಹಸೀಲ್ದಾರ್ ಎಚ್.ಜೆ.ರಶ್ಮಿ, ತಾಪಂ ಇಓ ನರೇಂದ್ರಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಂ.ಪಿ.ಸುರೇಶ್, ಸದಸ್ಯರಾದ ರುದ್ರೇಶ್, ಹುಲುಗಾರು ಕೃಷ್ಣಮೂರ್ತಿ, ಲತಾ, ಗ್ಯಾರಂಟಿ ಅನುಷ್ಠಾನ ಸಮಿತಿಯ ಎಚ್.ಬಿ.ಚಿದಂಬರ, ಪಟ್ಟಣ ಪಂಚಾಯಿತಿ ಸದಸ್ಯ ಅಶ್ವಿನಿಕುಮಾರ್, ನಿತ್ಯಾನಂದ, ಗುರುರಾಜ್, ಪ್ರಾಂಶುಪಾಲರಾದ ಸ್ವಾಮಿರಾವ್, ಗಗ್ಗ ಬಸವರಾಜ್, ಸಣ್ಣಕ್ಕಿ ಮಂಜು, ನೇತ್ರಾ ಸುಬ್ರಾಯಭಟ್ ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಮತ್ತಿತರರು ಇದ್ದರು.

Leave a Comment