ಶಿವಮೊಗ್ಗ: ಸಚಿವ ನಾಗೇಂದ್ರ ಅವರು ಈಗಾಗಲೇ ರಾಜೀನಾಮೆ ನೀಡಿದ್ದರೂ, ಬಿಜೆಪಿ ನಾಯಕರು ಬಳ್ಳಾರಿ ಪಾದಯಾತ್ರೆ ನಡೆಸುತ್ತಿರುವುದು ಜನಹಿತಕ್ಕಾಗಿ ಅಲ್ಲ, ಕೇವಲ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಟೀಕಿಸಿದ್ದಾರೆ.
ಸಾಗರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಿಷಯವೇ ಇಲ್ಲದ ಕಾರಣ ಬಿಜೆಪಿ ಪಾದಯಾತ್ರೆ ಹೆಸರಿನಲ್ಲಿ ರಾಜಕೀಯ ನಾಟಕ ಮಾಡುತ್ತಿದೆ ಎಂದು ಆರೋಪಿಸಿದರು.
ನಾಗೇಂದ್ರ ಅವರ ವಿಚಾರದಲ್ಲಿ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ರಾಜೀನಾಮೆಯೂ ಆಗಿದೆ. ಆದರೂ ಅದನ್ನೇ ಮುಂದಿಟ್ಟುಕೊಂಡು ಜನರ ಮುಂದೆ ಗೊಂದಲ ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.
ಬಿಜೆಪಿ ನಾಯಕರಿಗೆ ಜನರ ಸಮಸ್ಯೆಗಳಿಗಿಂತ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಚಿಂತೆಯೇ ಹೆಚ್ಚಾಗಿದೆ. ಅದಕ್ಕಾಗಿ ಪಾದಯಾತ್ರೆ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ರಾಜ್ಯ ಸರ್ಕಾರದ ಜನಪರ ಯೋಜನೆಗಳು ನಿರಂತರವಾಗಿ ಜನರಿಗೆ ತಲುಪುತ್ತಿವೆ. ವಿಶೇಷವಾಗಿ ಗ್ಯಾರಂಟಿ ಯೋಜನೆಗಳ ಮೂಲಕ ಸಾಮಾನ್ಯ ಜನರಿಗೆ ನೇರವಾಗಿ ಅನುಕೂಲವಾಗುತ್ತಿದೆ. ಇದರಿಂದ ಬಿಜೆಪಿ ನಾಯಕರು ರಾಜಕೀಯವಾಗಿ ಅಸಹಾಯಕರಾಗಿದ್ದಾರೆ ಎಂದು ಅವರು ಹೇಳಿದರು.
ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ. ಜನರು ಕಾಂಗ್ರೆಸ್ ಸರ್ಕಾರದ ಕೆಲಸಗಳನ್ನು ಗಮನಿಸುತ್ತಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.

