ಹೊಸನಗರ ; ನಾವು ಎಷ್ಟೇ ದೊಡ್ಡ ರೈತನಿರಬಹುದು ಎಷ್ಟೇ ಶ್ರೀಮಂತರಾಗಿರಬಹುದು ಆದರೆ ವರ್ಷಕ್ಕೊಮ್ಮೆ ಬರುವ ಭೂಮಿ ಹುಣ್ಣಿಮೆ ಹಬ್ಬದಂದು ಭೂ ತಾಯಿಗೆ ಪೂಜೆ ಸಲ್ಲಿಸದಿದ್ದರೆ ಹತ್ತಾರೂ ಜನರಿಗೆ ಅನ್ನದಾನ ಮಾಡದಿದ್ದರೆ ನಾವು ಬೆಳೆದ ಫಸಲಿಗೂ ಬೆಲೆಯಿಲ್ಲ. ನಾವು ರೈತರಾಗಿ ಹುಟ್ಟಿರುವುದೇ ನಶ್ವರ ಎಂದು ರೈತ ರತ್ನಾಕರ್ ಹೇಳಿದರು.

ತಮ್ಮ ಭತ್ತದ ಗದ್ದೆಯಲ್ಲಿ ಇಂದು ಬೆಳಿಗ್ಗೆ ಭೂತಾಯಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಭೂತಾಯಿಗೆ ಬಸಿರ ಬಯಕೆ ತೀರಿಸುವ ದಿನ ಇಂದು ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆಯನ್ನು ಅತ್ಯಂತ ವಿಶೇಷವಾಗಿ ಆಚರಿಸಲಾಗುತ್ತದೆ. ಹಸಿರು ಹೊದ್ದ ಹೊಲ-ಗದ್ದೆಗಳಿಗೆ ಅನ್ನದಾತರು ತೆರಳಿ ವೈವಿಧ್ಯಮಯ ಖಾದ್ಯಗಳನ್ನು ನೈವೇದ್ಯ ಮಾಡುವ ಮೂಲಕ ಭೂರಮೆಯ ಸೀಮಂತವನ್ನು ಸಂಭ್ರಮದಿಂದ ಆಚರಿಸುವುದು ರೂಢಿಯಲ್ಲಿದೆ.

ಒಕ್ಕಲಿಗರು, ಮಡಿವಾಳರು, ಬ್ರಾಹ್ಮಣರು, ರಾಮಕ್ಷತ್ರಿಯರು, ಲಿಂಗಾಯತ ಸೇರಿದಂತೆ ಎಲ್ಲ ರೈತಾಪಿ ವರ್ಗದಲ್ಲಿ ಇಂದು ಭೂಮಿಗೆ ಪೂಜೆ ಸಲ್ಲಿಸುವ ಪದ್ಧತಿ ಇದ್ದು ಭೂಮಿ ಹುಣ್ಣಿಮೆ ಇನ್ನೂ ವಾರವಿರುವಾಗಲೇ ಕೃಷಿಕ ಮಹಿಳೆಯರು ನಾನಾ ಸಿದ್ದತೆಯಲ್ಲಿ ತೊಡಗಿದ್ದು ಬಿದಿರು ಅಥವಾ ಬೆತ್ತದ ಒಂದು ದೊಡ್ಡ ಮತ್ತು ಒಂದು ಸಣ್ಣ ಬುಟ್ಟಿಗೆ ಒಂದು ಪದರ ಗೋವಿನ ಸಗಣಿ ಬಳಿದು ಒಣಗಿಸಿ ನಂತರ ಜೇಡಿ ಮತ್ತು ಕೆಮ್ಮಣ್ಣು ಬಳಿದು ನಂತರ ಅಕ್ಕಿ ರುಬ್ಬಿ ತಯಾರಿಸಿದ ಬಿಳಿ ಬಣ್ಣದಿಂದ ಚಿತ್ತರ ಬಿಡಿಸಿ ಹಚ್ಚಂಬಲಿ ಎಂಬ ವಿಶಿಷ್ಟ ಖಾದ್ಯ ಹಬ್ಬದ ಹಿಂದಿನ ರಾತ್ರಿ ರೈತರ ಮನೆಯ ಮಹಿಳೆಯರು ಭೂಮಿ ತಾಯಿ ಮಡಿಲು ತುಂಬುವ ವಿಧ-ವಿಧದ ಕಜ್ಜಾಯ, ತಿಂಡಿ-ತಿನಿಸು ತಯಾರಿಸುವಷ್ಟರಲ್ಲಿ ಬೆಳಕು ಹರಿಸುತ್ತಾರೆ.

ಅಮಟೆಕಾಯಿ, ಹಾಗಲಕಾಯಿ, ಹರಿವೇ ಸೊಪ್ಪು ಹೀಗೆ 101 ಬಗೆಯ ಸೊಪ್ಪುಗಳನ್ನು ಒಟ್ಟು ಮಾಡಿ ಉಪ್ಪು ಹಾಕದೇ ಬೆರಕೆ ಸೊಪ್ಪು ತಯಾರಿಸಿ ಭೂತಾಯಿಗೆ ಬಳಸಲಾಗುತ್ತದೆ. ಇದು ಹಿಂದಿನ ಸಂಪ್ರದಾಯದಂತೆ ಮಗಳಿಗೆ ಗರ್ಭಧರಿಸಿದಾಗ ಮಾಡುವ ಸೀಮಂತ ಕಾರ್ಯವಾಗಿದ್ದು ಅದೇ ರೀತಿ ಭೂಮಿ ತಾಯಿಗೆ ಸೀಮಂತ ಮಾಡಿ ಬಂದವರಿಗೆ ಉಣ ಬಳಿಸುವ ಸಂಪ್ರದಾಯವಿದ್ದು ಇದನ್ನು ಎಲ್ಲ ರೈತರು ಇಂದು ಭೂಮಿ ಹುಣ್ಣಿಮೆಯ ದಿನ ಹಬ್ಬವಾಗಿ ಆಚರಿಸುತ್ತಾರೆ ಎಂದರು.

ರೈತಾಪಿ ಕುಟುಂಬದ ರತ್ನಾಕರ್ರವರ ಮಕ್ಕಳು ಡಾಕ್ಟರ್, ಪಿಡಿಓ ಹಾಗೂ ಪೊಲೀಸ್ ಇಲಾಖೆಯಲ್ಲಿ ಇದ್ದರೂ ಇವರು ಹಳೆಯ ಸಂಪ್ರದಾಯವನ್ನು ಮರೆಯದೇ ಪ್ರತಿ ವರ್ಷವೂ ಭೂಮಿ ಹುಣ್ಣಿಮೆಯ ಹಬ್ಬದಂದು ಎಲ್ಲರೂ ಒಟ್ಟಿಗೆ ಸೇರಿ ಭತ್ತದ ಗದ್ದೆಯಲ್ಲಿ ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಜೊತೆಗೆ ಬಂದ ಕುಟುಂಬಗಳಿಗೆ ಸಂಬಂಧಿಕರಿಗೆ ಹಾಗೂ ತಮ್ಮ ಆಪ್ತರಿಗೆ ಬೆಳಿಗ್ಗೆಯೇ ಊಟ ಹಾಕುವುದು ಇವರ ಸಂಪ್ರದಾಯವಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.