Balck Pepper Price | ಪ್ರಮುಖ ಸಾಂಬಾರು ಪದಾರ್ಥಗಳಲ್ಲಿ ಒಂದಾದ ಕಾಳುಮೆಣಸು (Black Pepper) ದರ (Price) ಸ್ಥಳೀಯ ಮಾರುಕಟ್ಟೆಯಲ್ಲಿ ಏರಿಕೆಯಾಗಿದ್ದು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಕಪ್ಪು ಬಂಗಾರ (Black Gold) ಎಂದೇ ಕರೆಯಲ್ಪಡುವ ಕಾಳುಮೆಣಸನ್ನು ಮಲೆನಾಡಿನಲ್ಲಿ ಅಡಿಕೆ, ಕಾಫಿ ಬೆಳೆಯೊಂದಿಗೆ ಹೆಚ್ಚಾಗಿ ಬೆಳೆಯಲಾಗುತ್ತದೆ. ಇದೀಗ ಬೆಲೆ ಏರಿಕೆಯ ಹಾದಿಯಲ್ಲಿದ್ದು, ಬೆಳೆಗಾರರಲ್ಲಿ ಹರ್ಷ ತಂದಿದೆ.
ಶನಿವಾರ ಒಂದು ಕೆ.ಜಿ. ಕಾಳುಮೆಣಸಿನ ದರ 660ಕ್ಕೆ ಮಾರಾಟವಾಗಿದ್ದು ಕಳೆದ 6 ವರ್ಷಗಳಲ್ಲಿ ಇದು ಗರಿಷ್ಠ ಧಾರಣೆ ಎನ್ನಲಾಗಿದೆ. 2018ರಲ್ಲಿ ಕೆ.ಜಿ ಕಾಳುಮೆಣಸಿನ ಬೆಲೆ 780-800 ರೂ. ತಲುಪಿತ್ತು.
ಕಾಫಿ ಮತ್ತು ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಬೆಳೆಯಲಾಗುವ ಕಾಳುಮೆಣಸಿಗೆ ಈಚೆಗೆ ವಿಶೇಷ ಆರೈಕೆ ಮಾಡಿದ್ದಕ್ಕೆ ಫಲ ಸಿಗುವ ಭರವಸೆಯಲ್ಲಿದ್ದು, ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ಕಾಳುಮೆಣಸು ಕೊಯ್ಲು ನಡೆಯುತ್ತಿದ್ದಾಗ ಕೆ.ಜಿಗೆ 500ರ ಆಸುಪಾಸಿನಲ್ಲಿದ್ದ ದರ ಈಚೆಗೆ 2 ವಾರಗಳಿಂದ ಸತತ ಏರುಗತಿಯಲ್ಲಿದೆ. 2018ರ ಹಂತಕ್ಕೆ ಬೆಲೆ ತಲುಪುವುದೇ ಎಂಬ ಕುತೂಹಲದಲ್ಲಿದ್ದಾರೆ ಬೆಳೆಗಾರರು.
ವಿಯೆಟ್ನಾಂನಲ್ಲಿ ಪ್ರತಿಕೂಲ ಹವಾಮಾನದ ಕಾರಣ ರೊಬಸ್ಟಾ ಕಾಫಿ ಹಾಗೂ ಕಾಳುಮೆಣಸಿನ ಇಳುವರಿ ಕಡಿಮೆಯಾಗಿದ್ದು ಜಾಗತಿಕ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ಧಾರಣೆ ಏರುತ್ತಿದೆ ಎಂದು ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ವರ್ಷಕ್ಕೆ 70 ಸಾವಿರ ಟನ್ ಕಾಳುಮೆಣಸು ಬೆಳೆಯುತ್ತಿದ್ದು, ಈ ಪೈಕಿ ಶೇ. 50ಕ್ಕೂ ಹೆಚ್ಚು ಕರ್ನಾಟಕದ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಹಾಸನ, ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯಲಾಗುತ್ತದೆ.
2019ರಲ್ಲಿ 2.8 ಲಕ್ಷ ಟನ್‍ಗೂ ಹೆಚ್ಚು ಕಾಳುಮೆಣಸು ಬೆಳೆದಿದ್ದ ವಿಯೆಟ್ನಾಂನಲ್ಲಿ ಈ ವರ್ಷ ಅಂದಾಜು 1.8 ಲಕ್ಷ ಟನ್ ಇಳುವರಿ ಲಭಿಸಿದೆ. ಭಾರತದ ಕಾಳುಮೆಣಸು ಉತ್ತಮ ಗುಣಮಟ್ಟ ಹೊಂದಿದ್ದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟನ್‍ಗೆ 8,000 ಡಾಲರ್ ಬೆಲೆ ಇದೆ. ಬ್ರೆಜಿಲ್‌ನಿಂದ ಸಾಗುವ ಕಾಳುಮೆಣಸಿಗೆ 7,700 ಡಾಲರ್ ಸಿಕ್ಕಿದರೆ, ವಿಯೆಟ್ನಾಂ ಮೆಣಸಿಗೆ 6,500 ಡಾಲರ್ ಮತ್ತು ಮಲೇಷ್ಯಾ ಮೆಣಸಿಗೆ 4,900 ಡಾಲರ್ ಬೆಲೆ ಇದೆ.
ಕಡಿಮೆ ಬಂಡವಾಳ, ಹೆಚ್ಚು ಲಾಭ !
ಕಾಳುಮೆಣಸು ಬೆಳೆಗೆ ಕೇವಲ ಭಾರತದ ಮಾರುಕಟ್ಟೆಯಲ್ಲ, ವಿದೇಶಿ ಮಾರುಕಟ್ಟೆಗಳಲ್ಲಿ ಕೂಡ ಉತ್ತಮ ಬೇಡಿಕೆ ಇದೆ. ಇದು ಬಹುಪಯೋಗಿ ವಸ್ತುವಾಗಿದ್ದು, ಕೇವಲ ಸಾಂಬಾರು ಅಲ್ಲದೇ ಔಷಧಿ ಗುಣವುಳ್ಳ ಪದಾರ್ಥವಾಗಿದೆ. ಕಡಿಮೆ ಬಂಡವಾಳ, ವೆಚ್ಚದಲ್ಲಿ ಹೆಚ್ಚಿನ ಲಾಭ, ಆದಾಯವನ್ನು ತಂದುಕೊಂಡುತ್ತದೆ. ಆರ್ಥಿಕವಾಗಿ ರೈತರಿಗೆ ಲಾಭ ನೀಡುವ ಬೆಳೆಯಾಗಿದೆ. ಮಲೆನಾಡು ಪ್ರದೇಶದ ವಾತಾವರಣಕ್ಕೆ ಕಾಳುಮೆಣಸು ಸೂಕ್ತ ಬೆಳೆಯಾಗಿದೆ. ಹವಾಮಾನಕ್ಕೆ ತಕ್ಕಂತೆ ಕಾಳುಮೆಣಸು ಬಳ್ಳಿಯ ನಾಟಿ, ಅಭಿವೃದ್ಧಿ, ಕಟಾವು ಮಾಡಬೇಕು. ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಕೀಟಬಾಧೆ, ರೋಗದಿಂದ ತಡೆಗಟ್ಟಲು ಔಷಧಿ ಸಿಂಪಡಣೆ ಮಾಡಬೇಕು. ಕೀಟ ಹಾಗೂ ರೋಗಗಳ ಕುರಿತು ಅಗತ್ಯ ಮಾಹಿತಿಯೊಂದಿಗೆ ಕಾಲಕಾಲಕ್ಕೆ ನಿರ್ವಹಣೆ ಮಾಡಬೇಕು.
Read More