– ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಪುನರ್ಚೇತನಗೊಂಡ 458ನೇ ಚಿಪ್ಪಿಗರ ಕೆರೆ.
– ಕಾಮಗಾರಿ ನಡೆದ ಅವಧಿ ಫೆಬ್ರುವರಿ 23 ರಿಂದ ಮಾರ್ಚ್ 23ರವರೆಗೆ.
– ಕೆರೆ ಹೂಳೆತ್ತಿದ್ದ ಪ್ರಮಾಣ 4774 ಘನ ಮೀಟರ್
– ಗ್ರಾಮ ಅಭಿವೃದ್ಧಿ ಸಂಸ್ಥೆಯ ಅನುದಾನ ₹ 7 ಲಕ್ಷ.
– ಗ್ರಾಮಸ್ಥರ ಸಹಭಾಗಿತ್ವ ₹ 6 ಲಕ್ಷ. ಹೂಳೆತ್ತಲು ತಗುಲಿದ ಒಟ್ಟು ವೆಚ್ಚ ₹13 ಲಕ್ಷ.
– ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಗವಟೂರು ಗ್ರಾಮದಲ್ಲಿ ಪುನಶ್ಚೇತನಗೊಂಡ
ಚಿಪ್ಪಿಗರ ಕೆರೆ.
– ಅವನತಿಯತ್ತ ಪುರಾತನ ಜಲಮೂಲ. ಇದು ಮುಂದಿನ ಪೀಳಿಗೆಯ ಆಸ್ತಿ, ರಕ್ಷಣೆ ಗ್ರಾಮ ಆಡಳಿತದ ಹೊಣೆ.
ರಿಪ್ಪನ್‌ಪೇಟೆ ; ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಪಟ್ಟಣದ ಹೊಸನಗರ ರಸ್ತೆಯ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಚಿಪ್ಪಿಗರ ಕೆರೆ ಕೇವಲ ಎರಡು ವರ್ಷದ ಹಿಂದೆ ಸಂಪೂರ್ಣ ಹೂಳೆತ್ತುವ ಮೂಲಕ ಸ್ವಚ್ಛಗೊಂಡು ಗ್ರಾಮದ ಕೊಳವೆಬಾವಿ, ತೆರೆದ ಬಾವಿಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಿ ಕಡು ಬೇಸಿಗೆಯಲ್ಲಿ ನೀರಿನ ಬವಣೆ ನೀಗಿಸಿತ್ತು. ಈ ಉತ್ತಮ ಕಾರ್ಯಕ್ಕೆ ಸ್ಥಳೀಯ ಗ್ರಾಮಾ ಅಭಿವೃದ್ಧಿ ಸಂಸ್ಥೆಯ ಸ್ವ- ಸಹಾಯ ಗುಂಪುಗಳು, ಗ್ರಾಮಸ್ಥರು ಹಾಗೂ ಗ್ರಾಮ ಆಡಳಿತದ ಸಹಕಾರದಲ್ಲಿ ಸಂಪೂರ್ಣ ಅಭಿವೃದ್ಧಿಯು ಕಂಡಿತ್ತು. ಯೋಜನೆಯ ಸಾಪಲ್ಯಕ್ಕೆ ಅಡ್ಡಿಯಾದ ಚರಂಡಿ ತ್ಯಾಜ್ಯ. ಸುಂದರವಾಗಿ ಕಂಗೊಳಿಸುತ್ತಿದ್ದ ಈ ಕೆರೆ ಏರಿ ದಂಡೆಯ ಮೇಲೆ ವಾಯು ವಿಹಾರ ಮಾಡಲು ಅನುಕೂಲ ಆಗುವಂತೆ ಸುಮಾರು ₹ 3 ಲಕ್ಷ ವೆಚ್ಚ ಮಾಡಿ ಸುತ್ತಲು ಹಾಸುಕಲ್ಲು ಹಾಕಿ, ಮಕ್ಕಳ ಆಟಕ್ಕೆ ಜಾರುಬಂಡಿ, ಜೋಕಾಲಿ, ಇತರೆ ಚಿಕ್ಕ ಪುಟ್ಟ ಆಟಿಕೆಗಳ ಆಟ ಸಾಮಾಗ್ರಿಗಳನ್ನು ಅಳವಡಿಸಿ, ಸುಂದರ ಕೈತೋಟ ನಿರ್ಮಿಸಿ, ವಿದ್ಯುತ್ ದೀಪಗಳನ್ನು ಅಳವಡಿಸಿತ್ತು. ವಾಯು ವಿಹಾರಕ್ಕೆ ಬಂದಂತವರಿಗೆ , ದಣಿವಾರಿಸಿಕೊಳ್ಳಲು ತಂಗುದಾಣ ಸಹ ನಿರ್ಮಿಸಿತ್ತು.

ಜನವಸತಿ ಪ್ರದೇಶಕ್ಕೆ ಪ್ರಮುಖ ಅಂತರ್ಜಲ ಹೆಚ್ಚಳಕ್ಕೆ ಮೂಲವಾಗಿತ್ತು. ಅಂದಿನ ಆ ಸಮುದಾಯದ ಪ್ರಯತ್ನ ಮತ್ತು ಅಭಿವೃದ್ಧಿ ಬೆಂಬಲದಿಂದ ತನ್ನ ಹಿಂದಿನ ಗತ ವೈಭವ ಕೆರೆ ಪುನಃ ಸ್ಥಾಪಿಸಿಕೊಂಡಿತ್ತು. ಸ್ಥಳೀಯರಿಗೆ ಹಾಗೂ ಜನಜಾನುವಾರುಗಳಿಗೆ ಜಲಚರ ಪ್ರಾಣಿಗಳಿಗೆ ಶುದ್ಧ ಮತ್ತು ವಿಶ್ವಾಸಾರ್ಹ ನೀರಿನ ಮೂಲ ಸಿಕ್ಕ ಸಂತೃಪ್ತಿ ದೊರೆತಿತ್ತು. ಆದರೆ, ಈ ವರ್ಷದ ಆರಂಭದ ಮಳೆಗಾಲವು ಈ ಎಲ್ಲಾ ಆಶಯಗಳಿಗೂ ಕಳಪೆ ಚರಂಡಿ ಕಾಮಗಾರಿ ತಿಲಾಂಜಲಿ ಇಟ್ಟಿದೆ.
ಸ್ಥಳೀಯ ಗ್ರಾಮ ಆಡಳಿತ ಕೆರೆಗೆ ಕಲುಷಿತ ನೀರು ಸೇರದಂತೆ ಪ್ರತ್ಯೇಕವಾಗಿ ಚರಂಡಿ ನೀರು ಹೊರಹೋಗುವಂತೆ ಮಾಡಿದ ಲಕ್ಷಾಂತರ ರೂ. ವೆಚ್ಚದ ಯೋಜನೆಯ ಕಳಪೆ ಕಾಮಗಾರಿಯ ಬಣ್ಣ ಬಯಲು ಮಾಡಿದೆ. ಹಾಲಿ ಪಾರ್ಕ್ ಹಾಳು ಬಿದ್ದಿದೆ. ಕೆರೆಯ ಸುತ್ತಲೂ ಗಿಡಗಂಟಿಗಳಿಂದ ತುಂಬಿ ತುಳುಕುತ್ತಿದೆ. ಈ ಮೂಲಕ ಪಟ್ಟಣದ ಎಲ್ಲಾ ಮೂಲಗಳಿಂದ ಹರಿದು ಬರುವ ತ್ಯಾಜ್ಯದ ಹಾಗೂ ಸಾರ್ವಜನಿಕ ಶೌಚಾಲಯ ತ್ಯಾಜ್ಯದ ನೀರು ಸೇರ್ಪಡೆಗೊಂಡು ಕೆರೆಯನ್ನು ಕಲುಷಿತಗೊಳಿಸಿದೆ ಮತ್ತು ಆಡಳಿತ ನಿರ್ವಹಣೆಯಲ್ಲಿನ ತೀವ್ರ ಲೋಪಗಳನ್ನು ಬಟಾಬಯಲು ಮಾಡಿದೆ.

ಒಟ್ಟಾರೆ ಸುತ್ತಮುತ್ತಲಿನ ಪ್ರದೇಶದ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ವಸತಿ ವಲಯಗಳ ಇತರೆ ಕಸ ಕಡ್ಡಿ, ಕಲ್ಮಶಗಳು ನೇರ ಕೆರೆ ಒಡಲು ಸೇರಿ ನೀರು ಸಂಪೂರ್ಣ ಕಲುಷಿತಗೊಂಡಿದೆ. ಈ ನೀರು ಬಳಸಿದ ಜಾನುವಾರು, ಪ್ರಾಣಿ,ಪಕ್ಷಿ ಸಂಕುಲಗಳಲ್ಲಿ ರೋಗ ರುಜಿನ ಹರಡುವ ಭೀತಿ ನಾಗರಿಕರನ್ನು ಕಾಡುತ್ತಿದೆ.
ಕೇವಲ ಅಧಿಕಾರಕ್ಕೆ ಹಪಾಹಪಿಸುವ ಚುನಾಯಿತ ಪ್ರತಿನಿಧಿಗಳು ನಾಗರಿಕರ ಕುಂದು-ಕೊರತೆ, ಆರೋಗ್ಯಗಳ ಕಡೆ ಕಿಂಚಿತ್ತು ಕಾಳಜಿ ಇಲ್ಲದಿರುವುದು ಜನ ಸಾಮಾನ್ಯರ ದೌರ್ಭಾಗ್ಯವೇ ಸರಿ.
ಪರಿಸರ ಕಾಳಜಿ, ಕೆರೆ ಸಂರಕ್ಷಣೆಯ ಅರಿವು ಇಲ್ಲದೆ ಸ್ಥಳೀಯ ಗ್ರಾಮ ಆಡಳಿತದ ಕಣ್ಣಿದ್ದು ಕುರುಡರಂತ ವರ್ತನೆ ತೀವ್ರ ಕಳವಳಕಾರಿ. ಆಡಳಿತ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
– ಟಿ.ಆರ್ ಕೃಷ್ಣಪ್ಪ, ಸಾಮಾಜಿಕ ಹೋರಾಟಗಾರ
ನೈಸರ್ಗಿಕ ಸಂಪನ್ಮೂಲದ ಈ ಜಲಮೂಲ ಪೂರ್ವಜರ ಕೊಡುಗೆ. ಸ್ಥಳೀಯ ಜನರ ಅಗತ್ಯ. ಇದನ್ನು ಸಂರಕ್ಷಿಸುವ ನಿಟ್ಟಿನಲ್ಲಿ ತುರ್ತು ಗಮನಹರಿಸಬೇಕು.
– ಹನೀಫ್, ಸಾಮಾಜಿಕ ಕಾರ್ಯಕರ್ತ
ಕೆರೆಗೆ ಚರಂಡಿಯ ತ್ಯಾಜ್ಯದ ನೀರಿನ ಹರಿವು ತಡೆಯಲು ತಕ್ಷಣವೇ ತಡೆಗೋಡೆ ನಿರ್ಮಿಸಿ, ಪರಿಸರ ಸಮತೋಲನ ಪುನಃಸ್ಥಾಪಿಸಿ, ನಿಯಮಿತ ಮೇಲ್ವಿಚಾರಣೆ ಮತ್ತು ಸುಚಿತ್ವದ ಕಡೆಗೆ ಗಮನ ಹರಿಸಬೇಕು. ಕೆರೆಯು ಮತ್ತೊಮ್ಮೆ ಬದಲಾಯಿಸಲಾಗದ ದುರಸ್ತಿಗೆ ಬೀಳಬಹುದು. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆಯಂತೆ ಸಾರ್ವಜನಿಕ ಹಣ ಮಾತ್ರವಲ್ಲ ಸ್ಥಳೀಯ ಸಮುದಾಯದ ಮುಂದಿನ ಪೀಳಿಗೆಯ ಭವಿಷ್ಯವೂ ಈ ಜಲ ಮೂಲದಲ್ಲಿ ಅಡಕವಾಗಿದೆ. ವ್ಯರ್ಥ ಕಾಲಹರಣ ಮಾಡದೆ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಲಿ ಎಂಬುದು ಸ್ಥಳೀಯರ ಒತ್ತಾಯ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.