ರಿಪ್ಪನ್ಪೇಟೆ ; ಅಂಧರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಭಾರತದ ಮಹಿಳಾ ಅಂಧರ ಕ್ರಿಕೆಟ್ ತಂಡ ಮೊದಲ ಬಾರಿಗೆ ಮುಡಿಗೇರಿಸಿಕೊಂಡಿದೆ.
ಭಾನುವಾರ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ರೋಚಕ ಫೈನಲ್ನಲ್ಲಿ ದೀಪಿಕಾ ಟಿ.ಸಿ. ಅವರ ನಾಯಕತ್ವದ ಭಾರತ ತಂಡ ನೇಪಾಳವನ್ನು 7 ವಿಕೆಟ್ಗಳಿಂದ ಮಣಿಸುವ ಮೂಲಕ ಐತಿಹಾಸಿಕ ಜಯ ಸಾಧಿಸಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಭಾರತ ತಂಡ ನೇಪಾಳವನ್ನು 114/5 ರನ್ಗಳಿಗೆ ಸೀಮಿತಗೊಳಿಸಿದ ಬಳಿಕ ಕೇವಲ 12 ಓವರ್ಗಳಲ್ಲಿ 117/3 ರನ್ ಬಾರಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ವಿಶೇಷವೆಂದರೆ ಮುಂಬೈನಲ್ಲಿ ಮಹಿಳಾ ವಿಶ್ವಕಪ್ 2025 ಗೆದ್ದು ಕೇವಲ ಮೂರು ವಾರಗಳಲ್ಲಿ ಮತ್ತೊಂದು ವಿಶ್ವಕಪ್ ಇದು ಭಾರತೀಯ ಮಹಿಳಾ ಕ್ರಿಕೆಟ್ ವಲಯಕ್ಕೆ ದ್ವಿಗುಣ ಗೌರವ ತಂದುಕೊಟ್ಟಿದೆ.

ಗಮನ ಸೆಳೆದ ರಿಪ್ಪನ್ಪೇಟೆಯ ಕಾವ್ಯಾ ವಿ ;
ಈ ಜಯಶೀಲ ವಿಶ್ವಕಪ್ ತಂಡದಲ್ಲಿ ಕರ್ನಾಟಕದಿಂದ ಮೂವರು ಆಟಗಾರ್ತಿಯರು ಆಯ್ಕೆಯಾಗಿದ್ದು, ಅವರಲ್ಲಿ ರಿಪ್ಪನ್ಪೇಟೆಯ ಪ್ರತಿಭೆ ಕಾವ್ಯಾ ವಿ ತನ್ನ ಆಲ್ರೌಂಡರ್ ಸಾಮರ್ಥ್ಯದಿಂದ ತಂಡದ ಗೆಲುವಿಗೆ ಕೈಜೋಡಿಸಿದ್ದಾರೆ. 7 ಪಂದ್ಯಗಳ ವಿಶ್ವಕಪ್ ಶ್ರೇಣಿಯಲ್ಲಿ 3 ಪಂದ್ಯಗಳಲ್ಲಿ ಅವರು ಆಟವಾಡಿರುವುದು ಗಣನೀಯ.

ಕಾವ್ಯಾ ವಿ ರಿಪ್ಪನ್ಪೇಟೆಯ ಬರುವೆ ಗ್ರಾಮದ ಆಚಾರ್ ಕೇರಿ ನಿವಾಸಿಗಳಾದ ಜಯಮ್ಮ ವೆಂಕಟೇಶ್ ಆಚಾರ್ ದಂಪತಿಯ ಪುತ್ರಿ. 4ನೇ ತರಗತಿಯವರೆಗೂ ಪಟ್ಟಣದ ಬರುವೆ ಶಾಲೆಯಲ್ಲಿ ವ್ಯಾಸಂಗ ಮಾಡಿದ ಕಾವ್ಯಾ ದೃಷ್ಟಿಯಲ್ಲಿ ಸಮಸ್ಯೆಯುಂಟಾದ ಕಾರಣ ಶಿವಮೊಗ್ಗದ ಗೋಪಾಲ ಬಡಾವಣೆಯ ಶಾರದ ಅಂಧರ ಶಾಲೆಯಲ್ಲಿ 2009–2015 ರವರೆಗೆ ಶಿಕ್ಷಣ ಪಡೆದರು. ಬಳಿಕ ಬೆಂಗಳೂರಿನ ಸಮರ್ಥನಂ ಅಂಧರ ವಿಕಾಸ ಕೇಂದ್ರದಲ್ಲಿ ಬಿ.ಎ ಪದವಿ ಪೂರೈಸಿ ಪ್ರಸ್ತುತ ಜ್ಞಾನಭಾರತಿ ಎಜುಕೇಶನ್ ಸೊಸೈಟಿಯಲ್ಲಿ ಎಂ.ಎ ವ್ಯಾಸಂಗ ಮಾಡುತ್ತಿದ್ದಾರೆ.

ಕಾವ್ಯಾಳ ಕ್ರೀಡಾ ಜೀವನಕ್ಕೆ ಶಿವಮೊಗ್ಗದ ಅಂಧರ ವಿಕಾಸ ಕೇಂದ್ರದ ಶಿಕ್ಷಕರಾದ ಸುರೇಶ್ ಹಾಗೂ ಈಶ್ವರ್ ನೀಡಿದ ಪ್ರೇರಣೆ ಮತ್ತು ಮಾರ್ಗದರ್ಶನ ಮಹತ್ತರವಾದದ್ದು. ಜೊತೆಗೆ ಬೆಂಗಳೂರಿನ ಶಿಕಾ ಶೆಟ್ಟಿ ಮತ್ತು ಚಂದು ನೀಡಿದ ಕೋಚಿಂಗ್ ಅವರ ಆಟಕ್ಕೆ ಬಲ ತುಂಬಿದೆ. ಜ್ಞಾನಭಾರತಿ ಎಜುಕೇಶನ್ ಸೊಸೈಟಿಯ ಸಹಕಾರವು ಸಹ ಕಾವ್ಯಾಳ ಕ್ರೀಡಾ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವಹಿಸಿದೆ.

5 ಹೆಣ್ಣುಮಕ್ಕಳ ಬಡ ಕುಟುಂಬದಲ್ಲಿ ಬೆಳೆಯುತ್ತಿದ್ದ ಕಾವ್ಯಾ ವಿಶ್ವಕಪ್ ನಲ್ಲಿ ಭಾರತ ಸಾಧಿಸಿದ ಅಭೂತಪೂರ್ವ ಜಯದಲ್ಲಿ ಹಂಚಿಕೊಂಡ ಪಾತ್ರಕ್ಕಾಗಿ ಇದೀಗ ರಾಜ್ಯದ ಮಟ್ಟದಲ್ಲೂ, ದೇಶದ ಮಟ್ಟದಲ್ಲೂ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





